ಪುಲ್ವಾಮಾ ಘಟನೆ: ಅಮೆರಿಕ ಪ್ರತಿಕ್ರಿಯೆ ಏನು ಗೊತ್ತೇ?

Update: 2019-02-20 03:45 GMT

ವಾಷಿಂಗ್ಟನ್, ಫೆ.20: ಜೈಶ್ ಎ ಮುಹಮ್ಮದ್ ಸಂಘಟನೆಯ ಉಗ್ರರು ಪುಲ್ವಾಮಾದಲ್ಲಿ ಆತ್ಮಹತ್ಯಾ ದಾಳಿ ನಡೆಸಿ 40 ಮಂದಿ ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ ಘಟನೆ "ಭಯಾನಕ ಚಿತ್ರಣ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಘಟನೆಯ ಬಗ್ಗೆ ವಿವರವಾದ ವರದಿ ತರಿಸಿಕೊಂಡು ಅಧಿಕೃತ ಹೇಳಿಕೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಈ ಮಧ್ಯೆ ಅಮೆರಿಕದ ರಕ್ಷಣಾ ಇಲಾಖೆಯ ಉಪ ವಕ್ತಾರ ರಾಬರ್ಟ್ ಪಲ್ಲಾಡಿನೊ ಭಾರತಕ್ಕೆ "ಪ್ರಬಲ ಬೆಂಬಲ" ವ್ಯಕ್ತಪಡಿಸಿದ್ದು, "ಇದಕ್ಕೆ ಕಾರಣರಾದವರನ್ನು ಪಾಕಿಸ್ತಾನ ಶಿಕ್ಷಿಸಬೇಕು" ಎಂದು ಆಗ್ರಹಿಸಿದ್ದಾರೆ.

ಪುಲ್ವಾಮಾ ಘಟನೆ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಹದಗೆಡುತ್ತಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ, "ದಕ್ಷಿಣ ಏಷ್ಯಾದ ಈ ಎರಡು ದೇಶಗಳು ಜತೆಜತೆಗೆ ಸಾಗಿದರೆ ಅದ್ಭುತ" ಎಂದು ಟ್ರಂಪ್ ಉತ್ತರಿಸಿದರು.

"ನಾನು ಈ ಘಟನೆಯನ್ನು ಗಮನಿಸಿದ್ದೇನೆ. ಈ ಬಗ್ಗೆ ಹಲವು ವರದಿಗಳನ್ನು ಪಡೆದಿದ್ದೇನೆ. ಸೂಕ್ತ ಸಮಯದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತೇನೆ" ಎಂದು ಅವರು ಸ್ಪಷ್ಟಪಡಿಸಿದರು.

"ಉಗ್ರರ ದಾಳಿ ಭಯಾನಕ ಸ್ಥಿತಿ ನಿರ್ಮಿಸಿದೆ. ನಾವು ಈ ಬಗ್ಗೆ ವರದಿ ಪಡೆಯುತ್ತಿದ್ದು, ಹೇಳಿಕೆ ನೀಡಲಿದ್ದೇವೆ" ಎಂದರು.

ಪ್ರತ್ಯೇಕ ಪತ್ರಿಕಾಗೋಷ್ಠಿ ನಡೆಸಿದ ರಕ್ಷಣಾ ಇಲಾಖೆ ಉಪ ವಕ್ತಾರರು, "ಭಾರತದ ಜತೆ ನಾವು ನಿಕಟ ಸಂಪರ್ಕದಲ್ಲಿದ್ದೇವೆ. ಕೇವಲ ಶೋಕ ವ್ಯಕ್ತಪಡಿಸಿರುವುದು ಮಾತ್ರವಲ್ಲದೇ ಪ್ರಬಲ ಬೆಂಬಲವನ್ನೂ ಸೂಚಿಸಿದ್ದೇವೆ" ಎಂದು ಹೇಳಿದರು.

"ದಾಳಿ ಘಟನೆ ಬಗ್ಗೆ ಪಾಕಿಸ್ತಾನ ತನಿಖೆಗೆ ಸಹಕರಿಸಬೇಕು ಹಾಗೂ ಇದಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕು. ಪುಲ್ವಾಮಾ ಘಟನೆ ಬಳಿಕ ಪಾಕಿಸ್ತಾನದ ಜತೆಗೂ ಅಮೆರಿಕ ಸಂಪರ್ಕದಲ್ಲಿದೆ" ಎಂದು ವಿವರಿಸಿದರು. ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬಾಲ್ಟನ್ ಕೂಡಾ ಭಾರತದ ಸ್ವಯಂರಕ್ಷಣೆ ಹಕ್ಕನ್ನು ಬೆಂಬಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News