ತಮಿಳುನಾಡು: ಬಿಜೆಪಿ- ಎಐಎಡಿಎಂಕೆ ಡೀಲ್ ಫೈನಲ್

Update: 2019-02-16 03:59 GMT

ಚೆನ್ನೈ, ಫೆ.16: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ 39 ಹಾಗೂ ಪುದುಚೇರಿಯ ಒಂದು ಲೋಕಸಭಾ ಕ್ಷೇತ್ರಗಳಿಗೆ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಆಡಳಿತಾರೂಢ ಎಐಎಡಿಎಂಕೆ ಒಪ್ಪಂದಕ್ಕೆ ಬಂದಿವೆ. ಈ ಒಪ್ಪಂದಸೂತ್ರದ ಪ್ರಕಾರ ಬಿಜೆಪಿ ಮತ್ತು ಇತರ ಎನ್‌ಡಿಎ ಮಿತ್ರಪಕ್ಷಗಳು 15 ಹಾಗೂ ಎಐಎಡಿಎಂಕೆ ಮತ್ತು ಮಿತ್ರಪಕ್ಷಗಳು 25 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ.

ಮುಖ್ಯಮಂತ್ರಿ ಎಡಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಡಿಸಿಎಂ ಓ.ಪನ್ನೀರಸೆಲ್ವಂ ಅವರು ಕೇಂದ್ರ ಸಚಿವ ಪಿಯೂಶ್ ಗೋಯೆಲ್ ಜತೆಗೆ ಮೂರು ಗಂಟೆಗಳ ಸುದೀರ್ಘ ಚರ್ಚೆ ನಡೆಸಿದ ಬಳಿಕ ಈ ಒಪ್ಪಂದಕ್ಕೆ ಬರಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಬಿಜೆಪಿ ಎಂಟು, ಪಿಎಂಕೆ ನಾಲ್ಕು ಹಾಗೂ ಡಿಎಂಡಿಕೆ ಮೂರು ಸ್ಥಾನಗಳಿಗೆ ಸ್ಪರ್ಧಿಸಲಿವೆ. ಎಐಎಡಿಎಂಕೆ ಬಣದಲ್ಲಿ ಜಿ.ಕೆ.ವಾಸನ್ ಅವರ ಟಿಎಂಸಿ, ಎನ್.ರಂಗಸ್ವಾಮಿಯವರ ಎನ್‌ಆರ್‌ಸಿ, ಕೆ.ಕೃಷ್ಣಮೂರ್ತಿಯವರ ಪಿಟಿ ಪಾಲು ಪಡೆಯಲಿವೆ. ಆದರೆ ಎಲ್ಲ ಸಣ್ಣ ಪಕ್ಷಗಳಿಗೆ ಸ್ಪರ್ಧಿಸುವ ಅವಕಾಶ ದೊರಕುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಎಐಎಡಿಎಂಕೆ ಸಚಿವರಾದ ಪಿ.ತಂಗಮಣಿ ಹಾಗೂ ಎಸ್.ಪಿ.ವೇಲುಮಣಿ ಕೂಡಾ ಚೆನ್ಣೈನ ಅಲ್ವಾರ್‌ಪೇಟೆಯಲ್ಲಿರುವ ಉದ್ಯಮಿ ಪೊಲ್ಲಾಚಿ ಎಂ.ಮಹಾಲಿಂಗಂ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದರು. 2014ರಲ್ಲಿ ತಮಿಳುನಾಡಿನಲ್ಲಿ ಬಿಜೆಪಿ ಸಾಧಿಸಲಾಗದ ಮೆಗಾ ಮೈತ್ರಿಕೂಟವನ್ನು ಈ ಬಾರಿ ಸಾಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

"ಎಐಎಡಿಎಂಕೆ ಹಾಗೂ ಬಿಜೆಪಿ ಕೋಟಾಗಳಲ್ಲಿ ಆಯಾ ಪಕ್ಷಗಳ ಜತೆ ಗುರುತಿಸಿಕೊಂಡಿರುವ ಸಣ್ಣ ಪಕ್ಷಗಳಿಗೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುವುದು. ಎರಡನೇ ಸುತ್ತಿನ ಮಾತುಕತೆ ಮುಂದಿನ ವಾರ ನಡೆಯಲಿದ್ದು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸರಿಪಡಿಸಿ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News