ನೋಡಬಹುದಾದ ಸಿನೆಮಾಗಳು

Update: 2019-02-18 18:39 GMT

ಈ ಉತ್ಸವದಲ್ಲಿ ನೋಡಲೇ ಬೇಕಾದ ಕೆಲವು ಸಿನೆಮಾಗಳು ಇಲ್ಲ: ಜಪಾನಿನ ನವೋಮಿ ಕವಾಸೆಯ ವಿಶನ್, ದಕ್ಷಿಣ ಕೊರಿಯಾದ ಕಿಮ್ ಕಿ ಡುಕ್‌ನ ಹ್ಯುಮನ್, ಸ್ಪೇಸ್, ಟೈಮ್, ಹ್ಯುಮನ್, ಫ್ರಾನ್ಸ್‌ನ ಜಿನ್ ಲೂಕ್ ಗೊದಾರ್ಡ್‌ನ ಇಮೇಜ್ ಬುಕ್, ಭಾರತದ ಲಿಜಿ ಜೋಸ್ ಪೆಲ್ಲಿಸೆರಿಯ ಮಲಯಾಳಂ ಸಿನೆಮಾ ಇ.ಮ.ಯೊ. ಹಾಗೂ ಭಾರತದ ಜಯರಾಜ್‌ನ ಮಲಯಾಳಂ ಸಿನೆಮಾ ಭಯಾನಕಂ. ಬಿಡಿ, ಯಾವ ಕಲಾಕೃತಿಯೂ ತನಗೆ ತಾನೇ ಪೂರ್ಣವಲ್ಲದಿರುವಾಗ, ಕಲಾ ಉತ್ಸವಗಳು ಪೂರ್ಣವೆಂದು ಭಾವಿಸಲಾಗದು. ಬೆಂಗಳೂರು ಉತ್ಸವದಲ್ಲಿ ಇರುವ, ನೋಡಬಹುದಾದವು ಎಂದು ನನಗನಿಸಿದ ಕೆಲವು ಸಿನೆಮಾಗಳು

ಇನ್ ದ ಫೇಡ್
ದೇಶ: ಜರ್ಮನಿ, ನಿರ್ದೇಶನ: ಫತಿಹ್ ಅಕಿನ್

ಟರ್ಕಿ ಮೂಲದವನಾದ ಫತಿಹ್ ಅಕಿನ್, ಜರ್ಮನ್ ಪ್ರಜೆ. ಆರ್ಮನ್ ಸಮಾಜದಲ್ಲಿ ಟರ್ಕಿ ಮೂಲದವರು ಎದುರಿಸುವ ಬದುಕು ಹಾಗೂ ಅಸ್ತಿತ್ವಗಳ ಬಿರುಕು ಬಿಕ್ಕಟ್ಟನ್ನು ಹರಿತವಾಗಿ ಕಾಣಿಸುವ ಅಕಿನ್‌ನ 2017ರ ಸಿನೆಮಾ ಇನ್ನೂ ಅಂತರ್‌ರಾಷ್ಟ್ರೀಯ ಉತ್ಸವಗಳಲ್ಲಿ ಚಾಲ್ತಿಯಲ್ಲ್ಲಿರುವುದೇ, ಅವನ ಸಿನೆಮಾ ಕೃತಿಗಳ ಕಸುವು ತೋರುತ್ತದೆ. ರಾಷ್ಟ್ರೀಯತೆಯ ಮೂಲದಿಂದ ಏಳುವ ಜನಾಂಗೀಯ ಬಿಕ್ಕಟ್ಟುಗಳನ್ನು ತನ್ನ ಸಿನೆಮಾಗಳ ಸತತ ವಸ್ತುವಾಗಿ ಮಾಡಿಕೊಂಡು ಹಲವು ಸ್ತರಗಳಲ್ಲಿ ಬಿರುಕುಗಳ ಕಾರಣ ಹುಡುಕುವಲ್ಲಿ ವ್ಯಸ್ತನಾಗಿರುವ ಅಕಿನ್, ಗಮನಿಸ ಬೇಕಾದ ಕೃತಿಕಾರ. ಪ್ರಸ್ತುತ ಸಿನೆಮಾ ಈ ಮಾತನ್ನು ಸುಳ್ಳಾಗಿಸುವುದಿಲ್ಲ.

***

ರೋಮ
ದೇಶ: ಮೆಕ್ಸಿಕೊ, ನಿರ್ದೇಶನ: ಅಲ್ಫನ್ಸೊ ಕ್ಯುರಾನ್


 ಪ್ರತಿಷ್ಠಿತ ವೆನಿಸ್ ಸಿನೆಮಾ ಉತ್ಸವದಲ್ಲಿ ಉನ್ನತ ಪ್ರಶಸ್ತಿ ಗಳಿಸಿರುವ ಈ ಸಿನೆಮಾ ಗಳಿಸಿರುವ ಖ್ಯಾತಿಗೆ ಅದು ಹಾಲಿವುಡ್‌ಗೆ ಮೆಚ್ಚುಗೆಯಾಗುವ ಶೈಲಿಯದು ಎಂಬುದೂ ಒಂದು. ಅದೆಂತಿದ್ದರೂ, ಒಂದು ದೇಶದ ಒಂದು ಕಾಲ ಸನ್ನಿವೇಶದಲ್ಲಿ, ಬಾಲ್ಯದ ನೆನಪಿನ ಕಥನವನ್ನು ಹೇಳುವ ಮೂಲಕ, ಆ ಕಾಲ ದೇಶದ ವರ್ಗ ವಿಭಜನೆ, ಸಾಮಾಜಿಕ ರಾಜಕೀಯವನ್ನೂ ಪರಿಚಯಿಸುವ ಪ್ರಾಮಾಣಿ ಕತೆಗಾಗಿ ನೋಡಬಹುದಾದ ಸಿನೆಮಾ. ಕಾಲದ ನಾಟಕೀಯತೆಯನ್ನು ಹಿಡಿದಿಡಲು ಕಟ್ಟಿದ ಚಿತ್ರಕತೆ ಹಾಗೂ ದೃಶ್ಯ ರಚನೆಗಳ ಅಚ್ಚುಕಟ್ಟು, ಈಗಾಗಲೇ ಸಂಪದ್ಭರಿತ ನಿರ್ಮಾಣಗಳ ಪರಿಚಿತ ದ್ರವ್ಯವಾಗಿದ್ದರೂ, ಆ ವೃತ್ತಿಪರತೆಯನ್ನು ಸಿನೆಮಾದಲ್ಲಿ ಕಡೆಗಣಿಸುವಂತಿಲ್ಲ.

***

ಅಟ್ ವಾರ್ 
ದೇಶ: ಫ್ರಾನ್ಸ್, ನಿರ್ದೇಶನ: ಸ್ಟಿಫಾನೆ ಬ್ರೈಝ್


 ಬಹುರಾಷ್ಟ್ರೀಯ ಉದ್ದಿಮೆಗಳ ಬಂಡವಾಳ ದಾಳದಾಟ, ಅವುಗಳ ಕೈ ಚೀಲವಾಗಿರುವ ಪ್ರಭುತ್ವಗಳ ತೋರಿಕೆಯ ಕಾರ್ಮಿಕ ಕಾಳಜಿ, ದಾಳದಾಟದಲ್ಲಿ ಬದುಕು ಕಳೆದುಕೊಳ್ಳುವ ಕಾರ್ಮಿಕರ ನೈಜ ಬಂಡಾಯ, ಬಂಡಾಯದ ಸೂತ್ರ ನಿಯಂತ್ರಿಸಲು ಮುಂದಾಗುವ ಕಾರ್ಮಿಕ ಸಂಘಟನೆಗಳ ಆಂತರಿಕ ಬಿಕ್ಕಟ್ಟು, ನಾಯತ್ವದ ನೈತಿಕ ತಾಕಲಾಟ, ಬಂಡವಾಳಶಾಹಿ ವ್ಯವಸ್ಥೆಯಲ್ಲಿರುವ ಮಾಲಕ-ಕಾರ್ಮಿಕ ಸಂಧಾನ ವ್ಯವಸ್ಥೆಯ ಜಾಳುತನ-ಎಲ್ಲವನ್ನೂ, ಉಸಿರು ಬಿಗಿ ಹಿಡಿದು ಹೇಳುವ ತವಕ ಈ ಸಿನೆಮಾಕ್ಕೆ ಇದೆ. ಈ ತವಕವೇ ಅದರ ಮಿತಿಯಾದರೂ, ನ್ಯಾಯಾನ್ಯಾಯ ಪ್ರಜ್ಞೆಯ ಜಿಜ್ಞಾಸೆ ಹಾಗೂ ವಾಸ್ತವಿಕ ವಿದ್ಯಮಾನಗಳಿಗೆ ಸಾಕ್ಷಿಯಾಗುವ ಪ್ರಾಮಾಣಿಕತೆಗಾಗಿಯೂ, ಇಂತಹ ವಸ್ತುವನ್ನು ಹಿಡಿದಿಡುವಂತೆ ಕಟ್ಟುವ ಬಗೆಗಾಗಿಯೂ, ಈ ಸಿನೆಮಾ ನೋಡಬಹುದು.

***

ಡಾನ್‌ಬಾಸ್
ದೇಶ: ಉಕ್ರೇನ್, ನಿರ್ದೇಶನ: ಸರ್ಗಿ ಲೊಝಿನಿಸ್ತಾ


ಲೊಝಿನಿಸ್ತಾನಿಗೆ ಕ್ಯಾನ್ಸ್‌ನಲ್ಲಿ ಉತ್ತಮ ನಿರ್ದೇಶಕ ಪ್ರಶಸ್ತಿ ತಂದುಕೊಟ್ಟ ಸಿನೆಮಾವಿದು. ರಶ್ಯಾ ಬೆಂಬಲಿತ ಉಕ್ರೇನಿನ ಆಡಳಿತ ಪ್ರಭುತ್ವ ಹಾಗೂ ಪ್ರತ್ಯೇಕತಾವಾದಿ ಸಶಸ್ತ್ರ ಬಣಗಳ ನಡುವೆ ನಡೆಯುತ್ತಿರುವ ಹಿಂಸಾತ್ಮಕ ಯುದ್ಧದ ಕಾಲದಲ್ಲಿ, ರಾಜಕೀಯ ಸೈದ್ಧಾಂತಿಕತೆ, ಬಣಗಳ ಹೋರಾಟದ ನೈಜತೆಗಳೇ ಪ್ರಶ್ನಾರ್ಹವಾಗಿವೆ; ಈ ಬಿಕ್ಕಟ್ಟಿನ ಕಾಲದಲ್ಲಿ ಅಧಿಕಾರಸ್ಥ ವರ್ಗದ ಜನರ ಬದುಕೇ ಅಬ್ಬರ ತೋರಿಕೆಗಳ ಅಣಕವಾಡುವಾಗಿದೆ- ಎಂಬ ಕಡೆಯಿಂದ ಆತಂರಿಕ ಯುದ್ಧದ ತಾಣವಾದ ಡಾನ್‌ಬಾಸ್ ನಗರದ ಸಾಮಾಜಿಕ ನಡಾವಳಿ, ರಾಜಕೀಯ ನಡೆಗಳನ್ನು ಮೊನಚು ವ್ಯಂಗ್ಯದಲ್ಲಿ ವಿಮರ್ಶಿಸುವ ಸಿನೆಮಾವಿದು. ಸತ್ಯಾಭಾಸ (ಪೋಸ್ಟ್ ಟ್ರೂತ್) ಕಾಲದ ಕಟು ವ್ಯಾಖ್ಯಾನವೆಂದು ಹೆಗ್ಗಳಿಕೆ ಪಡೆದಿರುವ ಈ ಸಿನೆಮಾವು, ಕೆಲವು ಭಾಗಗಳಲ್ಲಿ ಅದ್ಭುತ ರಾಜಕೀಯ ಟೀಕೆಯಾಗಿ ಗಮನ ಸೆಳೆಯುತ್ತದೆ.

***

ವುಮನ್ ಅಟ್ ವಾರ್
ದೇಶ: ಐಸ್ಲ್ಯಾಂಡ್, ನಿರ್ದೇಶನ: ಬೆಂಡಿಕ್ಟ್ ಎರ್ಲಿಂಗ್ಸನ್


ಸಮೃದ್ಧಿ ಹೊಂದಿರುವ ಪುಟ್ಟ ದ್ವೀಪ ರಾಷ್ಟ್ರದಿಂದ ಬಂದಿರುವ ಲವಲವಿಕೆಯ ಜನಪ್ರಿಯ ಶೈಲಿಯ ಸಿನೆಮಾವಿದು. ಬಹುರಾಷ್ಟ್ರೀಯ ಕಂಪೆನಿಯೊಂದು ದೇಶದ ಪರಿಸರವನ್ನು ಹಾಳುಗೆಡುವುತ್ತಿದ್ದು, ಪ್ರಭುತ್ವವು ಆ ಕಂಪೆನಿಯ ರಕ್ಷಣೆಗೆ ನಿಂತಿರುವುದನ್ನು ಏಕಾಂಗಿ ಗೆರಿಲ್ಲಾ ಮಾದರಿ ದಾಳಿಗಳಿಂದ ಪ್ರತಿಭಟಿಸುವ ಮಧ್ಯ ವಯಸ್ಸಿನ ಹೆಂಗಸೊಬ್ಬಳ ಹೋರಾಟದ ಕಥನವಿದು. ಸಮಸ್ಯೆಯ ಗಂಭೀರತೆಯ ಭಾರವನ್ನು ಹಗುರವಾದ ರೋಚಕ ಹಾಸ್ಯ ಶೈಲಿಯಲ್ಲಿ ಕಟ್ಟುವ ರಾಜಕೀಯ ವ್ಯಂಗ್ಯದ ಈ ಸಿನೆಮಾ ತೀರ ಅಪರೂಪದ್ದೇನೂ ಅಲ್ಲ. ಆದರೆ, ಗಂಭೀರವಾದ ವಸ್ತುವನ್ನು, ಅದರ ಗಾಂಭೀರ್ಯಕ್ಕೆ ವಿರೋಧಾಭಾಸ ಆಗದ ಹಾಗೆ, ಚುರುಕು ವ್ಯಂಗ್ಯ ಪ್ರಹಸನ ಶೈಲಿಯಲ್ಲಿ, ಪ್ರೇಕ್ಷಕರನ್ನು ಹಿಡಿದಿಡುವಂತೆ ಕಟ್ಟಿರುವುದು, ಪಾತ್ರಗಳು ಪ್ರಕಟಿಸುವ ಸ್ವವ್ಯಂಗ್ಯ ಮತ್ತು ಸುಲಲಿತ ರಾಜಕೀಯ ವಿಡಂಬನೆಗಳಿಂದ ಜನಪ್ರಿಯ ಸಿನೆಮಾ ಕಟ್ಟುವಿಕೆಗೆ ಒಳ್ಳೆ ಮಾದರಿಯಾಗಿದೆ. (ಬೇರೆ ನೋಡಲೇ ಬೇಕಾದ ಸಿನೆಮಾಗಳ ಆಯ್ಕೆ ಇದ್ದಲ್ಲಿ ಬಿಟ್ಟರೂ ಅಡ್ಡಿ ಇಲ್ಲ).

Writer - ಕೆ. ಫಣಿರಾಜ್

contributor

Editor - ಕೆ. ಫಣಿರಾಜ್

contributor

Similar News

ಜಗದಗಲ
ಜಗ ದಗಲ