ಎಟಿಎಂನಿಂದ 45 ಲಕ್ಷ ರೂ. ದೋಚಿದ ಕಳ್ಳರು: ಲಾಭವಾದದ್ದು ಮಾತ್ರ ಸಾರ್ವಜನಿಕರಿಗೆ!

Update: 2019-02-20 09:44 GMT

ನೋಯ್ಡ, ಫೆ.20: ಇಲ್ಲಿನ ಎಟಿಎಂ ಯಂತ್ರವೊಂದರಿಂದ 40 ಲಕ್ಷ ರೂಪಾಯಿ ದೋಚಿದ ಕಳ್ಳರು ತಪ್ಪಿಸಿಕೊಳ್ಳುವ ಯತ್ನದಲ್ಲಿ ಮೋಟರ್‌ಬೈಕ್‌ನಿಂದ ಬಿದ್ದು ರಸ್ತೆಯುದ್ದಕ್ಕೂ ನೋಟುಗಳು ಚಲ್ಲಾಪಿಲ್ಲಿಯಾಗಿ ಬಿದ್ದವು. ದಾರಿಹೋಕರು ರಸ್ತೆಬದಿಯಿಂದ ಕೈಗೆ ಸಿಕ್ಕಷ್ಟು ನೋಟುಗಳನ್ನು ಬಾಚಿಕೊಂಡು ಹೋದ ಸ್ವಾರಸ್ಯಕರ ಘಟನೆ ನಡೆದಿದೆ.

ಮಂಗಳವಾರ ಮಧ್ಯಾಹ್ನ 1.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಫೇಸ್ 2 ಸೆಕ್ಟರ್ 82ರಲ್ಲಿ ಎಸ್‌ಬಿಐ ಎಟಿಎಂಗೆ ನಗದು ಮರು ಭರ್ತಿ ಮಾಡಲು ಏಜೆನ್ಸಿಯ ಸಿಬ್ಬಂದಿ ಬಂದಾಗ ಈ ಘಟನೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಣ ಭರ್ತಿ ಮಾಡುವ ಸಿಬ್ಬಂದಿ ವ್ಯಾನ್‌ನಿಂದ ಎಟಿಎಂನತ್ತ ನಡೆದಾಗ, ಇಬ್ಬರು ಆಗಂತುಕರು ಬೈಕ್‌ನಲ್ಲಿ ಬಂದು ಗುಂಡು ಹಾರಿಸಿ, 40 ಲಕ್ಷ ರೂಪಾಯಿ ನಗದು ಅಪಹರಿಸಿದ್ದಾರೆ. ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್‌ನಲ್ಲಿ ವೇಗವಾಗಿ ತೆರಳುತ್ತಿದ್ದಾಗ, ಬೈಕ್ ಇನ್ನೊಂದು ವಾಹನಕ್ಕೆ ಢಿಕ್ಕಿ ಹೊಡೆದು ಡಕಾಯಿತ ಕೆಳಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ ಕೈಯಲ್ಲಿದ್ದ ನಗದು ತುಂಬಿದ ಚೀಲದಿಂದ ನೋಟಿನ ಕಂತೆಗಳು ಚಲ್ಲಾಪಿಲ್ಲಿಯಾಗಿ ರಸ್ತೆಯಲ್ಲಿ ಬಿದ್ದವು ಎಂದು ವಿವರಿಸಿದ್ದಾರೆ.

ತಕ್ಷಣ ಜನ ಗುಂಪು ಸೇರಿದರು. ಆಗ ಚರಂಡಿಗೆ ಬಿದ್ದಿದ್ದ ಒಬ್ಬ ಡಕಾಯಿತ ಜನರನ್ನು ಬೆದರಿಸಲು ಗಾಳಿಯಲ್ಲಿ ಗುಂಡು ಹಾರಿಸಿದ. ಆತನ ಜತೆಗಿದ್ದ ವ್ಯಕ್ತಿ ಪರಾರಿಯಾದ. ಒಬ್ಬನನ್ನು ಪೊಲೀಸರು ಬಂಧಿಸಿದ್ದು, ಆತನಿಂದ 19.65 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಆತನಿಂದ ಪಿಸ್ತೂಲ್, ನಾಡಬಂದೂಕು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News