ಢಾಕಾದಲ್ಲಿ ಭೀಕರ ಅಗ್ನಿದುರಂತ: ಸಾವಿನ ಸಂಖ್ಯೆ 70ಕ್ಕೇರಿಕೆ

Update: 2019-02-21 19:12 GMT

ಢಾಕಾ, ಫೆ. 21: ಬಾಂಗ್ಲಾದೇಶದ ರಾಜಧಾನಿ ಢಾಕಾದ ಹಳೆ ನಗರದ ಕನಿಷ್ಠ 5 ಕಟ್ಟಡಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಬೆಂಕಿ ಅಪಘಾತದಲ್ಲಿ ಕನಿಷ್ಠ 70 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ಬೆಂಕಿ ಅವಘಢದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ ಹಾಗೂ ಗುರುವಾರ ಬೆಳಗ್ಗಿನವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ಬೆಂಕಿ ಕಾಣಿಸಿಕೊಂಡ ಚೌಕ್‌ಬಝಾರ್ ಪ್ರದೇಶದಲ್ಲಿ ಕಟ್ಟಡಗಳು ಒತ್ತೊತ್ತಾಗಿ ಇವೆ ಹಾಗೂ ಅವುಗಳ ನಡುವಿನ ಅಂತರ ತುಂಬಾ ಕಿರಿದಾಗಿದೆ.

ಇಲ್ಲಿ ವಾಸ್ತವ್ಯ ಮತ್ತು ವಾಣಿಜ್ಯ ಕಟ್ಟಡಗಳಿವೆ. ವಾಸ್ತವ್ಯ ಕಟ್ಟಡಗಳ ತಳದಲ್ಲಿ ಅಂಗಡಿಗಳು, ರೆಸ್ಟೋರೆಂಟ್‌ಗಳು ಮತ್ತು ಉಗ್ರಾಣಗಳಿವೆ.

ಬುಧವಾರ ತಡ ರಾತ್ರಿ ಒಂದು ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿತು ಹಾಗೂ ಅದು ಶೀಘ್ರದಲ್ಲೇ ಇತರ ಕಟ್ಟಡಗಳಿಗೆ ಹರಡಿತು ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ಹೇಳಿದರು.

 ಬೆಂಕಿಯ ಜ್ವಾಲೆಗಳನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಗಳು ಸಾಗುತ್ತಿರುವಂತೆಯೇ, ಕನಿಷ್ಠ 45 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ ಎಂದು ಅವರು ತಿಳಿಸಿದರು.

ಗಾಯಗೊಂಡವರ ಪೈಕಿ ಕೆಲವರ ಪರಿಸ್ಥಿತಿ ಗಂಭೀರವಾಗಿರುವುದರಿಂದ ಮೃತರ ಸಂಖ್ಯೆ ಹೆಚ್ಚಾಗಬಹುದು ಎಂಬ ಭೀತಿಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News