ಪ್ರತೀಕಾರ ತೀರಿಸುವ ಬಗೆಯೇನು?

Update: 2019-02-16 05:25 GMT

ಅತ್ಯಂತ ಆಘಾತಕಾರಿ, ಅಮಾನವೀಯ ದಾಳಿಯೊಂದು ದೇಶದ ಮೇಲೆ ನಡೆದಿದೆ. ಕಾಶ್ಮೀರದ ಪುಲ್ವಾಮದಲ್ಲಿ ಉಗ್ರವಾದಿ ಸಂಘಟನೆಯೊಂದು ನಡೆಸಿದೆಯೆನ್ನಲಾದ ದಾಳಿಗೆ ಸುಮಾರು 40 ಮಂದಿ ಯೋಧರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಈ ಭೀಕರ ದಾಳಿ ಯುದ್ಧದಷ್ಟೇ ಭೀಕರವಾಗಿದೆ. ದೇಶದ ಆತ್ಮಕ್ಕೇ ಗಾಯವಾಗಿದೆ. ನಮ್ಮ ಸೈನಿಕರ ಒಂದು ತಲೆಗೆ ಪ್ರತಿಯಾಗಿ ನೂರು ತಲೆಗಳನ್ನು ತರುತ್ತೇನೆ ಎಂದು ದೇಶಕ್ಕೆ ಭರವಸೆ ನೀಡಿ ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರಾವಧಿಯ ಕೊನೆಯ ದಿನಗಳಲ್ಲೇ ಇದು ಸಂಭವಿಸಿರುವುದು ವಿಪರ್ಯಾಸ. ಉರಿ ಉಗ್ರರ ದಾಳಿಯ ಬಳಿಕ ಸೇನೆ ನಡೆಸಿದೆಯೆನ್ನಲಾದ ಸರ್ಜಿಕಲ್ ಸ್ಟ್ರೈಕ್‌ನ್ನು ದೇಶಾದ್ಯಂತ ಆಚರಣೆಗೆ ಕರೆಕೊಟ್ಟು ಆ ಮೂಲಕ, ತನ್ನ ಸರಕಾರ ಹೇಗೆ ಉಗ್ರರನ್ನು ದಮನಿಸಿತು ಎನ್ನುವುದನ್ನು ಮಾಧ್ಯಮಗಳ ಮೂಲಕ ಹರಡಿದ ಸರಕಾರವನ್ನು ಈ ದಾಳಿ ವ್ಯಂಗ್ಯ ಮಾಡುತ್ತಿದೆ.

ಸರ್ಜಿಕಲ್ ಸ್ಟ್ರೈಕ್ ದಾಳಿಯನ್ನು ವಸ್ತುವಾಗಿಟ್ಟು ಸಿನೆಮಾ ಕೂಡ ಸಿದ್ಧವಾಯಿತು. ಸಿನೆಮಾ ಕೋಟಿಗಟ್ಟಳೆ ಹಣ ಬಾಚಿಕೊಳ್ಳುತ್ತಿರುವಾಗಲೇ ಇತ್ತ, ಕಾಶ್ಮೀರದಲ್ಲಿ ಸೈನಿಕರ ವಿರುದ್ಧ ಬರ್ಬರ ದಾಳಿ ನಡೆದು 40 ಮಂದಿ ಸೈನಿಕರು ಮೃತರಾದರು. 2016ರ ಉರಿ ದಾಳಿಯಲ್ಲಿ 19 ಮಂದಿ ಸತ್ತಿದ್ದರೆ, ಈ ದಾಳಿಯಲ್ಲಿ ಅದರ ದುಪ್ಪಟ್ಟು ಯೋಧರು ಬಲಿಯಾದರು. ಜನರನ್ನು ವಿಸ್ಮತಿಯಲ್ಲಿಡುವುದರಿಂದ ವಾಸ್ತವವನ್ನು ಮರೆ ಮಾಚಲು ಸಾಧ್ಯವಿಲ್ಲ ಎನ್ನುವ ಸಂದೇಶವನ್ನು ಮೋದಿಗೆ ರವಾನಿಸುತ್ತಿದೆ ಈ ದುರಂತ. ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನೆಯ ನಡುವೆ ತಿಕ್ಕಾಟ ಇಂದು ನಿನ್ನೆಯದಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಯೋಧರ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಹಾಗೆಯೇ ಉಗ್ರರ ವಿರುದ್ಧ ಸೇನೆಯೂ ಪ್ರತಿ ದಾಳಿ ನಡೆಸಿದೆ.

ಉಗ್ರರ ವಿರುದ್ಧ ಸೇನೆ ತನ್ನ ದಮನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದಂತೆಯೇ ಅವರು ಪ್ರತಿದಾಳಿಯನ್ನು ತೀವ್ರಗೊಳಿಸುತ್ತಾರೆ ಎನ್ನುವ ಅರಿವು ಸೇನೆಗೂ ಇದೆ ಮತ್ತು ಅದಕ್ಕೆ ಬೇಕಾದ ಮುಂಜಾಗ್ರತೆಯನ್ನು ಸೇನಾ ಮುಖ್ಯಸ್ಥರು, ಗುಪ್ತಚರ ಇಲಾಖೆ, ಸರಕಾರ ತೆಗೆದುಕೊಳ್ಳಲೇ ಬೇಕು. ಇಂದು ಉಗ್ರರು ಕಾಶ್ಮೀರದ ಯಾವುದೇ ನಗರವನ್ನೋ, ಶಾಲೆಯನ್ನೋ ಉಡಾಯಿಸಿದ್ದರೆ ನಾವು ಅವರ ‘ಹೇಡಿತನ’ವನ್ನು ಮತ್ತು ಪಾಕಿಸ್ತಾನದ ‘ದುರುಳತನ’ವನ್ನು ಖಂಡಿಸಿ ಸುಮ್ಮನಾಗಬಹುದಿತ್ತು. ಇಲ್ಲಿ ಉಗ್ರರು ಯಾವುದೋ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿರುವುದಲ್ಲ. ಒಂದು ಸಾವಿರಕ್ಕೂ ಅಧಿಕವಿರುವ ಸೇನೆಯ ಮೇಲೆ, ಭದ್ರತೆಗಳನ್ನು ಮುರಿದು ದಾಳಿ ನಡೆಸಿದ್ದಾರೆ. ಆದುದರಿಂದ ದಾಳಿಗೆ ಯಾರು ಕಾರಣ? ಎನ್ನುವ ಪ್ರಶ್ನೆ ಕೇವಲ ಪಾಕಿಸ್ತಾನವನ್ನು ಖಂಡಿಸುವುದರಿಂದ ಮುಗಿದು ಬಿಡುವುದಿಲ್ಲ. ಪಾಕಿಸ್ತಾನ ಉಗ್ರರನ್ನು ಸಾಕುತ್ತಿದೆ. ಮತ್ತು ಅವರನ್ನು ಭಾರತದೆಡೆಗೆ ಛೂ ಬಿಡುತ್ತಿದೆ. ಎನ್ನುವುದು ವಿಶ್ವಕ್ಕೆ ಜಾಹೀರಾಗಿರುವ ವಿಷಯ. ಈ ಉಗ್ರರು ಎಲ್ಲ ಭದ್ರತೆಗಳನ್ನು ಮೀರಿ ಭಾರೀ ಪ್ರಮಾಣದ ಆರ್‌ಡಿಎಕ್ಸ್ ಜೊತೆಗೆ ನಮ್ಮ ಸೇನೆಯ ಮೇಲೆಯೇ ದಾಳಿ ನಡೆಸುವುದಕ್ಕೆ ಹೇಗೆ ಸಾಧ್ಯವಾಯಿತು ಎನ್ನುವ ತನಿಖೆ ಅತ್ಯಗತ್ಯವಾಗಿ ನಡೆಯಬೇಕಾಗಿದೆ. ಈ ತನಿಖೆಯನ್ನು ಪ್ರಾಮಾಣಿಕವಾಗಿ ನಡೆಸಿ ಭದ್ರತಾ ಲೋಪಗಳಿಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸಿದರೆ ಮಾತ್ರ ಭವಿಷ್ಯದಲ್ಲಿ ಇಂತಹ ದಾಳಿ ನಡೆಯದಂತೆ ತಡೆಯಬಹುದಾಗಿದೆ.

ಮೊತ್ತ ಮೊದಲಾಗಿ ದಾಳಿಗೆ ನಮ್ಮ ನಿರ್ಲಕ್ಷ ಕಾರಣ ಎನ್ನುವುದನ್ನು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಒಪ್ಪಿಕೊಂಡಿದ್ದಾರೆ. ಗುಪ್ತಚರ ಇಲಾಖೆಯಿಂದ ಇಂತಹದೊಂದು ದಾಳಿಯ ಮಾಹಿತಿ ಸಿಕ್ಕಿಯೂ ಸೇನೆ ಅದನ್ನು ನಿರ್ಲಕ್ಷಿಸಿತು ಎನ್ನುವುದನ್ನು ಸ್ವತಃ ರಾಜ್ಯಪಾಲರು ಸ್ಪಷ್ಟಪಡಿಸಿದ್ದಾರೆ. ಈ ನಿರ್ಲಕ್ಷಕ್ಕೆ ಕಾರಣವೇನು? ಇತ್ತೀಚಿನ ದಿನಗಳಲ್ಲಿ ಉಗ್ರವಾದಿಗಳನ್ನು ಒಬ್ಬೊಬ್ಬರಾಗಿ ಸೇನೆ ಹತ್ಯೆ ಮಾಡುತ್ತಿದೆ. ಇದು ಪ್ರತಿದಾಳಿಗೆ ಅವಕಾಶ ನೀಡಬಹುದು ಎನ್ನುವ ಯೋಚನೆ ಯಾಕೆ ಬರಲಿಲ್ಲ? ಅಷ್ಟೊಂದು ಪ್ರಮಾಣದ ಆರ್‌ಡಿಎಕ್ಸ್‌ನ್ನು ಉಗ್ರಗಾಮಿ ಸಂಗ್ರಹಿಸಿಟ್ಟುಕೊಂಡಿದ್ದ ಎನ್ನುವುದೇ ಈ ಕೃತ್ಯದ ಹಿಂದಿನ ತಯಾರಿಯನ್ನು ಹೇಳುತ್ತದೆ. ಇಂತಹದೊಂದು ದಿನ ಸೇನೆಯ ವಾಹನ ಆ ದಾರಿಯಲ್ಲಿ ಬರುತ್ತಿರುವುದರ ಮಾಹಿತಿ ಉಗ್ರವಾದಿಗೆ ತಲುಪಿಸಿದವರು ಯಾರು? ಪಾಕಿಸ್ತಾನದ ಕೈಗಳು ಇರುವಂತೆಯೇ ಈ ದಾಳಿಯ ಹಿಂದೆ ನಮ್ಮದೇ ಸರಕಾರದೊಳಗಿರುವ ಜನರ ಕೈಗಳೂ ಇರಬಹುದೇ?(ಔರಂಗಜೇಬ್‌ನನನು ಉಗ್ರರು ಹತ್ಯೆ ಮಾಡುವುದರ ಹಿಂದೆ ನಮ್ಮದೇ ಸೇನೆಯ ಯೋಧರ ಕೈವಾಡ ಇತ್ತೀಚೆಗೆ ಬಯಲಾಗಿತ್ತು) ಇವೆಲ್ಲವೂ ತನಿಖೆಗೆ ಅರ್ಹವಾಗಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ಸೇನೆ ರಾಜಕೀಯದಿಂದ ಅಂತರವನ್ನು ಕಾಪಾಡಿಕೊಂಡಿತ್ತು. ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ಸೇನೆಯ ಎಲ್ಲ ಸಾಧನೆಯನ್ನು ತನ್ನ ಸಾಧನೆಯಾಗಿ ಸರಕಾರ ಬಿಂಬಿಸತೊಡಗಿತು. ಸೇನೆ ಗುಟ್ಟಾಗಿ ಆಗಾಗ ನಡೆಸುವ ಸರ್ಜಿಕಲ್ ಸ್ಟ್ರೈಕ್‌ನ್ನು ಬಹಿರಂಗವಾಗಿ ಘೋಷಿಸುವ ಮೂಲಕ ಸೇನೆಯ ಆಂತರಿಕ ವ್ಯವಹಾರಗಳಲ್ಲಿ ಸರಕಾರ ಕೈಯಾಡಿಸಿತು.

ರಫೆೇಲ್ ಹಗರಣದಲ್ಲಂತೂ ಸೇನೆಯ ಹಿತಾಸಕ್ತಿಯನ್ನು ಮೋದಿ ಅಂಬಾನಿಗೆ ಒತ್ತೆಯಿಟ್ಟರು. ಸೇನೆಯೊಳಗಿರುವ ಅಧಿಕಾರಿಗಳೂ ಮೋದಿಯ ಪರವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುವ ಸ್ಥಿತಿ ನಿರ್ಮಾಣವಾಯಿತು. ಈ ಹಿನ್ನೆಲೆಯಲ್ಲಿ ಈ ದಾಳಿಯ ಹಿಂದೆ ಇತರ ರಾಜಕೀಯ ದುರುದ್ದೇಶಗಳ ಸಾಧ್ಯತೆಗಳೂ ತನಿಖೆಗೆ ಒಳಪಡಬೇಕಾಗಿದೆ. ಇದಿಷ್ಟೇ ಅಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದಾಕ್ಷಣ ಅದು ಕಾಶ್ಮೀರ ಸಮಸ್ಯೆಯನ್ನು ನಿಭಾಯಿಸಿದ ರೀತಿಯೂ ಅಲ್ಲಿನ ಸ್ಥಿತಿ ಇನ್ನಷ್ಟು ಅಸ್ತವ್ಯಸ್ತವಾಗಲು ಕಾರಣವಾಯಿತು. ಆರೆಸ್ಸೆಸ್ ಮತ್ತು ಬಿಜೆಪಿ ಜೊತೆಯಾಗಿ ಕಾಶ್ಮೀರದ ವಿಷಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳತೊಡಗಿದವು. ಗೋಮಾಂಸ ಸೇವನೆಗೆ ವಿರೋಧ, ಗೋವ್ಯಾಪಾರಿಗಳ ಹತ್ಯೆ, ಕಾಶ್ಮೀರದಲ್ಲಿ ಪಂಡಿತರ ೆಟ್ಟೋ ನಿರ್ಮಾಣ, ನಾಗರಿಕರ ಮೇಲೆ ಸೇನೆಯ ಮೂಲಕ ನಡೆಸಿದ ಭೀಕರ ದೌರ್ಜನ್ಯ, ಮಹಿಳೆಯರು, ಮಕ್ಕಳು ಎನ್ನದೇ ಅವರ ವಿರುದ್ಧ ಪೆಲೆಟ್ ಗನ್ ಬಳಕೆ, ನಾಗರಿಕರನ್ನೇ ಗುರಾಣಿಯಾಗಿ ಜೀಪಿಗೆ ಕಟ್ಟಿದ ಪ್ರಕರಣ ಇವೆಲ್ಲವೂ ಜನರಲ್ಲಿ ತೀವ್ರ ಅಭದ್ರತೆಯನ್ನು ಸೃಷ್ಟಿಸಿದವು. ಈ ಅಭದ್ರತೆಯನ್ನು ಉಗ್ರವಾದಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳತೊಡಗಿದರು. ನೋಟು ನಿಷೇಧ ಕಲ್ಲು ತೂರಾಟಗಾರರನ್ನು ತಟಸ್ಥಗೊಳಿಸುವ ಬದಲು ಕಾಶ್ಮೀರದ ಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿತು. ನಿರುದ್ಯೋಗ ಯುವಕರನ್ನು ತಪ್ಪು ದಾರಿಗೆ ಎಳೆಯಿತು.

ಹಾಗೆಯೇ, ಬೀದಿಯಲ್ಲಿ ಸರಕಾರದ ವಿರುದ್ಧ ಧ್ವನಿಯೆತ್ತುತ್ತಿರುವ ಪ್ರತಿಭಟನಾಕಾರ ನಾಗರಿಕರನ್ನು ‘ಉಗ್ರವಾದಿಗಳು’ ಎಂಬಂತೆ ನಡೆಸಿಕೊಂಡ ಸೇನೆಯ ವರ್ತನೆಯೂ ಅಲ್ಲಿನ ಯುವಕರನ್ನು ಹೆಚ್ಚು ಹೆಚ್ಚು ಉಗ್ರವಾದದೆಡೆಗೆ ವಾಲುವಂತೆ ಮಾಡಿತು. ಮೋದಿ ಸರಕಾರದ ಅವಧಿಯಲ್ಲಿ ಕಾಶ್ಮೀರದಲ್ಲಿ ಸೇನೆಯ ವಿರುದ್ಧ ಅತ್ಯಂತ ಹೆಚ್ಚು ದಾಳಿಗಳು ಸಂಭವಿಸಲು ಇದೇ ಕಾರಣ. 2013 ಯುಪಿಎ ಆಡಳಿತ ಕಾಲದಲ್ಲಿ 170 ದಾಳಿಗಳು ನಡೆದಿದ್ದರೆ ಮೋದಿಯ ಆಡಳಿತದ ಕಾಶ್ಮೀರದಲ್ಲಿ 614 ದಾಳಿಗಳು ನಡೆದವು. ಅಂದರೆ ನಾಲ್ಕು ಪಟ್ಟು ಹೆಚ್ಚು. 2013ರಲ್ಲಿ ಉಗ್ರವಾದಿಗಳಾಗಿ ಪರಿವರ್ತನೆಯಾದ ಯುವಕರ ಸಂಖ್ಯೆ 16 ಆಗಿದ್ದರೆ 2018ಕ್ಕೆ ಅದು 191ಕ್ಕೆ ಏರಿದೆ. ಅಂದರೆ 12 ಪಟ್ಟು ಹೆಚ್ಚಿದೆ. ಎಲ್ಲಕ್ಕಿಂತ ಅಪಾಯಕಾರಿ ಸಂಗತಿಯೆಂದರೆ ಮೋದಿಯ ಆಡಳಿತದ ಕಾಲದಲ್ಲಿ ನಾಗರಿಕರು ಉಗ್ರವಾದಿಗಳ ಜೊತೆಗೆ ಮೃದು ನಿಲುವು ತಳೆಯುತ್ತಿರುವುದು. ಘಟನೆಗೆ ‘ಪ್ರತೀಕಾರ ತೀರಿಸುವೆ’ ಎಂದು ಸರಕಾರ ಹೇಳಿದೆ.

‘ಪ್ರತೀಕಾರ’ವೆಂದರೆ ಏನು? ಸರಕಾರ ಉಗ್ರವಾದಿಗಳ ವಿರುದ್ಧದ ಆಕ್ರೋಶವನ್ನು ಸರಕಾರ ನಾಗರಿಕರ ಮೇಲೆ ತೀರಿಸಲು ಹೊರಟಿದೆಯೇ? ಅಂತಹದೇನಾದರೂ ಸಂಭವಿಸಿದರೆ ಕಾಶ್ಮೀರ ಸಂಪೂರ್ಣವಾಗಿ ಭಾರತದ ಕೈ ಬಿಟ್ಟು ಹೋಗಬಹುದು. ಒಂದೆಡೆ ಉಗ್ರವಾದಿಗಳ ದಮನ ನಡೆಯುತ್ತಿರಬೇಕು ಮತ್ತು ಇನ್ನೊಂದೆಡೆ ಕಾಶ್ಮೀರದ ನಾಗರಿಕರಲ್ಲಿ ಭಾರತ ವಿಶ್ವಾಸ ಮೂಡಿಸುವ ಕಾರ್ಯವನ್ನು ಮುಂದುವರಿಸಬೇಕು. ಕಾಶ್ಮೀರಿಗಳನ್ನು ಭಾರತದ ಪರವಾಗಿಸುವುದೇ ನಾವು ಪಾಕಿಸ್ತಾನ ಮತ್ತು ಉಗ್ರವಾದಿಗಳ ವಿರುದ್ಧ ಮಾಡಬಹುದಾದ ಪ್ರತೀಕಾರವಾಗಿದೆ. ಅದಕ್ಕಾಗಿ ಸರಕಾರ ಕಾರ್ಯತಂತ್ರಗಳನ್ನು ರೂಪಿಸಬೇಕು. ಕಾಶ್ಮೀರಿಗಳನ್ನು ನಮ್ಮವರನ್ನಾಗಿಸದೇ ಕಾಶ್ಮೀರವನ್ನ ನಮ್ಮದಾಗಿಸಲು ಸಾಧ್ಯವಿಲ್ಲ ಎನ್ನುವ ಸತ್ಯವನ್ನು ಸರಕಾರ ಇನ್ನಾದರೂ ಅರ್ಥ ಮಾಡಿಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News