ಭಾರತದ ನದಿಗಳ ನೀರನ್ನು ತಿರುಗಿಸಿದರೆ ನಮಗೇನೂ ಸಮಸ್ಯೆಯಿಲ್ಲ: ಪಾಕ್

Update: 2019-02-22 14:11 GMT

ಇಸ್ಲಾಮಾಬಾದ್, ಫೆ. 22: ಮೂರು ಪೂರ್ವದ ನದಿಗಳ ನೀರನ್ನು ಭಾರತ ತಿರುಗಿಸಿದರೆ ತನಗೇನೂ ಆತಂಕವಿಲ್ಲ ಎಂದು ಪಾಕಿಸ್ತಾನ ಹೇಳಿದೆ.

ಪುಲ್ವಾಮದಲ್ಲಿ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್ ನಡೆಸಿದ ಭೀಕರ ದಾಳಿಗೆ ಪ್ರತೀಕಾರವಾಗಿ, ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿಗಳ ನೀರು ಪಾಕಿಸ್ತಾನಕ್ಕೆ ಹರಿಯುವುದನ್ನು ನಿಲ್ಲಿಸಲು ಭಾರತ ಗುರುವಾರ ತೆಗೆದುಕೊಂಡಿರುವ ನಿರ್ಧಾರಕ್ಕೆ ಅದು ಈ ಪ್ರತಿಕ್ರಿಯೆ ನೀಡಿದೆ.

ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ ಕನಿಷ್ಠ 40 ಯೋಧರು ಹುತಾತ್ಮರಾಗಿದ್ದಾರೆ.

‘‘ಪೂರ್ವದ ನದಿಗಳ ನೀರನ್ನು ಭಾರತ ಬೇರೆ ಕಡೆಗೆ ತಿರುಗಿಸಿದರೆ ಹಾಗೂ ಅದನ್ನು ತನ್ನ ಜನರಿಗೆ ಪೂರೈಸಿದರೆ ಅಥವಾ ಇತರ ಉದ್ದೇಶಗಳಿಗೆ ಬಳಸಿದರೆ ನಮಗೆ ಆತಂಕವೂ ಇಲ್ಲ, ಆಕ್ಷೇಪವೂ ಇಲ್ಲ. ಭಾರತಕ್ಕೆ ಹೀಗೆ ಮಾಡಲು ಸಿಂಧೂ ಜಲ ಒಪ್ಪಂದ (ಐಡಬ್ಲುಟಿ)ದಲ್ಲಿ ಅವಕಾಶವಿದೆ’’ ಎಂದು ಗುರುವಾರ ರಾತ್ರಿ ‘ಡಾನ್ ನ್ಯೂಸ್’ನೊಂದಿಗೆ ಮಾತನಾಡಿದ ಪಾಕಿಸ್ತಾನದ ಜಲ ಸಂಪನ್ಮೂಲಗಳ ಸಚಿವಾಲಯ ಕಾರ್ಯದರ್ಶಿ ಖವಾಜ ಶುಮೈಲ್ ಹೇಳಿದರು.

ಸಿಂಧೂ ಜಲ ಒಪ್ಪಂದದ ಹಿನ್ನೆಲೆಯಲ್ಲಿ, ಭಾರತದ ನಿರ್ಧಾರವನ್ನು ಪಾಕಿಸ್ತಾನ ಆತಂಕಕಾರಿ ಎಂಬುದಾಗಿ ಪರಿಗಣಿಸಿಲ್ಲ ಎಂದು ಅವರು ನುಡಿದರು.

‘‘ಆದರೆ, ನಮಗೆ ಹಕ್ಕಿರುವ ಪಶ್ಚಿಮದ ನದಿಗಳಾದ ಚೀನಾಬ್, ಸಿಂಧೂ ಮತ್ತು ಝೀಲಂಗಳ ನೀರನ್ನು ಅವರು ಬಳಸಿದರೆ ಅಥವಾ ತಿರುಗಿಸಿದರೆ ನಾವು ಖಂಡಿತವಾಗಿಯೂ ನಮ್ಮ ಆತಂಕವನ್ನು ವ್ಯಕ್ತಪಡಿಸುತ್ತೇವೆ ಹಾಗೂ ಪ್ರಬಲ ಆಕ್ಷೇಪಗಳನ್ನು ಸಲ್ಲಿಸುತ್ತೇವೆ’’ ಎಂದು ಶುಮೈಲ್ ತಿಳಿಸಿದರು.

 ಪೂರ್ವದ ನದಿಗಳ ನೀರನ್ನು ಬಳಸಲು ಸಿಂಧೂ ಜಲ ಒಪ್ಪಂದವು ಭಾರತಕ್ಕೆ 1960ರಲ್ಲೇ ಹಕ್ಕನ್ನು ನೀಡಿರುವುದರಿಂದ, ಬಳಸುವುದು ಅಥವಾ ಬಿಡುವುದು ಈಗ ಅದಕ್ಕೆ ಬಿಟ್ಟಿದ್ದು ಎಂದು ಸಿಂಧೂ ನದಿ ನೀರಿನ ಪಾಕಿಸ್ತಾನಿ ಕಮಿಶನರ್ ಸೈಯದ್ ಮೆಹರ್ ಅಲಿ ಶಾ ಹೇಳುತ್ತಾರೆ.

ನಮಗೇನೂ ಸಮಸ್ಯೆಯಿಲ್ಲ

 ‘‘ಪೂರ್ವದ ನದಿಗಳ ಬಳಕೆಯಾಗದ ನೀರನ್ನು 1960ರಲ್ಲಿ ಅವರು ಬಳಸಿದ್ದರೋ ಅಥವಾ ತಿರುಗಿಸಿದ್ದರೋ, ನಮಗೇನೂ ಸಮಸ್ಯೆಯಿರಲಿಲ್ಲ. ಈಗ ಅವರು ಹಾಗೆ ಮಾಡಲು ಬಯಸಿದ್ದಾರೆ. ನಮಗೇನೂ ಸಮಸ್ಯೆಯಿಲ್ಲ. ಹೆಚ್ಚುವರಿ ನೀರನ್ನು ಬಳಸಲು ಈಗ ಅವರು ಬಯಸದಿದ್ದರೂ ನಮಗೇನೂ ಸಮಸ್ಯೆಯಿಲ್ಲ’’ ಎಂದು ಸಿಂಧೂ ನದಿ ನೀರಿನ ಪಾಕಿಸ್ತಾನಿ ಕಮಿಶನರ್ ಸೈಯದ್ ಮೆಹರ್ ಅಲಿ ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News