ಟಿ-20 ಕ್ರಿಕೆಟ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ಶ್ರೇಯಸ್ ಅಯ್ಯರ್

Update: 2019-02-22 05:52 GMT

ಮುಂಬೈ, ಫೆ.21: ಮುಂಬೈನ ಯುವ ದಾಂಡಿಗ ಶ್ರೇಯಸ್ ಅಯ್ಯರ್ ಟಿ-20 ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಳ್ಳುವ ಮೂಲಕ ಇತಿಹಾಸ ನಿರ್ಮಿಸಿದರು. ಶ್ರೇಯಸ್ ಸಿಕ್ಕಿಂ ವಿರುದ್ಧ ಗುರುವಾರ ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಮೊದಲ ಪಂದ್ಯದಲ್ಲಿ 55 ಎಸೆತಗಳಲ್ಲಿ 147 ರನ್ ಗಳಿಸಿದರು. ಇದರಲ್ಲಿ 15 ಸಿಕ್ಸರ್ ಹಾಗೂ 7 ಬೌಂಡರಿಗಳಿದ್ದವು.

ಶ್ರೇಯಸ್ ಬ್ಯಾಟಿಂಗ್‌ಗೆ ಇಳಿದಾಗ ಮುಂಬೈ 22 ರನ್‌ಗೆ 2 ವಿಕೆಟ್ ಕಳೆದುಕೊಂಡಿತ್ತು. ಸೂರ್ಯಕುಮಾರ್ ಯಾದವ್(63)ಅವರೊಂದಿಗೆ ಕೈ ಜೋಡಿಸಿದ ಶ್ರೇಯಸ್ 3ನೇ ವಿಕೆಟ್‌ಗೆ200ಕ್ಕೂ ಅಧಿಕ ರನ್ ಜೊತೆಯಾಟ ನಡೆಸಿದರು. ಶ್ರೇಯಸ್ ಅಬ್ಬರದ ನೆರವಿನಿಂದ ಮುಂಬೈ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 258 ರನ್ ಗಳಿಸಿತು.

ಗೆಲ್ಲಲು ಕಠಿಣ ಸವಾಲು ಪಡೆದ ಸಿಕ್ಕಿಂ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 104 ರನ್ ಗಳಿಸಿ 154 ರನ್‌ಗಳಿಂದ ಹೀನಾಯ ಸೋಲುಂಡಿತು. ಸಿಕ್ಕಿಂ ಪರ ಬಿಪುಲ್ ಶರ್ಮಾ(32)ಗರಿಷ್ಠ ಸ್ಕೋರ್ ಗಳಿಸಿದರು. ಮುಂಬೈ ಪರವಾಗಿ ಮುಲಾನಿ(2-2) ಹಾಗೂ ಶಾರ್ದೂಲ್ ಠಾಕೂರ್(2-13)ತಲಾ 2 ವಿಕೆಟ್ ಪಡೆದರು.

ಶ್ರೇಯಸ್ ಟಿ-20ಯಲ್ಲಿ 4ನೇ ಅತ್ಯಂತ ವೇಗದಲ್ಲಿ ಶತಕ ಪೂರೈಸಿದ ಭಾರತೀಯ ಆಟಗಾರ ಎನಿಸಿಕೊಂಡರು. ರಿಷಭ್ ಪಂತ್, ರೋಹಿತ್ ಶರ್ಮಾ ಹಾಗೂ ಯೂಸುಫ್ ಪಠಾಣ್ ಶತಕ ಗಳಿಕೆಯಲ್ಲಿ ಶ್ರೇಯಸ್‌ಗಿಂತ ಮೊದಲ 3 ಸ್ಥಾನದಲ್ಲಿದ್ದಾರೆ. ಮುಂಬರುವ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ನಾಯಕನಾಗಿರುವ ಶ್ರೇಯಸ್ ಸರಿಯಾದ ಸಮಯಕ್ಕೆ ಶತಕ ಸಿಡಿಸಿದ್ದಾರೆ.

ಟಿ-20ಯಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ದಾಂಡಿಗರು

1. ಶ್ರೇಯಸ್ ಅಯ್ಯರ್-147(ಮುಂಬೈ-ಸಿಕ್ಕಿಂ, ಮುಶ್ತಾಕ್ ಅಲಿ ಟ್ರೋಫಿ-2019)

2. ರಿಷಭ್ ಪಂತ್-ಔಟಾಗದೆ 128 (ಡೆಲ್ಲಿ-ಸನ್‌ರೈಸರ್ಸ್, ಹೈದರಾಬಾದ್, ಐಪಿಎಲ್-2018)

3. ಮುರಳಿ ವಿಜಯ್-127 (ಚೆನ್ನೈ-ರಾಜಸ್ಥಾನ, ಐಪಿಎಲ್-2010)

4. ಸುರೇಶ್ ರೈನಾ-ಔಟಾಗದೆ 126 (ಉ.ಪ್ರದೇಶ-ಬಂಗಾಳ, ಮುಶ್ತಾಕ್ ಅಲಿ, 2018)

5. ವೀರೇಂದ್ರ ಸೆಹ್ವಾಗ್-122(ಪಂಜಾಬ್-ಚೆನ್ನೈ, ಐಪಿಎಲ್-2014)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News