ಪುಲ್ವಾಮ ದಾಳಿಯ ದಿನ ಬಿಜೆಪಿಯ ಪ್ರಮುಖ ನಾಯಕರು ಎಲ್ಲೆಲ್ಲಿ, ಏನೇನು ಮಾಡಿದ್ದರು ಗೊತ್ತಾ?

Update: 2019-02-19 12:29 GMT

#ರಕ್ಷಣಾ ವೈಫಲ್ಯ ಮರೆಮಾಚಲು ಯುದ್ಧೋನ್ಮಾದದ ಹಿಂದೆ ಬಿದ್ದ ಪತ್ರಕರ್ತರು

ಫೆಬ್ರವರಿ 14ರಂದು ಸಿಆರ್ ಪಿಎಫ್ ವಾಹನದ ಮೇಲೆ ಜೈಶ್ ಸಂಘಟನೆಯ ಉಗ್ರನೊಬ್ಬ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಸೈನಿಕರು ಹುತಾತ್ಮರಾಗಿದ್ದು, ಈ ಘಟನೆಯಿಂದ ದೇಶವೇ ಬೆಚ್ಚಿಬಿದ್ದಿತ್ತು. ಉಗ್ರರ ಅಟ್ಟಹಾಸಕ್ಕೆ ದೇಶದ ಸೈನಿಕರು ಬಲಿಯಾದರು. ಈ ನಡುವೆ ದೇಶದ ಮಾಧ್ಯಮಗಳು ತಮ್ಮ ಸ್ಟುಡಿಯೋಗಳಲ್ಲಿ ಯುದ್ಧೋನ್ಮಾದದ ಭಾಷಣಗಳನ್ನು ಮಾಡುತ್ತಾ ಅಬ್ಬರಿಸಿದವು. ಪ್ರತೀಕಾರ, ಯುದ್ಧ ಎಂದೆಲ್ಲಾ ಬೊಬ್ಬಿಡುತ್ತಿದ್ದ ಆ್ಯಂಕರ್ ಗಳು 3 ದಶಕಗಳಲ್ಲೇ ಭೀಕರ ಎನಿಸಿಕೊಂಡ ದಾಳಿಯಲ್ಲಿ ಸರಕಾರದ ವೈಫಲ್ಯದ ಬಗ್ಗೆ ಮೌನವಾಗಿಯೇ ಇದ್ದರು.

ಈ ಬಗ್ಗೆ ಹಿರಿಯ ಪತ್ರಕರ್ತ ಅಭಿಸಾರ್ ಶರ್ಮ ಕೇಳಿರುವ ಪ್ರಶ್ನೆಗಳು ಹೀಗಿವೆ…

ಪುಲ್ವಾಮ ದಾಳಿ ನಡೆದ ದಿನ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತಮ್ಮ ಚೊಚ್ಚಲ ಸುದ್ದಿಗೋಷ್ಠಿಯನ್ನು ರದ್ದುಗೊಳಿಸಿದ್ದರು. ಆದರೆ ಬಿಜೆಪಿ ನಾಯಕರ ವಿಷಯದಲ್ಲಿ ಹೀಗಾಗಲಿಲ್ಲ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಯೋಧರು ಹುತಾತ್ಮರಾದ ದಿನವೇ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ನಡೆಸಿದರು. ಉಗ್ರರ ದಾಳಿಯಿಂದ 40ಕ್ಕೂ ಅಧಿಕ ಯೋಧರು ಹುತಾತ್ಮರಾಗಿ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿರಬೇಕಾದರೆ ಬಿಜೆಪಿ ಸಮಾವೇಶದಲ್ಲಿ ಅಮಿತಾ ಭಾಷಣ ಮಾಡಿದ್ದು ರಾಮ ಮಂದಿರದ ಬಗ್ಗೆ. ನಾವು ಅಧಿಕಾರಕ್ಕೆ ಬಂದರೆ ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಿಸುತ್ತೇವೆ ಎಂದು ಬಿಜೆಪಿ ಅಧ್ಯಕ್ಷರು ಹೇಳಿದರು.

ಇದೇ ಸಮಯ ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಕೇರಳದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡುತ್ತಿದ್ದರು. ಇದಕ್ಕೆ ಸಾಕ್ಷಿಯಾಗಿ ಕೇರಳ ಬಿಜೆಪಿ ಮಾಡಿದ ಟ್ವೀಟ್ ಇದೆ. ಮತ್ತೊಂದೆಡೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ತಮಿಳುನಾಡಿನಲ್ಲಿ ಬಿಜೆಪಿಯ ಮೈತ್ರಿ ಪಕ್ಷಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಇವರ ಜೊತೆಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಕೂಡ ಇದ್ದರು.

ಇತ್ತ ದೆಹಲಿಯಲ್ಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ರಂಜಿಸುತ್ತಿದ್ದರು. ಈ ಬಿಜೆಪಿ ನಾಯಕರಿಗೆ ನಾಚಿಕೆಯಿಲ್ಲವೇ..??, ಮಾಧ್ಯಮಗಳೇಕೆ ಇವರ ಬಗ್ಗೆ ವರದಿ ಮಾಡುತ್ತಿಲ್ಲ?. ಆದರೆ ನಮ್ಮ ದೇಶದ ಮಾಧ್ಯಮಗಳು ಪುಲ್ವಾಮ ದಾಳಿ ಖಂಡಿಸಿದ ಕಾಂಗ್ರೆಸ್ ಬಗ್ಗೆ ವರದಿಯೊಂದನ್ನು ಬಿತ್ತರಿಸುತ್ತದೆ. ಪುಲ್ವಾಮ ದಾಳಿಯನ್ನು ಖಂಡಿಸುವ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಾಯಕರು ಪಾಕಿಸ್ತಾನದ ಹೆಸರನ್ನು ಹೇಳಿಲ್ಲ ಎಂದು ರಿಪಬ್ಲಿಕ್ ಭಾರತ್ ವರದಿ ಮಾಡುತ್ತದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಟೈಮ್ಸ್ ನೌ, ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿಯವರಿಗೆ ನೀಡಲಾದ ಭದ್ರತೆಯನ್ನು ಹಿಂದಕ್ಕೆ ಪಡೆಯಬೇಕು ಎನ್ನುವ ವರದಿಗಳನ್ನು ಪ್ರಕಟಿಸುತ್ತದೆ!.

ಇಲ್ಲಿ ಕೇಳಬೇಕಾದ ಪ್ರಶ್ನೆಯೆಂದರೆ ಮಾಜಿ ಮುಖ್ಯಮಂತ್ರಿಗಳನ್ನು ಈ ಮಾಧ್ಯಮಗಳು ಹುರಿಯತ್ ನಾಯಕರ, ಆತಂಕವಾದಿಗಳ ಸ್ಥಾನದಲ್ಲಿ ಇಟ್ಟಿದೆಯೇ? ಎಂದು. ಹಾಗಾದರೆ ಪಿಡಿಪಿ ಜೊತೆ ಬಿಜೆಪಿ ಮೈತ್ರಿಯಿಂದ ಸರಕಾರ ಸ್ಥಾಪಿಸಿದಾಗ ಈ ಕೆಲಸ ಏಕೆ ಕಷ್ಟವಾಗಿತ್ತು?, ಆದರೆ ಪ್ರಶ್ನೆ ಇದಲ್ಲ, ಜಮ್ಮು ಕಾಶ್ಮೀರದ ಪ್ರಮುಖ ನಾಯಕರನ್ನು ಪ್ರತ್ಯೇಕತಾವಾದಿಗಳಂತೆ ಬಿಂಬಿಸುವ, ದೂರವಿಡುವ ಹಿಂದಿನ ಷಡ್ಯಂತ್ರವೇನು?.

ಮಾಧ್ಯಮಗಳು ಈ ಎಲ್ಲಾ ಸುದ್ದಿಗಳನ್ನು ವೀಕ್ಷಕರ ಮುಂದಿಟ್ಟು ಪುಲ್ವಾಮ ದಾಳಿಯ ಹಿಂದಿನ ಭಾರೀ ರಕ್ಷಣಾ ವೈಫಲ್ಯವನ್ನೇ ಮುಚ್ಚಿ ಹಾಕಿತು. ಸಾಧ್ಯವಿದ್ದರೆ ನಾನು ಈ ಮೊದಲು ಹೇಳಿದ ವಿಚಾರಗಳ ಬಗ್ಗೆ ಮಾಧ್ಯಮಗಳು ಬಿಜೆಪಿ ನಾಯಕರನ್ನು ಪ್ರಶ್ನಿಸಲಿ.

ಪುಲ್ವಾಮ ದಾಳಿ ನಡೆದ ದಿನ ಕಾಂಗ್ರೆಸ್, ಆರ್ ಎಲ್ ಡಿ, ಆಪ್ ಎಲ್ಲರೂ ತಮ್ಮ ರ್ಯಾಲಿಗಳನ್ನು , ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದರು. ಆದರೆ ಬಿಜೆಪಿ ಮರುದಿನವಷ್ಟೇ ತನ್ನ ಕಾರ್ಯಕ್ರಮಗಳನ್ನು ರದ್ದುಪಡಿಸಿತ್ತು. ಮೋದಿಯವರು ಇಟಾರ್ಸಿಯಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಕಾರ್ಯಕ್ರಮವಿತ್ತು. ಆದರೆ ಮರುದಿನ ಬೆಳಗ್ಗಿನವರೆಗೆ ಅದು ರದ್ದಾಗಿರಲಿಲ್ಲ.

ಮಾಧ್ಯಮಗಳು ಗುಪ್ತಚರ ವೈಫಲ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಿಲ್ಲ. ನಾನೀಗ ಕೆಲವು ವಿಚಾರಗಳನ್ನು ನಿಮ್ಮ ಮುಂದಿಡಲು ಬಯಸುತ್ತೇನೆ.

ಪುಲ್ವಾಮ ದಾಳಿಗೂ ಕೆಲ ದಿನಗಳ ಮೊದಲು ದಕ್ಷಿಣ ಶ್ರೀನಗರದ ಸಿಆರ್ ಪಿಎಫ್ ಡಿಐಜಿಗೆ ಕಾಶ್ಮೀರ ಪೊಲೀಸರು ಪತ್ರವೊಂದನ್ನು ಬರೆದಿದ್ದರು. “ಸೈನಿಕರನ್ನು ನಿಯೋಜಿಸುವ ಮೊದಲು ಸ್ಥಳ ಪರೀಕ್ಷಿಸಿ. ಏಕೆಂದರೆ ಐಇಡಿ ಬಳಕೆಯ ಬಗ್ಗೆ ನಮಗೆ ಮಾಹಿತಿ ಲಭಿಸಿದೆ. ತುರ್ತು ಎಚ್ಚರಿಕೆ…” ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

ಫೆ.6ರಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ರಿಗೆ ಪತ್ರಕರ್ತರು ಪ್ರಶ್ನೆಯೊಂದನ್ನು ಕೇಳಿದ್ದರು. ‘ಗುಪ್ತಚರ ವರದಿಗಳು ಲಭಿಸುತ್ತಿವೆ. ಆತಂಕವಾದಿಗಳ ದಾಳಿ ನಡೆಯಬಹುದೆಂಬ ಮಾಹಿತಿಗಳಿವೆ. ಈ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ?” ಎಂಬ ಪ್ರಶ್ನೆ ಸೇನಾ ಮುಖ್ಯಸ್ಥರು ಉತ್ತರಿಸದೆ ಹೋಗಿದ್ದರು. ಈ ದಾಳಿಗೆ ಹಿಂದಿನಿಂದಲೂ ಸಿದ್ಧತೆ, ತಯಾರಿ ನಡೆದಿತ್ತು ಎಂದು ನನಗನಿಸುತ್ತಿದೆ. ಏಕೆಂದರೆ…

ಜನವರಿ 17ರಂದು ಶ್ರೀನಗರದ ಕೇಂದ್ರ ರಾಜ್ ಭಾಗ್ ಪ್ರದೇಶಕ್ಕೆ ಗ್ರೆನೇಡ್ ಒಂದನ್ನು ಎಸೆಯಲಾಗುತ್ತದೆ. ಈ ಪ್ರದೇಶದಲ್ಲಿ ಮನೆಗಳು, ಕಚೇರಿಗಳು, ಮಾಧ್ಯಮ ಕಚೇರಿಗಳಿವೆ. ಈ ಘಟನೆಯಲ್ಲಿ ಹಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದರು. ವಿಶೇಷವೆಂದರೆ ಈ ದಾಳಿ ಹಿಂದೆ ಇದ್ದದ್ದು ಪುಲ್ವಾಮ ದಾಳಿ ನಡೆಸಿದ ಅದೇ ಜೈಶ್ ಸಂಘಟನೆ. ಇದಾಗಿ 48 ಗಂಟೆಗಳಲ್ಲಿ ಶ್ರೀನಗರದ ಶೋಪಿಯಾನದಲ್ಲಿ ಮತ್ತೊಂದು ದಾಳಿ ನಡೆಯಿತು.

ಫೆಬ್ರವರಿ 10ರಂದು ಶ್ರೀನಗರದ ಲಾಲ್ ಚೌಕ್ ನ ಸಿಆರ್ ಪಿಎಫ್ ಕಂಟೆಂಜೆಂಟ್ ಮೇಲೆ ಗ್ರೆನೇಡ್ ದಾಳಿ ನಡೆಯಿತು. ಈ ದಾಳಿಯಲ್ಲಿ 11 ಜನರು ಗಾಯಗೊಂಡಿದ್ದರು. ಪದೇ ಪದೇ ದಾಳಿ ನಡೆದರೂ, ಸಂಭಾವ್ಯ ದಾಳಿಯೊಂದರ ಎಚ್ಚರಿಕೆಯಿದ್ದರೂ, ಗುಪ್ತಚರ ಇಲಾಖೆಯ ಮಾಹಿತಿಯಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ.

2000ದಿಂದ 2500 ಮಂದಿ ಸೈನಿಕರು ಬಂದೋಬಸ್ತ್ ಇಲ್ಲದ ಬಸ್ ಗಳಲ್ಲಿ ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಿದ್ದರು. ಪ್ರಧಾನಿ, ರಾಜ್ಯಪಾಲರು, ಸಚಿವರು, ಸಿಎಂಗಳು ಯಾವುದಾದರೂ ರಸ್ತೆಯಲ್ಲಿ ತೆರಳುವುದಾದರೆ ಜನರನ್ನು ಬದಿಗೆ ಸರಿಸಲಾಗುತ್ತದೆ. ಆದರೆ ಈ ರೀತಿಯ ಗುಪ್ತಚರ ವರದಿಗಳಿದ್ದರು ಎಚ್ಚರ ವಹಿಸಿಲ್ಲ ಏಕೆ?.

ಈ ಬಗ್ಗೆ ಸಿಆರ್ ಪಿಎಫ್ ನ ಹಿಂದಿನ ಐಜಿ ಯುಪಿಎಸ್ ಪನ್ವಾರ್ ಹೇಳುವುದು ಹೀಗೆ… “2000 ಯೋಧರನ್ನು 300 ಕಿ.ಮೀ. ದೂರದವರೆಗೆ 78 ಬಸ್ ಗಳಲ್ಲಿ ಸಾಗಿಸುವುದು ಸರಿಯೇ ಅಲ್ಲ. ಅವರನ್ನು ವಿಮಾನದಲ್ಲಿ ಕರೆದೊಯ್ಯಬೇಕಾಗಿತ್ತು” ಎಂದು.

ಇನ್ನೊಂದು ವಿಚಾರವೆಂದರೆ 2018ರ ಮೊದಲು ಪ್ರತಿ ವರ್ಷ ಭಾರತ ಸರಕಾರ ಉಗ್ರ ಮಸೂದ್ ಅಝರ್ ಗೆ ದಿಗ್ಬಂಧನ ವಿಧಿಸಬೇಕು ಎಂದು ಒತ್ತಾಯಿಸುತ್ತಲೇ ಬಂದಿತ್ತು. ಆದರೆ ಸಂಯುಕ್ತ ರಾಷ್ಟ್ರದಲ್ಲಿ ಭಾರತದ ಈ ಆಗ್ರಹವನ್ನು ಚೀನಾ ತಡೆಯುತ್ತಲೇ ಇತ್ತು. 2018ರಲ್ಲಿ ವೂಹಾನ್ ಶೃಂಗಸಭೆ ನಡೆದು ಮೋದಿ ಮತ್ತು ಚೀನಾ ಅಧ್ಯಕ್ಷರ ನಡುವೆ ಮಾತುಕತೆ ನಡೆಯಿತು. ಆದರೆ ಮೋದಿ ಮಸೂದ್ ಅಝರ್ ವಿಚಾರವನ್ನು ಎತ್ತಲೇ ಇಲ್ಲ. ಈ ಬಗ್ಗೆ ಮಾಧ್ಯಮಗಳೇಕೆ ಪ್ರಶ್ನಿಸುತ್ತಿಲ್ಲ.?.

ಇನ್ನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡಿದ್ದ ಜನರಲ್ ಹೂಡಾ, “ಸರಕಾರ ಎಚ್ಚರಿಕೆ ವಹಿಸಬೇಕು. ಈಗ 10 ವರ್ಷದಲ್ಲೇ ಅಧಿಕ ಎಂಬಂತೆ ಸುರಕ್ಷತೆಯ ಸಮಸ್ಯೆ ಹೆಚ್ಚಿದೆ. ಇಲ್ಲಿ ಸರ್ಜಿಕಲ್ ಸ್ಟ್ರೈಕ್ ನಲ್ಲಿ ನಮ್ಮ ಯೋಧರು ಹುತಾತ್ಮರಾಗುತ್ತಿದ್ದಾರೆ. ನಾವು ಎಲ್ಲರನ್ನೂ ಮೂರ್ಖರನ್ನಾಗಿಸುವುದನ್ನು ನಿಲ್ಲಿಸಬೇಕು” ಎಂದಿದ್ದರು.

ಆದರೆ ಇದ್ಯಾವುದನ್ನೂ ಗಂಭೀರ ವಿಷಯಗಳನ್ನಾಗಿ ಮಾಡದ, ಸರಕಾರವನ್ನು ಪ್ರಶ್ನಿಸದ ಮಾಧ್ಯಮಗಳು ಇಂದು ಯುದ್ಧೋತ್ಸಾಹದ ರಣನೀತಿಯನ್ನು ಸ್ಟುಡಿಯೋಗಳಲ್ಲಿ ರೂಪಿಸುತ್ತಿರುವುದು ವಿಪರ್ಯಾಸವಲ್ಲವೇ?.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News