ಬ್ಯಾಂಕ್‌ಗಳ ದುಸ್ಥಿತಿಗೆ ಯಾರು ಹೊಣೆ?

Update: 2019-02-20 18:33 GMT

 ಈ ದೇಶದ ‘ತೆರಿಗೆ ಕಟ್ಟುವವರು’ ಎಂದು ಹೇಳಿಕೊಳ್ಳುವ ವರ್ಗ ರೈತರ ಸಾಲಮನ್ನಾ ಎಂದಾಕ್ಷಣ ಬೆಚ್ಚಿ ಬೀಳುತ್ತಾರೆ. ನಾವು ಕಟ್ಟಿದ ತೆರಿಗೆಯನ್ನು ರೈತರ ಸಾಲ ಮನ್ನಾ ಮಾಡುವ ಮೂಲಕ ಪೋಲು ಮಾಡಲಾಗುತ್ತಿದೆ, ಬ್ಯಾಂಕುಗಳು ನಷ್ಟ ಅನುಭವಿಸುತ್ತಿವೆ ಎಂಬಿತ್ಯಾದಿ ಕಾರಣಗಳನ್ನು ಮುಂದಿಟ್ಟುಕೊಂಡು ರೈತರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುತ್ತಾರೆ. ಕಾರ್ಪೊರೇಟ್ ದನಿಗಳಿಗೆ ರಿಸರ್ವ್ ಬ್ಯಾಂಕಿನ ಕೀಲಿಕೈಯನ್ನೇ ಕೊಟ್ಟಿರುವ ಕೇಂದ್ರ ಸರಕಾರ, ರೈತರ ಸಾಲಮನ್ನಾ ವಿಷಯದಲ್ಲಿ ಮಾತ್ರ ಕಟು ನಿಲುವು ತಾಳಿದೆ. ನಿಜಕ್ಕೂ ನಮ್ಮ ರೈತರ ಸಾಲ ಮನ್ನಾದಿಂದ ಬ್ಯಾಂಕ್‌ಗಳು ಬಿಕ್ಕಟ್ಟಿನಲ್ಲಿವೆಯೇ ಎನ್ನುವ ಪ್ರಶ್ನೆಗೆ ಉತ್ತರ ಹುಡುಕುತ್ತಾ ಹೋದಂತೆ, ಹೇಗೆ ಕಾರ್ಪೊರೇಟ್ ಕುಳಗಳು ಬ್ಯಾಂಕ್‌ನ್ನು ದೋಚಿ ರೈತರ ಮುಖಕ್ಕೆ ಅದನ್ನು ಒರೆಸುತ್ತಿವೆೆ ಎನ್ನುವ ವಾಸ್ತವ ಬಯಲಿಗೆ ಬರುತ್ತದೆ. ಕೃಷಿ ಸಾಲ ಮನ್ನಾದ ಒಟ್ಟು ಮೊತ್ತಕ್ಕಿಂತ ಕಾರ್ಪೊರೇಟ್‌ನ ವಸೂಲಿಯಾಗದ ಸಾಲಗಳೇ ಹಲವು ಪಟ್ಟು ಹೆಚ್ಚು ಎನ್ನುವ ಅಂಶವನ್ನು ಸ್ವತಃ ಆರ್‌ಬಿಐಯೇ ಹೇಳುತ್ತದೆ. ಇಂದು ಕಾರ್ಪೊರೇಟ್ ಸಾಲಗಾರರು ಸಾಲ ಮರುಪಾವತಿಸದೆ ಸೊರಗಿರುವ ಬ್ಯಾಂಕ್‌ಗಳ ಖಜಾನೆ ತುಂಬಲು ಸರಕಾರಿ ನಿಧಿಯನ್ನು ಬಳಸಲು ಕೇಂದ್ರ ಮುಂದಾಗಿದೆ. ಇದು ಕೃಷಿ ಸಾಲ ಮನ್ನಾಕ್ಕಿಂತ ಹಲವು ಪಟ್ಟು ಹೆಚ್ಚು ಹೊರೆಯನ್ನು ಸರಕಾರದ ಮೇಲೆ ಹಾಕಿದೆ ಎನ್ನುವ ಅಂಶ ಚರ್ಚೆಯೇ ಇಲ್ಲದೆ ಮುಚ್ಚಿ ಹೋಗಿದೆ. ಕಾರ್ಪೊರೇಟ್‌ಗಳಿಗಾಗಿ ಸರಕಾರಿ ನಿಧಿಯನ್ನು ಬಳಸಬಹುದಾದರೆ ರೈತರ ಸಾಲ ಮನ್ನಾ ಮಾಡಲು ಸರಕಾರಿ ನಿಧಿ ಬಳಸಲು ಸರಕಾರಕ್ಕಿರುವ ಅಡ್ಡಿ ಏನು? ಪ್ರಶ್ನೆಯನ್ನು ಯಾರೂ ಕೇಳುತ್ತಿಲ್ಲ.

2017-18ರಲ್ಲಿ ಹತ್ತು ರಾಜ್ಯ ಸರಕಾರಗಳು ಒಟ್ಟಾರೆ 1,84,800 ಕೋಟಿ ರೂ. ಕೃಷಿ ಸಾಲಮನ್ನಾ ಘೋಷಿಸಿವೆ. ಆದರೆ 2015ರಲ್ಲಿ ಭಾರತದ ಹತ್ತು ಕಾರ್ಪೊರೇಟ್ ಸಾಲಗಾರರು ಮಾಡಿರುವ ಒಟ್ಟು ಸಾಲದ ಮೊತ್ತ 7,31,000 ಕೋಟಿ ರೂ. ಆಗಿದ್ದು ರೈತರ ಸಾಲಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಇದೇ ಸಂದರ್ಭದಲ್ಲಿ ಸಾಲ ಪಡೆದ ಅಗ್ರ 12 ನಿಷ್ಕ್ರಿಯ ಸೊತ್ತಿನ ಮೊತ್ತ ಕೃಷಿ ಸಾಲಮನ್ನಾದ ದುಪ್ಪಟ್ಟಾಗಿದ್ದು 3,45,000ಕೋಟಿ ರೂ. ಆಗಿದೆ. ಡಿಸೆಂಬರ್ 2018ರಲ್ಲಿ ಬಿಡುಗಡೆಯಾದ ಆರ್‌ಬಿಐ ವರದಿಯ ಪ್ರಕಾರ, 2017 ಮತ್ತು 2018ರಲ್ಲಿ ಬ್ಯಾಂಕ್‌ಗಳು ನೀಡಿದ ಒಟ್ಟಾರೆ ಸಾಲದ ಮೊತ್ತ ಕ್ರಮವಾಗಿ 71.5 ಲಕ್ಷ ಕೋಟಿ ರೂ. ಮತ್ತು 77 ಲಕ್ಷ ಕೋಟಿ ರೂ. ಆಗಿದೆ. ಈ ಪೈಕಿ ಎರಡೂ ಅವಧಿಗಳಲ್ಲಿ ನೀಡಲಾಗಿರುವ ಕೃಷಿ ಸಾಲ ತಲಾ ಹತ್ತು ಲಕ್ಷ ಕೋಟಿ ರೂ., ಇದೇ ಅವಧಿಯಲ್ಲಿ ಕೈಗಾರಿಕೆಗಳಿಗೆ ನೀಡಲಾದ ಒಟ್ಟು ಸಾಲದ ಮೊತ್ತ ತಲಾ 26 ಮತ್ತು 27 ಲಕ್ಷ ಕೋಟಿ ರೂ. ಈ ಸಾಲದಲ್ಲಿ ದೊಡ್ಡ ಸಾಲಗಾರರಿಗೆ ನೀಡಿರುವ ಸಾಲ ಅಂದರೆ ಐದು ಕೋಟಿ ರೂ.ಗಿಂತ ಹೆಚ್ಚು ಮೊತ್ತದ ಸಾಲವೇ 22 ಲಕ್ಷ ಕೋಟಿ ರೂ. ಆಗಿದೆ.

ನಿಖರವಾಗಿ ಹೇಳುವುದಾದರೆ, ಮಾರ್ಚ್ 2015ರ ವೇಳೆಗೆ ಹತ್ತು ಪ್ರಮುಖ ಕಾರ್ಪೊರೇಟ್ ಕಂಪೆನಿಗಳಿಗೆ ನೀಡಿರುವ ಸಾಲದ ಮೊತ್ತ ಒಟ್ಟಾರೆ ಬ್ಯಾಂಕ್ ಸಾಲದ ಶೇ. 10-14 ಅಂದರೆ ಏಳು ಲಕ್ಷ ಕೋಟಿ ರೂ. ಆಗಿದ್ದರೆ ಕೈಗಾರಿಕೆಗೆ ನೀಡಿರುವ ಸಾಲ ಶೇ.27 ಆಗಿದೆ. ಇದೇ ಅವಧಿಯಲ್ಲಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ನೀಡಲಾದ ಸಾಲದ ಮೊತ್ತ 7.7 ಲಕ್ಷ ಕೋಟಿ ರೂ. ಆಗಿದ್ದು ಸಂಪೂರ್ಣ ಕೃಷಿ ಕ್ಷೇತ್ರಕ್ಕೆ ನೀಡಿರುವ ಬ್ಯಾಂಕ್ ಸಾಲ ಕೇವಲ ಹತ್ತು ಪ್ರಮುಖ ಕಾರ್ಪೊರೇಟ್ ಸಾಲಗಾರರಿಗೆ ನೀಡಿರುವ ಸಾಲಕ್ಕೆ ಸಮವಾಗಿದೆ. ನಿಷ್ಕ್ರಿಯವಾಗಿರುವ ಸೊತ್ತಿನ ಸಾಲ ಮರುಪಡೆಯುವ ಜವಾಬ್ದಾರಿಯನ್ನು 2017ರಲ್ಲಿ ಆರ್‌ಬಿಐ ರಾಷ್ಟ್ರೀಯ ಕಂಪೆನಿ ಕಾಯ್ದೆ ನ್ಯಾಯಾಧಿಕರಣಕ್ಕೆ ವಹಿಸಿತ್ತು. ಈ ಪೈಕಿ ನಾಲ್ಕು ಪ್ರಕರಣಗಳಲ್ಲಿ 48,300 ಕೋಟಿ ರೂ.ಯನ್ನು ಒಂದು ವರ್ಷದ ಒಳಗೆ ಮರುಪಡೆದುಕೊಳ್ಳಲಾದರೂ ಇದು 3,45,000 ಕೋಟಿ ರೂ.ಯಷ್ಟು ಬೃಹತ್ ಮೊತ್ತದ ಅನುತ್ಪಾದಕ ಸಾಲದ ಒಂದು ಸಣ್ಣ ಭಾಗವಷ್ಟೇ ಆಗಿದ್ದು ಇನ್ನೂ 3,00,000 ಕೋಟಿ ರೂ. ವಸೂಲಿ ಮಾಡುವುದು ಬಾಕಿಯಿದೆ.

ಈ ಮೊತ್ತ ಹತ್ತು ರಾಜ್ಯಗಳಲ್ಲಿ ಘೋಷಿಸಲಾಗಿರುವ ಕೃಷಿ ಸಾಲಮನ್ನಾಕ್ಕಿಂತ ದುಪ್ಪಟ್ಟಾಗಿದೆ. ಇದೇ ಸಂದರ್ಭದಲ್ಲಿ ವಸೂಲಿಯಾಗದ ಸಾಲ ಎಂದು ಬ್ಯಾಂಕ್‌ಗಳು ರೈಟ್ ಆಫ್ ಮಾಡಿರುವ ಐದು ಸಾಲಗಳ ಮೊತ್ತ 11,106 ಕೋಟಿ ರೂ. ಆಗಿದ್ದು ಇದು ಛತ್ತೀಸ್‌ಗಡ ಮತ್ತು ಆಂಧ್ರ ಪ್ರದೇಶ ಸರಕಾರಗಳು ಮಾಡಿರುವ ಕೃಷಿ ಸಾಲಮನ್ನಾಕ್ಕಿಂತಲೂ ಹೆಚ್ಚಾಗಿದೆ. ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಕೃಷಿ ಸಾಲ ಕೂಡಾ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಉದ್ದೇಶದಿಂದ ಕಾರ್ಪೊರೇಟ್‌ಗಳ ಜೇಬಿಗೆ ಇಳಿಯುತ್ತಿದೆ. 1990ರಲ್ಲಿ 4.1 ರಷ್ಟಿದ್ದ ಹತ್ತು ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಸಾಲಗಳು 2011ರ ವೇಳೆಗೆ ಶೇ. 23.8ಕ್ಕೆ ತಲುಪಿದೆ. ಇದೇ ವೇಳೆ ಸಣ್ಣ ಸಾಲಗಳ ಪ್ರಮಾಣ (2 ಲಕ್ಷ ರೂ.) ಶೇ.92.2ರಿಂದ ಶೇ.48ಕ್ಕೆ ಇಳಿದಿದೆ. 2016ರಲ್ಲಿ ಸರಕಾರಿ ಬ್ಯಾಂಕ್‌ಗಳು 615 ಖಾತೆಗಳಿಗೆ 58,561 ಕೋಟಿ ರೂ. ಸಾಲ ನೀಡಿತ್ತು ಎಂದು ದಿ ವೈರ್ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗೆ ಆರ್‌ಬಿಐ ಉತ್ತರಿಸಿದೆ. ಅಂದರೆ ಪ್ರತಿಯೊಂದು ಖಾತೆಗೆ ಸರಾಸರಿ 95 ಕೋಟಿ ರೂ. ಕೃಷಿ ಸಾಲ ನೀಡಿದಂತಾಗಿದೆ.

ಕಾರ್ಪೊರೇಟ್ ಸಾಲಗಾರರ ಕಾರಣದಿಂದಲೇ ಭಾರತದಲ್ಲಿ ಕೃಷಿ ಸಾಲದಲ್ಲಿ ಏರಿಕೆಯಾಗಿದೆ. ದಿವಾಳಿ ಪ್ರಕ್ರಿಯೆಯ ನಿಬಂಧನೆಯು ದಿವಾಳಿಯಾಗುವ ವ್ಯಕ್ತಿಯ ಕನಿಷ್ಠ ಸಂಪತ್ತನ್ನು ರಕ್ಷಿಸುವ ಅವಕಾಶ ನೀಡುತ್ತದೆ. ಹಾಗಾಗಿ ಕಾರ್ಪೊರೇಟ್ ದಿವಾಳಿತನ ಎನ್ನುವುದು ಬ್ಯಾಂಕ್ ಬ್ಯಾಲೆನ್ಸ್ ಶೀಟನ್ನು ಅಳಿಸಿ ಹಾಕುವ ಪ್ರಕ್ರಿಯೆಯ ಜೊತೆಗೆ ಉದ್ಯಮಿಗಳು ಮತ್ತೆ ತಮ್ಮ ಉದ್ಯಮವನ್ನು ಮರುಸ್ಥಾಪಿಸಲು ಅವಕಾಶವನ್ನೂ ಕಲ್ಪಿಸಿಕೊಡುತ್ತದೆ. ಇದರಿಂದಾಗಿ ಉದ್ಯಮಿಗಳು ದಿವಾಳಿಯಾದ ನಂತರವೂ ತಮ್ಮ ವೈಯಕ್ತಿಕ ಆಸ್ತಿಯನ್ನು ಬಳಸಿ ದಿವಾಳಿತನದಿಂದ ಹೊರಬರಬಹುದಾಗಿದೆ. ಆದರೆ, ವಾತಾವರಣದ ವೈಪರೀತ್ಯ ಅಥವಾ ಬೆಲೆ ಇಳಿಕೆಯಿಂದ ಬೆಳೆ ಕಳೆದುಕೊಳ್ಳುವ ರೈತರು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಈ ದೇಶದ ಯಾವ ರೈತರೂ ಸಾಲ ಮಾಡಿದ ಕಾರಣಕ್ಕಾಗಿ ಕಾರ್ಪೊರೇಟ್ ದನಿಗಳಂತೆ ತಲೆಮರೆಸಿಕೂತಿಲ್ಲ.

ಬ್ಯಾಂಕ್‌ನ ಸಾಲದ ನೋಟಿಸ್‌ಗೆ ಹೆದರಿ, ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಹೊರತು, ಆತ್ಮಾರ್ಥವಾಗಿ ಬ್ಯಾಂಕ್‌ಗಳಿಗೆ ವಂಚಿಸುವ ಉದ್ದೇಶವನ್ನು ಅವರು ಹೊಂದಿಲ್ಲ. ಕೃಷಿ ಈ ದೇಶದ ಆತ್ಮ. ಆಹಾರ ಭದ್ರತೆ ಒಂದು ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಮಹತ್ವದ ಪಾತ್ರವಹಿಸುತ್ತದೆ. ಆಹಾರಕ್ಕಾಗಿ ನಾವು ಪರಾವಲಂಬಿಯಾದಷ್ಟೂ ದೇಶ ತನ್ನ ಸಾರ್ವಭೌಮತೆಯನ್ನು ವಿದೇಶಗಳಿಗೆ ಒತ್ತೆಯಿಡಬೇಕಾಗುತ್ತದೆ. ಕಾರ್ಪೊರೇಟ್ ಜನರ ಸಾಲಕ್ಕಾಗಿ ಸರಕಾರಕ್ಕೆ ಸಹಸ್ರಾರು ಕೋಟಿ ಹಣವನ್ನು ಮೀಸಲಿಡಲು ಸಾಧ್ಯ ಎಂದಾದರೆ, ಅದರ ಸಣ್ಣ ಪಾಲನ್ನು ರೈತರ ಸಾಲಮನ್ನಾಕ್ಕಾಗಿಯೂ ಮೀಸಲಿಡಬೇಕು. ಹಾಗಾದಲ್ಲಿ ಮಾತ್ರ ಈ ದೇಶದಲ್ಲಿ ಕೃಷಿ ಉಳಿದೀತು, ಬೆಳೆದೀತು. ದೇಶವೂ ಉಳಿದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News