ಕಾಂಗ್ರೆಸ್‌ನಿಂದ ಮಾತ್ರ ಅಚ್ಛೇ ದಿನ್ ಸಾಧ್ಯ: ಡಿಸಿಎಂ ಡಾ.ಜಿ.ಪರಮೇಶ್ವರ್

Update: 2019-02-19 12:58 GMT

ಮಡಕಶಿರಾ(ಆಂಧ್ರಪ್ರದೇಶ), ಫೆ.19: ಪ್ರಧಾನಿ ನರೇಂದ್ರಮೋದಿಯಿಂದ ಯಾವ ಅಚ್ಛೇ ದಿನ್ ಕೂಡ ಬರುವುದಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮಾತ್ರ ಈ ದೇಶಕ್ಕೆ ಅಚ್ಛೇ ದಿನ್ ಬರುತ್ತದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ಮಂಗಳವಾರ ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿಯು ಅನಂತಪುರ ಜಿಲ್ಲೆಯ ಮಡಕಶಿರಾದಲ್ಲಿ ಆಯೋಜಿಸಿದ್ದ ‘ಕಾಂಗ್ರೆಸ್ ಪ್ರಜಾಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿ ಸುಳ್ಳು ಆಶ್ವಾಸನೆ ನೀಡಿ ಐದು ವರ್ಷ ಅತ್ಯಂತ ಕೆಟ್ಟ ಆಡಳಿತ ನೀಡಿದ್ದಾರೆ ಎಂದು ದೂರಿದರು.

ಯುವಕರಿಗೆ ಉದ್ಯೋಗ ಸೃಷ್ಟಿಸುವುದಾಗಿ ಹೇಳಿ, ಯಾವುದನ್ನೂ ಈಡೇರಿಸಿಲ್ಲ. ಹಾಗಿದ್ದರೆ, ಅಚ್ಛೇ ದಿನ್ ಯಾವಾಗ ಬರಲಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಚ್ಛೇ ದಿನ್ ಅನ್ನುವುದು ಕನಸಿನ ಮಾತು. ದೇಶದ ಅಭಿವೃದ್ಧಿಯ ಮಂತ್ರ ಪಠಿಸುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಮಾತ್ರ ಅಚ್ಛೇ ದಿನ್ ಬರಲಿದೆ ಎಂದು ಅವರು ಹೇಳಿದರು.

ನಮ್ಮ ಯುವ ನಾಯಕ ರಾಹುಲ್ ಗಾಂಧಿ ಪ್ರಧಾನಿಯಾದರೆ ಬಹುತೇಕ ಎಲ್ಲ ಭರವಸೆಯನ್ನು ಈಡೇರಿಸಲಿದ್ದಾರೆ. ಐದು ವರ್ಷ ಹುಸಿ ಭರವಸೆಯಲ್ಲೇ ಆಡಳಿತ ನಡೆಸಿದ ಮೋದಿ, ಈಗ ಮತ್ತೊಮ್ಮೆ ಮತ ಕೇಳಲು ಬರುತ್ತಿದ್ದಾರೆ. ಜನರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ಕೇಂದ್ರದಲ್ಲಿ ಕಾಂಗೆಸ್ ಅಧಿಕಾರದಲ್ಲಿದ್ದಾಗ ಆಂಧ್ರ ಹಾಗೂ ತೆಲಂಗಾಣ ಎಂದು ಎರಡು ರಾಜ್ಯಗಳನ್ನಾಗಿ ವಿಭಜಿಸಿ ಅಭಿವೃದ್ಧಿಗೆ ಸಹಕಾರವಾಗುವಂತೆ ಮಾಡಲಾಗಿದೆ. ಹಿಂದುಳಿದ ಭಾಗವನ್ನು ಅಭಿವೃದ್ಧಿ ಮಾಡಲು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ಅವರ ಅವಧಿಯಲ್ಲಿ 371 ಜೆ ಕಾಲಂನನ್ನು ತಿದ್ದುಪಡಿ ಮಾಡಲಾಯಿತು ಎಂದು ಅವರು ಹೇಳಿದರು. ಆಂಧ್ರದ ಈ ಭಾಗ ಸಂಪೂರ್ಣ ಹಿಂದುಳಿದಿದ್ದು, ಇದರ ಅಭಿವೃದ್ಧಿಗೆ ಕಾಂಗ್ರೆಸ್ ಸದಾ ನಿಮ್ಮೊಂದಿಗಿರಲಿದೆ. ಹೀಗಾಗಿ ಪ್ರತಿಯೊಬ್ಬರು ಕಾಂಗ್ರೆಸ್ ಮತ್ತೊಮ್ಮೆ ಆಡಳಿತಕ್ಕೆ ಬರುವಂತೆ ಆಶೀರ್ವದಿಸಬೇಕು ಎಂದು ಮನವಿ ಮಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ರೈತರ ಸಾಲಮನ್ನಾ, ರಸ್ತೆ ಅಭಿವೃದ್ಧಿ ಸೇರಿದಂತೆ ಸಾಕಷ್ಟು ಕೆಲಸ ಮಾಡಿದ್ದೇವೆ. ಆಂಧ್ರಪ್ರದೇಶ ನೆರೆ ರಾಜ್ಯವಾದ್ದರಿಂದ ನಮ್ಮ ಸಹಕಾರ ನಿಮ್ಮೊಂದಿಗಿದೆ ಎಂದರು.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಸಿಗಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸಿ, ರಾಹುಲ್ ಗಾಂಧಿಯವರನ್ನು ಪ್ರಧಾನಮಂತ್ರಿಯಾಗಿ ಮಾಡಬೇಕೆಂದು ಕರೆ ನೀಡಿದರು.

ಆಂಧ್ರ ಜನರಿಗೆ ಈ ಹಿಂದೆ ಪಕ್ಷದ ರಾಷ್ಟ್ರೀಯ ನಾಯಕಿ ಸೋನಿಯಾ ಗಾಂಧಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಈಗ ಆಂಧ್ರ ಸಮಗ್ರ ಪ್ರಗತಿಗೆ ಅನುವಾಗುವಂತೆ ನೀವೆಲ್ಲರೂ ಕಾಂಗ್ರೆಸ್ ಕೈ ಹಿಡಿಯಬೇಕು. ಕಾಂಗ್ರಸ್ಸಿಗೆ ಶಕ್ತಿ ತುಂಬಬೇಕು. ಹಿಂದೆ ಪಕ್ಷ ಕಷ್ಟದಲ್ಲಿದ್ದಾಗ 38 ಸ್ಥಾನಗಳನ್ನು ತಂದು ಕೊಟ್ಟು, ಅಧಿಕಾರ ಹಿಡಿಯುವಂತೆ ಮಾಡಿದ್ದೀರಿ. ಈಗ ಅದರ ಪುನರಾವರ್ತನೆ ಮಾಡಿ ಎಂದು ಅವರು ಮನವಿ ಮಾಡಿದರು.

ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜಶೇಖರರೆಡ್ಡಿ ಯಾರೊಬ್ಬರ ಮನೆಯ ಆಸ್ತಿ ಅಲ್ಲ. ಅವರು ಕಾಂಗ್ರೆಸ್ ಆಸ್ತಿ. ಇಡೀ ಆಂಧ್ರದ ಆಸ್ತಿ. ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅವರು ಕೂಡ ಪಕ್ಷಕ್ಕೆ ದುಡಿದಿದ್ದಾರೆ. ಯಾರೋ ಒಬ್ಬರು ಅವರ ಹೆಸರನ್ನು ಹೈಜಾಕ್ ಮಾಡಿದರೆ ಆಂಧ್ರ ಜನ ಅದನ್ನು ನೋಡಿಕೊಂಡು ಸುಮ್ಮನೆ ಇರುವುದಿಲ್ಲ ಎಂದು ಅವರು ತಿಳಿಸಿದರು.

ರಾಜಕೀಯದಲ್ಲಿ ಮುನ್ನಡೆ, ಹಿನ್ನಡೆ ಇದ್ದದ್ದೇ. ಅದಕ್ಕೆ ಯಾರೂ ಧೃತಿಗೆಡುವ ಅಗತ್ಯವಿಲ್ಲ. ದೇವೇಗೌಡರು, ವಾಜಪೇಯಿಯವರು ಏಳುಬೀಳುಗಳ ನಡುವೆ ಪ್ರಧಾನಿ ಹುದ್ದೆಗೇರಿದ ನಿದರ್ಶನ ನಮ್ಮೆಲ್ಲರ ಕಣ್ಣೆದುರಿಗೇ ಇದೆ. ಹೀಗಾಗಿ ಹಿಂದಿನ ಚುನಾವಣೆಯಲ್ಲಿ ಆದ ಹಿನ್ನಡೆ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಅವರು ಕಾರ್ಯಕರ್ತರಿಗೆ ಹೇಳಿದರು.

ಮುಂದೆ ರಾಜ್ಯ ಹಾಗೂ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಕಾಂಗ್ರೆಸ್. ನೀವು ಬರೀ ಪ್ರೀತಿ ತೋರಿಸಿದರೆ ಸಾಲದು. ಆ ಪ್ರೀತಿ ಮತಗಳಾಗಿ ಪರಿವರ್ತನೆ ಆಗಬೇಕು. ವೈಎಸ್ಸಾರ್ ಪಾರ್ಟಿ, ಟಿಡಿಪಿ ಏನಾದರೂ ಹೇಳಿಕೊಳ್ಳಲಿ. ಆದರೆ ಈ ದೇಶದ ಪ್ರಗತಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಆಂಧ್ರಕ್ಕೆ ಪ್ರತ್ಯೇಕ ಸ್ಥಾನಮಾನ ಸಿಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ಶಿವಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಆಂಧ್ರಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಘುವೀರರೆಡ್ಡಿ ಸೇರಿದಂತೆ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News