ಪರೀಕ್ಷಾ ಪರ್ವ: ಪಾಸಾಗುವುದು ಸುಲಭ, ಫೇಲಾಗುವುದು ಕಷ್ಟ

Update: 2019-02-14 18:36 GMT

ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟವೆಂಬ ಭಾವನೆ ಹಲವರಲ್ಲಿದೆ. ಗಣಿತ, ವಿಜ್ಞಾನ ಕಷ್ಟ, ಸಮಾಜ ವಿಜ್ಞಾನ ಅಗಾಧ, ಕನ್ನಡ ಮಾಧ್ಯಮದವರಿಗೆ ಆಂಗ್ಲ ಭಾಷೆಯೂ ಅದೇ ರೀತಿ ಆಂಗ್ಲ ಮಾಧ್ಯಮದವರಿಗೆ ಕನ್ನಡ ಭಾಷೆ ಕಷ್ಟವೆಂಬ ಭಾವನೆ ಇದೆ. ಕೆಲವೊಮ್ಮೆ ಹಿರಿಯ ವಿದ್ಯಾರ್ಥಿಗಳು ಯಾವುದನ್ನು ಕಷ್ಟವೆಂದು ಸಾರಿದ್ದಾರೋ ಅದುವೇ ನಮಗೆ ತಲೆತಲಾಂತರದಿಂದ ಕಷ್ಟವೆಂಬ ಭಾವನೆಯನ್ನು ಮೂಡಿಸಿರಲೂಬಹುದು. ಕೆಲವು ವಿಷಯಗಳು ಕೆಲವರಿಗೆ ಕಷ್ಟ ಅಥವಾ ಸುಲಭ ಇಲ್ಲವೇ ಸಾಧಾರಣ ಎಂದು ಅನಿಸುತ್ತದೆ. ಆದರೆ ಉತ್ತೀರ್ಣವಾಗಲು ಬೇಕಾದ ಶೇ.35 ಅಂಕ ಪಡೆಯುವುದು ಬಲು ಕಷ್ಟವೇನಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಸುಲಭ, ಮಧ್ಯಮ ಹಾಗೂ ಕಠಿಣ ಪ್ರಶ್ನೆಗಳು ಅಡಕವಾಗಿರುತ್ತದೆ. ಪರೀಕ್ಷೆಯ ಅಂತಿಮ ಉದ್ದೇಶ ವಿದ್ಯಾರ್ಥಿಗಳು ಪಾಸಾಗಬೇಕೆಂಬುದೇ ಹೊರತು ನಪಾಸಾಗಬೇಕೆಂಬುದಲ್ಲ. ನಿಧಾನ ಕಲಿಕೆಯ ವಿದ್ಯಾರ್ಥಿಗಳಿಗೂ ಉತ್ತರಿಸಬಹುದಾದ ಪ್ರಶ್ನೆಗಳು ಎಲ್ಲಾ ವಿಷಯಗಳ ಪ್ರಶ್ನೆ ಪತ್ರಿಕೆ ಗಳಲ್ಲಿ ಇರಬೇಕೆಂಬುದು ಆಶಯವಾಗಿದೆ.
 ಓರ್ವ ವಿದ್ಯಾರ್ಥಿ ಪಾಸಾಗಬೇಕೆಂಬ ಬಲವಾದ ಛಲವನ್ನು ಹೊಂದಿದ್ದರೆ ಪಾಸಾಗುವುದು ಸುಲಭ. ಫೇಲಾಗಬೇಕಾದರೆ ಆತ ಪರೀಕ್ಷೆಯನ್ನು ನಿರ್ಲಕ್ಷಿಸಬೇಕು, ಸಮಯವನ್ನು ಉದ್ದೇಶ ಪೂರ್ವಕವಾಗಿ ವ್ಯರ್ಥ ಮಾಡಬೇಕು, ಸಂಬಂಧವಿಲ್ಲದ ಉತ್ತರ ಬರೆಯಬೇಕು, ಪರೀಕ್ಷಾ ಕೊಠಡಿಯಲ್ಲಿ ವ್ಯಥಾ ಕಾಲಹರಣ ಮಾಡಬೇಕು. ಇದು ಕಷ್ಟಕರವಾದ ವಿಷಯ. ಇವುಗಳಿಗಿಂತ ಪಾಸಾಗುವುದೇ ಸುಲಭದ ದಾರಿಯಾಗಿದೆ. ಪ್ರಶ್ನೆ ಪತ್ರಿಕೆ ನೀಡಿದ ಮೊದಲ 15 ನಿಮಿಷ ಸರಿಯಾಗಿ ಪ್ರಶ್ನೆ ಪತ್ರಿಕೆಯನ್ನು ಅವಲೋಕಿಸಿ. ಅದರಲ್ಲಿನ ಹಲವು ಪ್ರಶ್ನೆಗಳಿಗೆ ನಿಮಗೆ ಉತ್ತರ ಗೊತ್ತಿರುತ್ತದೆ. ಇನ್ನು ಕೆಲವು ಸಾಧಾರಣ ಗೊತ್ತಿರುವ ಪ್ರಶ್ನೆಗಳು ಬರಬಹುದು. ಕೆಲವೇ ಕೆಲವು ಪ್ರಶ್ನೆಗಳು ನಿಮಗೆ ಗೊತ್ತಿಲ್ಲದಿರಬಹುದು. ಅಥವಾ ಎಲ್ಲವೂ ನಿಮಗೆ ಗೊತ್ತಿದ್ದೇ ಆಗಿರಬಹುದು. ಕ್ರಮಬದ್ಧವಾಗಿ ಎಲ್ಲದಕ್ಕೂ ಉತ್ತರಿಸುತ್ತಾ ಹೋಗಿ. ಸರಿಯಾಗಿ ಪ್ರಶ್ನೆ ಸಂಖ್ಯೆಗಳನ್ನು ನಮೂದಿಸಿ. ಬರೆಯುವುದನ್ನು ಅಚ್ಚು ಕಟ್ಟಾಗಿ ಬರೆಯಿರಿ. ಸುದೀರ್ಘ ಉತ್ತರದಲ್ಲಿರುವ ಅಂಶಗಳನ್ನು ಬರೆದು ಅಡಿಗೆರೆ ಹಾಕಿ ಎದ್ದು ಕಾಣುವಂತೆ ಬರೆಯಿರಿ. ನಿಮ್ಮ ಉತ್ತರ ಕ್ರಮಬದ್ಧವಾಗಿಯೂ ಆಕರ್ಷಕವಾಗಿಯೂ ಇರಲಿ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿ. ಚಿತ್ರ-ನಕಾಶೆ-ರೇಖಾ ಚಿತ್ರಗಳನ್ನು ಸಾಧ್ಯವಾದಷ್ಟು ಅಂದವಾಗಿ ಬಿಡಿಸಿ. ಪರೀಕ್ಷೆ ಮುಗಿದ ಮೇಲೆ ಈಗಾಗಲೇ ಮುಗಿದ ಪರೀಕ್ಷೆಯ ಬಗ್ಗೆ ಚಿಂತೆ ಮಾಡಬೇಡಿ. ಏನಿದ್ದರೂ ಮುಂದಿನ ಪರೀಕ್ಷೆಯ ಬಗ್ಗೆ ತಯಾರಿ ನಡೆಸಿ. ಹೀಗಾದರೆ ಪಾಸಾಗುವುದು ನಿಮಗೆ ಸುಲಭವಾಗುತ್ತದೆ.

Writer - ಎ. ಆರ್. ಅನಂತಾಡಿ

contributor

Editor - ಎ. ಆರ್. ಅನಂತಾಡಿ

contributor

Similar News