‘‘ಉಪವಾಸ ನಿಲ್ಲಿಸುತ್ತೇನೆ, ದೈವೇಚ್ಛೆ ಈಡೇರಲಿ’’

Update: 2019-02-16 07:11 GMT

ಗಾಂಧೀಜಿ ಮನು ಗಾಂಧಿಯನ್ನು ಹತ್ತಿರ ಬರಲು ಸಂಜ್ಞೆ ಮಾಡಿದರು. ‘‘ನನ್ನ ಉಪವಾಸ ಸತ್ಯಾಗ್ರಹ ನಿಲ್ಲಿಸುತ್ತೇನೆ. ದೈವೇಚ್ಛೆ ಈಡೇರಲಿ’’. ಅಲ್ಲಿದ್ದವರ ಹೃದಯದಲ್ಲೆಲ್ಲ ಸಂತೋಷದ ಬುಗ್ಗೆ ಉಕ್ಕಿ ಹರಿಯಿತು. ಸಣ್ಣ ಕಲ ಕಲ ಧ್ವನಿ ಕೊಠಡಿ ತುಂಬಿತು. ಸದ್ದಡಗಿದ ಮೇಲೆ ಗಾಂಧೀಜಿ ಗೀತೆ, ಬೌದ್ಧ ಮಂತ್ರ, ಕುರ್‌ಆನ್, ಬೈಬಲ್, ಸಿಖ್ ಗ್ರಂಥ ಸಾಹೀಬ್, ಪಾರ್ಸಿಕರ ‘ಮಝ್ದ’ಯಿಂದ ಪ್ರಾರ್ಥನಾ ಶ್ಲೋಕ, ಮಂತ್ರ... ಓದಿದರು.

ಗಾಂಧೀಜಿಯ ಉಪವಾಸ ಪಾಕಿಸ್ತಾನದಲ್ಲಿ ಪ್ರಚಂಡ ಸದ್ಭಾವನಾ ಮಹಾಪೂರವನ್ನೇ ಹರಿಸಿತು. ಲಾಹೋರ್‌ನಿಂದ ಗಾಂಧೀಜಿಗೆ ಒಂದು ತಾರ್ ವರ್ತಮಾನ ಬಂತು:
‘‘ಇಲ್ಲಿ ಎಲ್ಲರೂ ಕೇಳುತ್ತಿರುವ ಪ್ರಶ್ನೆ ಒಂದೇ: ‘ಗಾಂಧೀಜಿಯ ಪ್ರಾಣವನ್ನು ಹೇಗೆ ಉಳಿಸೋಣ’ ಪಾಕಿಸ್ತಾನದ ಪ್ರತಿಯೊಂದು ಮಸೀದಿಯಲ್ಲೂ ಗಾಂಧೀಜಿಯ ಪ್ರಾಣ ಉಳಿಸಿ ಎಂದು ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಮಹಿಳೆಯರು ‘ಅಲ್ಲಾಹ’ನನ್ನು ಗಾಂಧೀಜಿಯ ಪ್ರಾಣ ಉಳಿಸಬೇಕೆಂದು ಬೇಡಿಕೊಂಡರು. ಜಿನ್ನಾ ಸಹಿತ ಗಾಂಧೀಜಿಯ ಪರಮೋತ್ಕೃಷ್ಟ ತ್ಯಾಗವನ್ನು ಮೆಚ್ಚಿ ಕೃತಜ್ಞತೆ ಸಲ್ಲಿಸಿದರು. ಭಾರತೀಯ ಮುಸ್ಲಿಮರಂತೂ, ತಮ್ಮ ಕ್ಷೇಮ ಗಾಂಧೀಜಿಯ ಕೈಯಲ್ಲಿ ಸುಕ್ಷೇಮ- ಯೋಗ ಕ್ಷೇಮಂ ವಹಾಮ್ಯಹಂ ಎಂದು ನಂಬಿ ಅವರು ಜೀವಂತ ಉಳಿಯಬೇಕೆಂದು ಬಯಸಿದರು; ಹೃತ್ಪೂರ್ವಕ ಪ್ರಾರ್ಥಿಸಿದರು.
ಅದೇನು ಪವಾಡವೋ! ದಿಲ್ಲಿಯಲ್ಲಿ ಹಿಂದೂ-ಮುಸ್ಲಿಂ ಮಾರಣಹೋಮ ಸ್ತಬ್ಧವಾಯಿತು. ದಿಲ್ಲಿಯ ಧಾರ್ಮಿಕ ಮುಖಂಡರು- ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಪಾರ್ಸಿ... ದಿಲ್ಲಿಯಲ್ಲಿ ಕೋಮುಸೌಹಾರ್ದವನ್ನು ಕಾಪಾಡಿಕೊಂಡು ಹೋಗುತ್ತೇವೆಂದು ಭರವಸೆ ಕೊಡುತ್ತೇವೆ. ತಾವು ಉಪವಾಸ ನಿಲ್ಲಿಸಬೇಕೆಂದು ಗಾಂಧೀಜಿಯ ಮುಂದೆ ಬರೆದುಕೊಟ್ಟರು. ಗಾಂಧೀಜಿಗೆ ಅದನ್ನು ಓದಿ ಹೇಳಿದರು. ಸಹಿ ಮಾಡಿದ ಧಾರ್ಮಿಕ ಮುಖಂಡರು ಮುಖತಃ ಒಪ್ಪಿಕೊಂಡರು. ಆ ಪತ್ರಕ್ಕೆ ಸಿಖ್ ಧಾರ್ಮಿಕ ಮುಖಂಡರು ಸಹಿ ಹಾಕಿರಲಿಲ್ಲ. ಈ ಕೊರತೆಯನ್ನು ನೀಗಿಸಲು ಸಿಖ್ ಧಾರ್ಮಿಕ ಮುಖಂಡರ ಸಹಿಯನ್ನೂ ಹಾಕಿಸಿ, ಸಹಿ ಹಾಕಿದ ಮುಖಂಡರನ್ನೂ ಕರೆತಂದು ಧಾರ್ಮಿಕ ಕೋಮುಸೌಹಾರ್ದವನ್ನು ಕಾಪಾಡಲು ಮಾತುಕೊಟ್ಟರು.
ಗಾಂಧೀಜಿ ಹೇಳಿದರು: ‘‘ನಾನೀಗ ಅವಸರದಿಂದಿಲ್ಲ. ಈ ಸೌಹಾರ್ದದ ಮಹಾಪೂರ ಕ್ಷಣಿಕವಲ್ಲ ಎಂಬುದನ್ನು ನಾನು ದಿಟಪಡಿಸಿಕೊಳ್ಳಬೇಕು. ಭಾವಾವೇಶದಿಂದ ಮಾಡಿದ ನಿರ್ಣಯ ಶಾಶ್ವತವಾಗಿ ನೆಲೆಸಬೇಕು’’.
ಗಾಂಧೀಜಿ ಆ ಸ್ಥಿತಿಯಲ್ಲೂ ಮೈಕ್ರೋಫೋನ್ ಮೂಲಕ ಪಿಸುಗುಟ್ಟಿದರು:
‘‘ಹುಟ್ಟಿದವರೆಲ್ಲ ಸಾಯಲೇಬೇಕು. ಮರಣ ಎಲ್ಲರ ಮಹಾಗೆಳೆಯ. ನಾವದಕ್ಕೆ ಋಣಿಯಾಗಿರಬೇಕು. ಏಕೆಂದರೆ ಅದು ನಮ್ಮ ದುಃಖ ದುಮ್ಮಾನ, ಸಂಕಟಗಳನ್ನೆಲ್ಲ ಪರಿಹರಿಸುತ್ತದೆ...’’
ಗಾಂಧೀಜಿಯ ಸ್ಥಿತಿ ಇನ್ನೂ ಚಿಂತಾಜನಕವಾದುದನ್ನು ಕೇಳಿದ ದಿಲ್ಲಿ ನಾಗರಿಕರು ತಂಡೋಪತಂಡವಾಗಿ ಸಹಸ್ರಾರು ಸಂಖ್ಯೆಯಲ್ಲಿ ಬೀದಿಗಿಳಿದು ಘೋಷಿಸತೊಡಗಿದರು: ‘ಕೋಮುಸೌಹಾರ್ದತೆ’, ‘ಹಿಂದೂ-ಮುಸ್ಲಿಂ ಐಕಮತ್ಯ!’, ‘ಗಾಂಧೀಜಿಯನ್ನು ಉಳಿಸಿ!’ ಇಡೀ ದೇಶದಲ್ಲಿ ಇದೇ ಒಂದು ಮಾತು ಮೊಳಗಿತು. ಭಾರತದಲ್ಲಿ ಎಲ್ಲ ಮಸೀದಿಗಳಲ್ಲೂ ಇದೇ ಪ್ರಾರ್ಥನೆ! ಗಾಂಧೀಜಿ ಉಳಿಯಲಿ. ಮುಂಬೈಯಿಂದ ಒಬ್ಬ ಅಸ್ಪಶ್ಯ ಒಂದು ತಂತಿ ವರ್ತಮಾನ ಕಳುಹಿಸಿದ, ‘ನಿಮ್ಮ ಪ್ರಾಣ ನಮಗೆ ಸೇರಿದ್ದು!’
ಎಲ್ಲಕ್ಕಿಂತ ಹೆಚ್ಚಾಗಿ ದಿಲ್ಲಿಯಲ್ಲಿ ಹಿಂದೂ-ಮುಸ್ಲಿಂ-ಸಿಖ್ಖರು ಕೋಮುಸೌಹಾರ್ದ ಶಾಂತಿ ದಳಗಳನ್ನು ರಚಿಸಿ, ಕೈ ಕೈ ಹಿಡಿದುಕೊಂಡು ಬೀದಿ ಬೀದಿಗಳಲ್ಲಿ ಗಲ್ಲಿ ಗಲ್ಲಿಗಳಲ್ಲಿ ಎಲ್ಲೆಲ್ಲಿಯೂ ಶಾಂತಿ ಮಂತ್ರ ಘೋಷಿಸುತ್ತಾ ಮೆರವಣಿಗೆ ಹೊರಟರು. ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು, ಸಿನೆಮಾ ಥಿಯೇಟರ್‌ಗಳು, ಹೊಟೇಲ್ ರೆಸ್ಟೋರೆಂಟ್‌ಗಳು, ಸರ್ಕಸ್ ಆಟಗಳು ಎಲ್ಲ ವಿನೋದ ಕೇಂದ್ರಗಳು ಬಾಗಿಲು ಮುಚ್ಚಿದವು. ಪಂಜಾಬ್‌ನಿಂದ ನಿರಾಶ್ರಿತ ವಿಧವೆಯರ, ತಂದೆ ತಾಯಿ ಕಳೆದುಕೊಂಡ ಅನಾಥ ಬಾಲಕ ಬಾಲಕಿಯರು ನಿರಾಶ್ರಿತ ಶಿಬಿರಗಳಿಂದ ಬಿರ್ಲಾ ಭವನಕ್ಕೆ ಮೆರವಣಿಗೆಯಲ್ಲಿ ಬಂದು ಗಾಂಧೀಜಿ ಉಪವಾಸ ನಿಲ್ಲಿಸಬೇಕೆಂದು ಮೊರೆಯಿಟ್ಟರು. ಒಂದು ಸಾವಿರ ಹಿಂದೂ-ಮುಸ್ಲಿಂ-ಸಿಖ್ ಜನಾಂಗದ ಮುಖಂಡರು ಒಂದು ಮನವಿ ಪತ್ರಕ್ಕೆ ಸಹಿ ಮಾಡಿ, ಗಾಂಧೀಜಿ ಉಪವಾಸ ಬಿಡಬೇಕೆಂದು ಬೇಡಿಕೊಂಡರು. ‘‘ಭಾರತ ದೇಶ ಹಿಂದೂ-ಸಿಖ್ ಜನರಿಗೆ ಸೇರಿದಂತೆ ಮುಸ್ಲಿಮರಿಗೂ ಸೇರಿದೆ. ಅವರೂ ಇಲ್ಲಿ ಸುಕ್ಷೇಮದಿಂದ ಬದುಕುವಂತೆ ಪ್ರಯತ್ನಿಸುತ್ತೇವೆ. ಭರವಸೆ ಕೊಡುತ್ತೇವೆ. ಉಪವಾಸ ಬಿಡಿ’’ ಎಂದು ಪ್ರಾರ್ಥಿಸಿದರು.
  ಜನವರಿ 17ರಂದು, ಒಂದು ಲಕ್ಷ ನಾಗರಿಕರು, ಮೂರು ಮೈಲು ಉದ್ದದ ಮೆರವಣಿಗೆ ಮೂಲಕ ಬಿರ್ಲಾ ಭವನದತ್ತ ಹರಿದು ಬಂದರು. ಹೆಜ್ಜೆ ಹೆಜ್ಜೆಗೂ ‘‘ಮಹಾತ್ಮಾ ಗಾಂಧೀಜಿ ಕಿ ಜೈ’’, ‘‘ಗಾಂಧೀಜಿ ಉಳಿಯಲೇಬೇಕು’’, ‘‘ಅವರ ಪ್ರಾಣ ನಮ್ಮ ಪ್ರಾಣ’’ ಮುಂತಾದ ಘೋಷಣೆಗಳನ್ನು ಕೂಗುತ್ತಾ ಬಂದರು. ದಿಲ್ಲಿ ಟಾಂಗಾವಾಲಗಳ ಸಂಘ, ಅಂಚೆ ಮತ್ತು ತಂತಿ ನೌಕರರ ಸಂಘ, ರೈಲ್ವೆ ಕಾರ್ಮಿಕರ ಒಕ್ಕೂಟ, ಭಂಗಿ ಜಾಡಮಾಲಿಗಳು, ಹರಿಜನರು, ದಿಲ್ಲಿ ಮಹಿಳಾ ಸಂಘಟನೆ... ಇ... ಇ... ಅಸಂಖ್ಯಾತ ಸಂಘ ಸಂಸ್ಥೆಗಳು ಬಿರ್ಲಾ ಭವನದತ್ತ ಸಾಗಿದವು. ‘‘ಗಾಂಧೀಜಿ ನೀವು ಉಪವಾಸ ನಿಲ್ಲಿಸಿ’’- ನಭೋಮಂಡಲ ಬಿರಿಯುವಂತೆ ಮೊರೆಯಿಟ್ಟರು. ‘‘ಗಾಂಧಿ ಸಾಯಲಿ’’ ಎಂದು ಕೂಗಿದ ಒಂಟಿದನಿಗಿಂತ ಲಕ್ಷ ಪಟ್ಟು ಹೆಚ್ಚು: ‘‘ಗಾಂಧೀಜಿ ಬದುಕಿ ಉಳಿಯಲಿ!’’ ಎಂಬ ನಿನಾದ ದಿಲ್ಲಿಯಲ್ಲಿ ಮೊಳಗಿತು.
ಬಂದಿದ್ದ ಜನಸ್ತೋಮವನ್ನು ಉದ್ದೇಶಿಸಿ ನೆಹರೂ ಧ್ವನಿವರ್ಧಕದ ಮುಂದೆ ನಿಂತು: ‘‘ಭಾರತದ ಸ್ವಾತಂತ್ರವನ್ನು ನಾನೊಂದು ದಿವ್ಯದರ್ಶನವೆಂದು ಕಂಡೆ. ಏಶ್ಯಾ ಖಂಡದ ಭವಿಷ್ಯವನ್ನು ನನ್ನ ಹೃದಯದಲ್ಲಿ ಚಿತ್ರಿಸಿದ್ದೆ. ಶೋಕಿ ಉಡುಪು ಧರಿಸಲು ಬಾರದ, ಮಾತಿನಲ್ಲಿ ಥಳಕು ಇಲ್ಲದ, ನೋಡಲು ವಿಚಿತ್ರವಾಗಿ ಕಾಣುವ ಈ ವ್ಯಕ್ತಿ ಗಾಂಧೀಜಿ ನಮಗೆ ಈ ದಿವ್ಯ ದರ್ಶನವನ್ನು ತೋರಿಸಿದವರು. ಗಾಂಧೀಜಿಯಂಥ ವಿಭೂತಿ ಪುರುಷರನ್ನು ಪಡೆಯುವಂಥ ಯಾವುದೋ ಒಂದು ಮಹತ್ತು ಮತ್ತು ಶಕ್ತಿ, ವೀರ್ಯ ಭಾರತದ ಮಣ್ಣಿನಲ್ಲಿದೆ. ಅವರ ಜೀವವನ್ನು ಉಳಿಸಲು ಯಾವ ತ್ಯಾಗವೂ ದೊಡ್ಡದಲ್ಲ. ಯಾಕೆಂದರೆ, ಈ ದೇಶವನ್ನು ನಿರ್ದಿಷ್ಟ ಗುರಿಯತ್ತ ಕರೆದೊಯ್ಯುವ ವ್ಯಕ್ತಿ ಅವರೊಬ್ಬರೆ’’ ಎಂದು ಕೂಗಿ ಸಾರಿ ಹೇಳಿದರು.


ಬಿರ್ಲಾ ಭವನದ ಮುಂದೆ ನೆರೆದಿದ್ದ ಅಸಂಖ್ಯಾತ ಜನಸ್ತೋಮದ ಮಧ್ಯದಿಂದ ಒಂದು ಅಪಸ್ವರ ಇದ್ದಕ್ಕಿದ್ದಂತೆ ಕೇಳಿಬಂತು. ಪಂಜಾಬ್‌ನಿಂದ ಭಾರತಕ್ಕೆ ಓಡಿಬಂದಿದ್ದ ಒಬ್ಬ ನಿರಾಶ್ರಿತ ಮದನಲಾಲ ಪಹ್ವಾ, ಅವನನ್ನು ಮುಂಬೈಯಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ವಿಷ್ಣು ಕರಕರೆ ಎಂಬಾತನೊಬ್ಬ ಇಬ್ಬರೂ ಬಿರ್ಲಾ ಭವನದತ್ತ ಸಾಗಿದ್ದ ಮೆರವಣಿಗೆ ಹೋಗುತ್ತಿದ್ದವರೊಡನೆ ಹೋಗಿ ಆ ಜನರಲ್ಲಿ ಸೇರಿದ್ದರು. ನೆಹರೂ ಆಡಿದ ಮಾತು ಕೇಳಿದ್ದ ಆ ಮದನಲಾಲ ತನ್ನ ಆಕ್ರೋಶವನ್ನು ಅದುಮಿಟ್ಟುಕೊಳ್ಳಲಾರದೆ: ‘‘ಗಾಂಧೀಜಿ ಸತ್ತರೆ ಸಾಯಲಿ’’ ಎಂದು ಚೀತ್ಕರಿಸಿದ.
ಆ ಚೀತ್ಕಾರ ಕೇಳಿದ ಪೊಲೀಸರಿಬ್ಬರು ಬಂದು ಮದನಲಾಲನನ್ನು ಹಿಡಿದೆಳೆದುಕೊಂಡು ಹೋದರು. ಕರಕರೆಯಲ್ಲಿ ತಳಮಳ ಎದ್ದಿತು. ಗಾಂಧೀಜಿ ಹತ್ಯೆಯ ತಮ್ಮ ಸಂಚು ಬಯಲಾಗಿಯೇ ಆಗುತ್ತದೆ. ಇನ್ನು ಗಾಂಧೀಜಿ ಕೊಲೆ ಸಾಧ್ಯವಾಗದು ಎಂದುಕೊಂಡ. ಆದರೆ ಅವನ ಅಂಜಿಕೆ ಹುಸಿಯಾಯಿತು. ಮದನಲಾಲನನ್ನು ಅಂದೇ ರಾತ್ರಿ ಪೊಲೀಸರು ಕೈಬಿಟ್ಟು ಕಳುಹಿಸಿದರು. ಕರಕರೆ ಅಂದುಕೊಂಡಂತೆ ಹಿಡಿದುಕೊಂಡು ಹೋಗಿದ್ದ ಆ ಮದನಲಾಲನನ್ನು ಪೊಲೀಸರು ಕೈಬಿಡದೆ ವಶದಲ್ಲಿಟ್ಟುಕೊಂಡು ಪ್ರಶ್ನಿಸಿದಿದ್ದರೆ, ಪೊಲೀಸರಿಗೆ ಚಿರಪರಿಚಿತವಾದ ಉಪಾಯಗಳಿಂದ ಅವನ ಬಾಯಿ ಬಿಡಿಸಿದ್ದರೆ ಅವನ ಪೂರ್ವಾಪರಗಳನ್ನು ಪತ್ತೆಹಚ್ಚುವುದು ಸುಲಭ ಸಾಧ್ಯವಾಗಿತ್ತು. ಆದರೆ ಭಾರತ ಇತಿಹಾಸದಲ್ಲಿ, ಮಾನವ ಜನಾಂಗದ ಇತಿಹಾಸದಲ್ಲಿ ಎಂದೆಂದಿಗೂ ಯಾರೂ ಮರೆಯಲಾಗದ, ಕ್ರೈಸ್ತನನ್ನು ಶಿಲುಬೆಗೇರಿಸಿದ ಅವಿಸ್ಮರಣೀಯ ಘಟನೆಯಂತೆ ನಡೆಯಬೇಕೆಂದು ವಿಧಿನಿಯಾಮಕವಾಗಿತ್ತೆಂದು ತೋರುತ್ತದೆ! ಕೈಗೆ ಸಿಕ್ಕ ಕುಟಿಲ ಕ್ರೂರ ಜಂತುವನ್ನು ಪೊಲೀಸರೇ ಕೈ ಬಿಟ್ಟರು. ಅವನು ತಪ್ಪಿಸಿಕೊಳ್ಳಲಿಲ್ಲ!
ಆ ಸಂಜೆ ಪ್ಯಾರೇಲಾಲ್ ಗಾಂಧೀಜಿಯ ಕೊಠಡಿಗೆ ಬಂದರು. ಬಾಪೂ ಮಂಪರಿನಲ್ಲಿದ್ದರೋ ಅರೆನಿದ್ರೆಯಲ್ಲಿದ್ದರೋ ಎಚ್ಚರಗೊಳ್ಳಲಿಲ್ಲ. ಪ್ಯಾರೆಲಾಲ್ ಅವರ ಮೈ ಅಲುಗಾಡಿಸಿದರು. ಗಾಂಧೀಜಿ ಕಣ್ಣು ತೆರೆದರು. ತಮ್ಮ ಜೇಬಿನಲ್ಲಿದ್ದ ಹಾಳೆಯನ್ನು ತೆಗೆದು ಬಾಪೂ ಕಣ್ಣು ಮುಂದೆ ಹಿಡಿದರು. ಒಂದು ಮಂದಹಾಸ ಮೂಡಿತು. ಅದು ದಿಲ್ಲಿ ನಾಗರಿಕರು, ಸರ್ವ ಮತಗಳ ಮುಖಂಡರು ಬರೆದುಕೊಟ್ಟಿದ್ದ ಶಾಂತಿ ಸೌಹಾರ್ದದ ತಾಮ್ರ ಪತ್ರ. ದಿಲ್ಲಿಯ ಪ್ರತಿಷ್ಠಿತ ನಾಗರಿಕರು, ಜಾತಿ, ಮತ, ಕುಲ, ಗೋತ್ರ ಎನ್ನದೆ- ಪ್ರಮುಖವಾಗಿ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಧರ್ಮ ಗುರುಗಳು ಸಮಾಜದ ಮುಖಂಡರು ಒಮ್ಮತದಿಂದ ಸಹಿ ಮಾಡಿದ್ದ ಶಾಂತಿ ಸೌರ್ಹಾದದ ಘೋಷಣಾ ಪತ್ರ. ಅದರ ಸಾರಾಂಶ: ‘‘ಏನೇ ಬರಲಿ. ದಿಲ್ಲಿಯಲ್ಲಿ ದೊಂಬಿ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರಿಗೆ ಎಲ್ಲ ಸೌಕರ್ಯಗಳನ್ನು ಒದಗಿಸುತ್ತೇವೆ. ಇಲ್ಲಿ ಇರುವ ಮುಸ್ಲಿಂ ಬಾಂಧವರ ಪ್ರಾಣ, ಆಸ್ತಿ ರಕ್ಷಣೆ ಮಾಡುತ್ತೇವೆ. ಇದುವರೆಗೆ ಬಲಾತ್ಕಾರದಿಂದ ಆಕ್ರಮಿಸಿಕೊಂಡ ಮಸೀದಿಗಳನ್ನು, ಮುಸ್ಲಿಮರ ಮನೆಗಳನ್ನು ತೆರವುಗೊಳಿಸುತ್ತೇವೆ. ನೀವು ಉಪವಾಸ ನಿಲ್ಲಿಸಿ.’’
ಗಾಂಧೀಜಿ ಆ ಪತ್ರವನ್ನು ಓದಿ ನೋಡಿ: ‘‘ಇದರಲ್ಲಿ ಆರೆಸ್ಸೆಸ್ ಪ್ರತಿನಿಧಿಗಳ ಸಹಿ ಇಲ್ಲವಲ್ಲ!’’ ಎಂದರು.
‘‘ಅವರೂ ಒಪ್ಪಿದ್ದಾರೆ. ಅವರ ಮುಖಂಡರು ಸದ್ಯ ಇಲ್ಲದಿದ್ದರಿಂದ ಸಹಿ ಮಾಡಿಸುವುದು ಆಗಿಲ್ಲ’’.
‘‘ಅವರ ಸಹಿಯನ್ನೂ ಹಾಕಿಸಿಕೊಂಡು ಬನ್ನಿ’’ ಎಂದರು ಗಾಂಧೀಜಿ.
‘‘ಆಯ್ತು. ಅವರನ್ನೇ ಕರೆ ತರುತ್ತೇವೆ’’.
ರಾಜೇಂದ್ರ ಪ್ರಸಾದರು ಬಂದರು (ಅವರೊಡನೆ) ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ ಮುಖಂಡರು ಬಂದರು. ಕಾವಿ ಕಾಷಾಯ ವಸ್ತ್ರಧಾರಿ ಹಿಂದೂ ಸಾಧು ಸಂತರು, ಕಪ್ಪು ಬಿಳುಪು ನಿಲುವಂಗಿ ತೊಟ್ಟ ವೌಲ್ವಿಗಳು, ಕ್ರೈಸ್ತ ಪಾದ್ರಿಗಳು... ಗಾಂಧಿ ಮಲಗಿದ್ದ ಹೊರಸಿನ ಸುತ್ತು ನಿಂತಿದ್ದರು. ಗಾಂಧೀಜಿ ಹತ್ಯೆ ಮಾಡಲು ಸಂಚು ನಡೆಸಿದ್ದ ಆರೆಸ್ಸೆಸ್ ಸಂಘಪರಿವಾರದ ಮುಂದಾಳುಗಳೂ ಅಲ್ಲಿದ್ದರು.
ಗಾಂಧೀಜಿ ಕ್ಷೀಣವಾಣಿಯಲ್ಲಿ ಮನು ಗಾಂಧೀಯ ಕಿವಿಯಲ್ಲಿ ಹೇಳಿ ಬರೆಸಿದರು, ‘‘ಈಗ ದಿಲ್ಲಿಯಲ್ಲಿ ಏನನ್ನು ಸಾಧಿಸಿದ್ದೇವೆಯೋ ಅದನ್ನು ಅಖಿಲ ಭಾರತ ಮಟ್ಟದಲ್ಲೂ ಸಾಧಿಸಬೇಕು. ಇಲ್ಲದಿದ್ದರೆ ಇಲ್ಲಿ ಕೈಗೊಂಡಿರುವ ಶಾಂತಿ ಸ್ಥಾಪನಾ ಪ್ರತಿಜ್ಞೆ ಕೇವಲ ನಿರರ್ಥಕ. ಬೆಲೆಯಿಲ್ಲದ್ದು...’’ ಮುಂದೆ ಮಾತನಾಡಲು ತ್ರಾಣವಿಲ್ಲದೆ ಎರಡು ನಿಮಿಷ ಸುಮ್ಮನಿದ್ದು ಸುಧಾರಿಸಿಕೊಂಡು ಮೆಲುದನಿಯಲ್ಲಿ ಮೆಲ್ಲನೆ ಉಸುರಿದರು:
‘‘ಇಂಡಿಯಾ ಕೇವಲ ಹಿಂದೂಗಳಿಗೆ, ಪಾಕಿಸ್ತಾನ ಕೇವಲ ಮುಸ್ಲಿಮರಿಗೆ ಸೇರಿದ್ದೆಂದು ಭಾವಿಸುವುದು ಕೇವಲ ಹುಚ್ಚು. ಇಂಡಿಯಾ ಮತ್ತು ಪಾಕಿಸ್ತಾಗಳನ್ನೆಲ್ಲ ಪರಿವರ್ತಿಸುವುದು ಕಷ್ಟ. ಆದರೆ ನಾವಿಲ್ಲಿ ಪ್ರಾರಂಭಿಸಿದ ಕೆಲಸ ದೇಶಗಳಲ್ಲೆಲ್ಲ ವ್ಯಾಪಿಸುವುದು...’’ ಇದನ್ನು ಮನು ಗಾಂಧಿ ಬರೆದು ಪ್ಯಾರೇಲಾಲ್ ಕೈಗೆ ಕೊಟ್ಟರು. ಅವರು ಅದನ್ನು ಓದಿದರು.
ಗಾಂಧೀಜಿ ಹೇಳಿದ ಮುಂದಿನ ವಾಕ್ಯವನ್ನು ನಿಧಾನವಾಗಿ ಓದಿದರು: ‘‘ನಾನು ಹೇಳಿದ್ದನ್ನೆಲ್ಲ ಕೇಳಿದ ಮೇಲೂ ಉಪವಾಸ ಕೈಬಿಡಬೇಕೆಂದು ನೀವು ಹೇಳುವುದಾದರೆ ಬಿಡುತ್ತೇನೆ’’.
ಕೊಠಡಿಯಲ್ಲಿ ಸೇರಿದ್ದವರೆಲ್ಲ ಒಬ್ಬೊಬ್ಬರಾಗಿ ಮುಂದೆ ಬಂದು ತಾವು ಕೊಟ್ಟ ಮಾತಿನಂತೆ ತಪ್ಪದೇ ನಡೆದುಕೊಳ್ಳುತ್ತೇವೆಂದು ಪ್ರಮಾಣ ಮಾಡಿದರು. ಆರೆಸ್ಸೆಸ್ ಮುಖಂಡರೂ ಮುಂದೆ ಬಂದು, ‘‘ನೀವು ಹೇಳಿದ ಮಾತಿನ ಅರ್ಥವನ್ನು ಗ್ರಹಿಸಿದ್ದೇವೆ. ನಿಮ್ಮ ಆದೇಶದಂತೆ ಸಂಪೂರ್ಣವಾಗಿ ನಡೆಯುತ್ತೇವೆಂದು ಪ್ರಮಾಣ ಮಾಡುತ್ತೇವೆ’’ ಎಂದರು.
ಗಾಂಧೀಜಿ ಮನು ಗಾಂಧಿಯನ್ನು ಹತ್ತಿರ ಬರಲು ಸಂಜ್ಞೆ ಮಾಡಿದರು. ‘‘ನನ್ನ ಉಪವಾಸ ಸತ್ಯಾಗ್ರಹ ನಿಲ್ಲಿಸುತ್ತೇನೆ. ದೈವೇಚ್ಛೆ ಈಡೇರಲಿ’’ ಅಲ್ಲಿದ್ದವರ ಹೃದಯದಲ್ಲೆಲ್ಲ ಸಂತೋಷದ ಬುಗ್ಗೆ ಉಕ್ಕಿ ಹರಿಯಿತು. ಸಣ್ಣ ಕಲ ಕಲ ಧ್ವನಿ ಕೊಠಡಿ ತುಂಬಿತು. ಸದ್ದಡಗಿದ ಮೇಲೆ ಗಾಂಧೀಜಿ ಗೀತೆ, ಬೌದ್ಧ ಮಂತ್ರ, ಕುರ್‌ಆನ್, ಬೈಬಲ್, ಸಿಖ್ ಗ್ರಂಥ ಸಾಹೀಬ್, ಪಾರ್ಸಿಕರ ‘ಮಝ್ದ’ಯಿಂದ ಪ್ರಾರ್ಥನಾ ಶ್ಲೋಕ, ಮಂತ್ರ... ಓದಿದರು.
ಆಭಾ ಗಾಂಧಿ ಒಂದು ಲೋಟ ಕಿತ್ತಳೆ ಹಣ್ಣಿನ ರಸ ತಂದಳು. ನೆಹರೂ ಮತ್ತು ವೌಲಾನಾ ಆಝಾದ್ ಗಾಂಧೀಜಿಗೆ ಹಣ್ಣಿನ ರಸ ಕುಡಿಸಿದರು. ಮಧ್ಯಾಹ್ನ 12:45ಕ್ಕೆ, 121 ಘಂಟೆ, 30 ನಿಮಿಷಗಳ ನಂತರ ಗಾಂಧೀಜಿ ನಿರಶನ ವ್ರತ ಮುಕ್ತಾಯ ಮಾಡಿದರು. ಜನವರಿ 17, 1948 ಈ ಜಗತ್ತು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.
(ಬುಧವಾರದ ಸಂಚಿಕೆಗೆ)

Writer - ಕೋ. ಚೆನ್ನಬಸಪ್ಪ

contributor

Editor - ಕೋ. ಚೆನ್ನಬಸಪ್ಪ

contributor

Similar News

ಜಗದಗಲ
ಜಗ ದಗಲ