ಟಾಯ್ಲೆಟ್ ಪೇಪರ್‌ಗಳ ಬಳಕೆಯಿಂದ ಜಾಗತಿಕ ತಾಪಮಾನ

Update: 2019-02-21 18:26 GMT

ವಾಶಿಂಗ್ಟನ್, ಫೆ. 21: ಜಗತ್ತಿನ ಬೇರೆ ಯಾವುದೇ ದೇಶ ಬಳಸುವುದಕ್ಕಿಂತ ಹೆಚ್ಚಿನ ಟಾಯ್ಲೆಟ್ ಪೇಪರನ್ನು ಅಮೆರಿಕನ್ನರು ಬಳಸುತ್ತಾರೆ. ಇದರಿಂದಾಗಿ, ಈ ಪೇಪರ್‌ಗೆ ಬಳಸಲಾಗುವ ಕಚ್ಚಾವಸ್ತುಗಳು ಲಭಿಸುವ ಸ್ಥಳದಲ್ಲಿ ವಾಸಿಸುವ ಬುಡಕಟ್ಟು ಜನರು ತಮ್ಮ ವಾಸಸ್ಥಾನವನ್ನೇ ಕಳೆದುಕೊಳ್ಳುವ ಅಂಚಿಗೆ ತಲುಪಿದ್ದಾರೆ. ಅದೂ ಅಲ್ಲದೆ, ಅಮೆರಿಕನ್ನರ ಈ ಹವ್ಯಾಸವು ಜಾಗತಿಕ ತಾಪಮಾನ ವೃದ್ಧಿಗೆ ಕಾರಣವಾಗಿದೆ.

ಅಮೆರಿಕನ್ನರು ಒಂದು ವಾರದಲ್ಲಿ ಸುಮಾರು 3 ರೋಲ್ ಟಾಯ್ಲೆಟ್ ಪೇಪರ್ ಬಳಸುತ್ತಾರೆ. ಇದು ಜಾಗತಿಕ ಬಳಕೆಯ ಐದನೇ ಒಂದರಷ್ಟಾಗಿದೆ ಎಂದು ‘ಸ್ಟಾಂಡ್.ಅರ್ತ್’ ಮತ್ತು ನ್ಯಾಚುರಲ್ ರಿಸೋರ್ಸಸ್ ಡಿಫೆನ್ಸ್ ಕೌನ್ಸಿಲ್ (ಎನ್‌ಆರ್‌ಡಿಸಿ) ಎಂಬ ಎರಡು ಪರಿಸರ ಗುಂಪುಗಳ ವರದಿಯೊಂದು ತಿಳಿಸಿದೆ.

ಟಾಯ್ಲೆಟ್ ಪೇಪರ್ ಮುಂತಾದ ಬಳಸಿ ಎಸೆಯುವ ಟಿಶ್ಯೂ ಉತ್ಪನ್ನಗಳನ್ನು ಕೆನಡದ ಉತ್ತರ ಕಾಡಿನಲ್ಲಿರುವ ಮರಗಳನ್ನು ಸಿಗಿಯುವಾಗ ಲಭಿಸುವ ತಿರುಳಿನಿಂದ ತಯಾರಿಸಲಾಗುತ್ತದೆ. ಇಲ್ಲಿ ಮರ ಸಿಗಿಯುವ ಕಂಪೆನಿಗಳು ಪ್ರತಿ ವರ್ಷ 10 ಲಕ್ಷ ಎಕರೆಗೂ ಅಧಿಕ ಪ್ರದೇಶದ ಮರಗಳನ್ನು ಸಿಗಿಯುತ್ತಾರೆ ಎಂದು ಎನ್‌ಆರ್‌ಡಿಸಿ ಹೇಳಿದೆ.

ಜಾಗತಿಕ ತಾಪಮಾನದ ವಿರುದ್ಧ ಹೋರಾಡುವಲ್ಲಿ ಅರಣ್ಯಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಯಾಕೆಂದರೆ ಜಾಗತಿಕ ತಾಪಮಾನಕ್ಕೆ ಕಾರಣವಾಗುವ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಕಾಡುಗಳು ಸ್ವೀಕರಿಸಿ ಸಂಗ್ರಹಿಸಿಡುತ್ತವೆ.

ಮರಗಳನ್ನು ಸಿಗಿಯುವುದರಿಂದ ಈ ಇಂಗಾಲದ ಡೈ ಆಕ್ಸೈಡ್ ಮತ್ತೆ ವಾತಾವರಣವನ್ನು ಸೇರುತ್ತದೆ.

ಮರಗಳನ್ನು ಕಡಿಯುತ್ತಿರುವ ಹಿನ್ನೆಲೆಯಲ್ಲಿ, 2000ದ ಬಳಿಕ ಕೆನಡದ ಅರಣ್ಯ ಪ್ರದೇಶ 9 ಶೇಕಡಕ್ಕೂ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News