ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಕಡಿಮೆ ವೇತನ, ಸೀಮಿತ ಸೌಲಭ್ಯ

Update: 2019-02-16 08:06 GMT

ಜಮ್ಮು, ಫೆ.16: ಪುಲ್ವಾಮಾದಲ್ಲಿ ಗುರುವಾರ ನಡೆದ ಆತ್ಮಹತ್ಯಾ ದಾಳಿಯಲ್ಲಿ 44 ಮಂದಿ ಸಿಆರ್‍ ಪಿಎಫ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಆದರೆ ಭಾರತೀಯ ಸೇನೆಗೆ ಹೋಲಿಸಿದರೆ ಇವರಿಗೆ ಕಡಿಮೆ ವೇತನ ನೀಡುತ್ತಿದ್ದ ಮತ್ತು ಕಡಿಮೆ ಸಂಪನ್ಮೂಲಗಳನ್ನು ಒದಗಿಸುತ್ತಿದ್ದ ಅಂಶ ಬೆಳಕಿಗೆ ಬಂದಿದೆ. ಈ ಬಗ್ಗೆ indiatoday.in ವರದಿ ಮಾಡಿದೆ.

ಮಾಜಿ ಹಿರಿಯ ಅಧಿಕಾರಿಯೊಬ್ಬರು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ. “ದಾಳಿಯಲ್ಲಿ ಮೃತಪಟ್ಟವರಲ್ಲಿ ದೇಶದ ಮೂಲೆ ಮೂಲೆಗಳಿಂದ ಅಂದರೆ ಈಶಾನ್ಯ ರಾಜ್ಯಗಳಿಂದ ಹಿಡಿದು ದಕ್ಷಿಣದ ತಮಿಳುನಾಡಿನಿಂದ ಬಂದ ಯೋಧರೂ ಸೇರಿದ್ದರು. ಅವರ ಕೆಲಸ ಭಾರತದ ಗಡಿಯನ್ನು ಕಾಯುವುದು ಹಾಗೂ ಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುವುದು. ಯಾವುದೇ ಗಡಿ ಸಂಘರ್ಷದ ಸಂದರ್ಭದಲ್ಲಿ ಮೊದಲು ಸ್ಪಂದಿಸುವವರು ಸಿಆರ್‍ಪಿಎಫ್ ಸಿಬ್ಬಂದಿ. ಇದು ಅವರ ಪ್ರಾಥಮಿಕ ಕಾರ್ಯಭಾರ" ಎಂದು ಮಾಜಿ ಮಹಾನಿರ್ದೇಶಕ ಪ್ರಣಯ್ ಸಹಾಯ್ ಹೇಳುತ್ತಾರೆ.

ಇವರು ಸೈನಿಕರ ಜತೆಜತೆಗೇ ಹೋರಾಡಿದರೂ ಇವರಿಗೆ ವೇತನ ಕಡಿಮೆ. ಇವರಿಗೆ ನೀಡುವ ತರಬೇತಿ ಮತ್ತು ಇತರ ಸೌಲಭ್ಯಗಳೂ ಸೀಮಿತ ಎಂದು ಅವರು ಹೇಳುತ್ತಾರೆ.

ಕೆಳಸ್ತರದ ಸೈನಿಕರು ಸಮಾನ ಅನುಭವದ ಸಿಆರ್‍ ಪಿಎಫ್ ಅಧಿಕಾರಿಗಿಂತ ಒಂದೂವರೆ ಪಟ್ಟು ವೇತನ ಪಡೆಯುತ್ತಾರೆ ಎಂದು ಅರೆಮಿಲಿಟರಿ ಪಡೆಗಳ ಕಲ್ಯಾಣ ಸಂಘಗಳ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ರಣಬೀರ್ ಸಿಂಗ್ ಹೇಳುತ್ತಾರೆ. ಇವರು ಪಡೆಯುವ ಪಿಂಚಣಿಯಲ್ಲೂ ವ್ಯತ್ಯಾಸವಿದೆ ಎಂದು ವಿವರಿಸುತ್ತಾರೆ. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ಗೃಹ ಇಲಾಖೆ ಅಧಿಕಾರಿಗಳು ನಿರಾಕರಿಸಿದ್ದಾರೆ.

ಸೈನಿಕರ ಜತೆ ಒಂದೇ ಸ್ಥಳದಲ್ಲಿ, ಒಂದೇ ತೆರನಾದ ಕೆಲಸವನ್ನು ಅಂಥದ್ದೇ ಪರಿಸ್ಥಿತಿಯಲ್ಲಿ ನಿರ್ವಹಿಸುತ್ತೇವೆ. ಆದರೂ ನಮ್ಮನ್ನು ಸಮಾನವಾಗಿ ಪರಿಗಣಿಸುವುದಿಲ್ಲ ಎಂದು ಸಿಆರ್‍ಪಿಎಫ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News