ಮೂರನೇ ಸ್ಥಾನಕ್ಕೇರಿದ ನ್ಯೂಝಿಲೆಂಡ್

Update: 2019-02-20 18:36 GMT

ದುಬೈ, ಫೆ.20: ಬಾಂಗ್ಲಾದೇಶ ವಿರುದ್ಧ ಬುಧವಾರ 3-0 ಅಂತರದಿಂದ ಸರಣಿ ಜಯಿಸಿರುವ ನ್ಯೂಝಿಲೆಂಡ್ ಐಸಿಸಿ ಏಕದಿನ ಟೀಮ್ ರ್ಯಾಂಕಿಂಗ್‌ನಲ್ಲಿ ಮೂರನೇ ಸ್ಥಾನಕ್ಕೆ ವಾಪಸಾಗಿದೆ.

 ಪ್ರವಾಸಿ ಬಾಂಗ್ಲಾದೇಶ ವಿರುದ್ಧ ಏಕದಿನ ಸರಣಿಗೆ ಮೊದಲು ನ್ಯೂಝಿಲೆಂಡ್ ಟೀಮ್ ರ್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿತ್ತು. ಭಾರತದ ವಿರುದ್ಧ ಸ್ವದೇಶಿ ಸರಣಿಗೆ ಮೊದಲು 3ನೇ ಸ್ಥಾನದಲ್ಲಿದ್ದ ಕೇನ್ ವಿಲಿಯಮ್ಸನ್ ನೇತೃತ್ವದ ಕಿವೀಸ್ 5 ಪಂದ್ಯಗಳ ಸರಣಿಯಲ್ಲಿ ರೋಹಿತ್ ಶರ್ಮಾ ಬಳಗದ ಎದುರು 1-4 ಅಂತರದಿಂದ ಸೋಲುಂಡಿತ್ತು. ಹೀಗಾಗಿ 4ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧ ಭಾರೀ ಅಂತರದ ಜಯ ಸಾಧಿಸಿರುವ ನ್ಯೂಝಿಲೆಂಡ್ ರ್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ಮರಳಿದೆ.

126 ರೇಟಿಂಗ್ ಪಾಯಿಂಟ್ಸ್ ಪಡೆದಿರುವ ಇಂಗ್ಲೆಂಡ್ ಮೊದಲ ಸ್ಥಾನದಲ್ಲೂ, 122 ಅಂಕ ಪಡೆದಿರುವ ಭಾರತ 2ನೇ ಸ್ಥಾನದಲ್ಲಿದೆ. 3ನೇ ಸ್ಥಾನದಲ್ಲಿರುವ ನ್ಯೂಝಿಲೆಂಡ್ 112 ಅಂಕ, 4ನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕ 111 ಅಂಕ ಗಳಿಸಿದೆ. ನ್ಯೂಝಿಲೆಂಡ್ ಅಗ್ರ ರ್ಯಾಂಕಿನ ಇಂಗ್ಲೆಂಡ್‌ಗಿಂತ 14 ಅಂಕ ಹಾಗೂ 2ನೇ ಸ್ಥಾನದಲ್ಲಿರುವ ಭಾರತಕ್ಕಿಂತ 10 ಅಂಕ ಹಿಂದಿದೆ.

ಮತ್ತೊಂದೆಡೆ, ನ್ಯೂಝಿಲೆಂಡ್ ವಿರುದ್ಧ ಸರಣಿಯನ್ನು 0-3 ಅಂತರದಿಂದ ಸೋತಿರುವ ಬಾಂಗ್ಲಾದೇಶ 3 ಅಂಕ ಕಳೆದುಕೊಂಡಿದೆ. ಆದರೆ, ಏಕದಿನ ಟೀಮ್ ರ್ಯಾಂಕಿಂಗ್‌ನಲ್ಲಿ ಒಟ್ಟು 90 ಅಂಕದೊಂದಿಗೆ 7ನೇ ಸ್ಥಾನದಲ್ಲಿ ಮುಂದುವರಿದಿದೆ. 8ನೇ ಸ್ಥಾನದಲ್ಲಿರುವ ಶ್ರೀಲಂಕಾ ಹಾಗೂ 9ನೇ ಸ್ಥಾನದಲ್ಲಿರುವ ವಿಂಡೀಸ್‌ಗಿಂತ ಕ್ರಮವಾಗಿ 12 ಹಾಗೂ 72 ಅಂಕಗಳಿಂದ ಮುಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News