ಪುಲ್ವಾಮ ದಾಳಿ ಹಿನ್ನೆಲೆ: ಮೊದಲ ಬಾರಿ ಸರ್ವ ಪಕ್ಷಗಳ ಸಭೆ ಕರೆದ ಮೋದಿ

Update: 2019-02-15 17:43 GMT

ಹೊಸದಿಲ್ಲಿ, ಫೆ. 15: ನಲ್ವತ್ತು ಯೋಧರ ಸಾವಿಗೆ ಹಾಗೂ ಹಲವರು ಗಂಭೀರ ಗಾಯಗೊಳ್ಳಲು ಕಾರಣವಾದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ವಾಹನಗಳ ಮೇಲೆ ಗುರುವಾರ ನಡೆದ ಭಯೋತ್ಪಾದಕ ದಾಳಿ ಬಗ್ಗೆ ಆಡಳಿತಾರೂಢ ಎನ್‌ಡಿಎ ಸರ್ವ ಪಕ್ಷಗಳ ಸಭೆ ಕರೆದಿದೆ. ಈ ಸಭೆ ಶನಿವಾರ ನಡೆಯಲಿದೆ.

ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಕರೆಯುತ್ತಿರುವ ಮೊದಲ ಸಭೆ ಇದಾಗಿದೆ. ಭಾರತದ ಮುಂದಿನ ನಡೆಯ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಪಠಾಣ್‌ಕೋಟ್, ಉರಿ ಹಾಗೂ ನಾಗ್ರೋಟ ಭಯೋತ್ಪಾದಕ ದಾಳಿಯನ್ನು ಗಮನಿಸಿದರೆ ಆಡಳಿತಾರೂಢ ಪಕ್ಷ ಇದೇ ಮೊದಲ ಬಾರಿಗೆ ಭಾರತ ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತ ಒಮ್ಮತ ರೂಪಿಸಲು ಪ್ರಯತ್ನಿಸಲಿದೆ.

ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ 2016 ಸೆಪ್ಟಂಬರ್‌ನಲ್ಲಿ ಆಡಳಿತ ಪಕ್ಷ ಸರ್ವಪಕ್ಷಗಳ ಸಭೆ ಕರೆದಿತ್ತು. ಆದರೆ ಈ ಸಭೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ ಬಗ್ಗೆ ಸರ್ವ ಪಕ್ಷಗಳಿಗೆ ತಿಳಿಸಲು ಸರಕಾರ ನಿರ್ಧರಿಸಿತ್ತು. ಇದು ಕೇವಲ ಮಾಹಿತಿ ನೀಡಿರುವುದೇ ಹೊರತು, ಸಮಾಲೋಚನೆ ಆಗಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News