ಆದಿವಾಸಿಗಳ ಮಾರಣಹೋಮಕ್ಕೆ ಸಿದ್ಧತೆಯೇ?

Update: 2019-02-23 10:34 GMT

ಭಾರತದ ಪಾಲಿಗೆ ಈಶಾನ್ಯವೆನ್ನುವುದು ಉರಿಯುತ್ತಿರುವ ಭುಜ. ಚೀನಾ ಎನ್ನುವ ಆನಕೊಂಡಾದ ನೆರಳಲ್ಲಿರುವ ಈ ಭಾಗಗಳಲ್ಲಿ ಬಿಜೆಪಿ ಮತ್ತು ಸಂಘಪರಿವಾರ ನಡೆಸುತ್ತಿರುವ ಅನಾಹುತಗಳು ಹಲವು ಕಾಶ್ಮೀರಗಳನ್ನು ಸೃಷ್ಟಿ ಮಾಡುತ್ತಿವೆ. ಇತ್ತೀಚೆಗೆ ಅದು ತಂದ ನಾಗರಿಕತ್ವ ತಿದ್ದುಪಡಿ ಮಸೂದೆಯಿಂದಾಗಿ ಅಸ್ಸಾಂ ಸೇರಿದಂತೆ ಈಶಾನ್ಯ ಭಾಗದ ಭಾರತ ಒಳಗೊಳಗೆ ಕುದಿಯುತ್ತಿದೆ. ಇದೀಗ ಗಾಯದ ಮೇಲೆ ಬರೆ ಎಳೆದಂತೆ ದೇಶದ ಅರಣ್ಯ ಪ್ರದೇಶದಲ್ಲಿರುವ ಆದಿವಾಸಿಗಳ ವಿರುದ್ಧ ಸುಪ್ರೀಂಕೋರ್ಟ್‌ನ ತೀರ್ಪು ಹೊರಬಿದ್ದಿದೆ. ಹದಿನಾರು ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ನೆಲೆಸಿರುವ ಹತ್ತು ಲಕ್ಷ ಬುಡಕಟ್ಟು ಮತ್ತು ಸಾಂಪ್ರದಾಯಿಕ ಅರಣ್ಯವಾಸಿಗಳನ್ನು ಬಲವಂತವಾಗಿ ತೆರವುಗೊಳಿಸಲು ಸುಪ್ರೀಂಕೋರ್ಟ್ ತನ್ನ ಸಮ್ಮತಿಯನ್ನು ಸೂಚಿಸಿದೆ. ಈ ಆದೇಶ ಪರಿಸರ ಮತ್ತು ವನ್ಯ ಜೀವಿಗಳ ರಕ್ಷಣೆಗೆ ಸಹಾಯವಾಗುತ್ತದೆಯೋ ಇಲ್ಲವೋ, ಆದರೆ ದೇಶಾದ್ಯಂತ ಅರಣ್ಯ ಪ್ರದೇಶದಲ್ಲಿ ಹರಡಿಕೊಂಡಿರುವ ಲಕ್ಷಾಂತರ ಆದಿವಾಸಿಗಳ ಮಾರಣ ಹೋಮಕ್ಕೆ ಕಾರಣವಾಗುವ ಎಲ್ಲ ಅಪಾಯಗಳೂ ಇವೆ.

ನ್ಯಾಯಾಲಯದ ಆದೇಶದಿಂದಾಗಿ ಜಮೀನಿನ ಮೇಲೆ ಹಕ್ಕು ಪ್ರತಿಪಾದನೆ ತಿರಸ್ಕೃತಗೊಂಡಿರುವ 11 ಲಕ್ಷಕ್ಕೂ ಅಧಿಕ ಕುಟುಂಬಗಳು ಜುಲೈ 27ರ ಒಳಗಾಗಿ ತಮ್ಮ ಮನೆಯನ್ನು ತೊರೆಯುವ ಅನಿವಾರ್ಯಕ್ಕೆ ಒಳಗಾಗಿವೆ. ಒಂದು ವೇಳೆ ತೆರವು ಕಾರ್ಯಾಚರಣೆ ನಡೆಯದೆ ಹೋದಲ್ಲಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಇತರ ರಾಜ್ಯಗಳೂ ಪಾಲಿಸಬೇಕಾಗಿರುವುದರಿಂದ ನಿರಾಶ್ರಿತರಾಗುವ ಕುಟುಂಬಗಳ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ. ಡಿಸೆಂಬರ್ 2018ರ ಒಂದು ಅಂಕಿಅಂಶಗಳ ಪ್ರಕಾರ, ಜಮೀನು ಹಕ್ಕು ಪ್ರತಿಪಾದನೆಗೆ ಬಂದಿರುವ 42.19 ಲಕ್ಷ ಅರ್ಜಿಗಳ ಪೈಕಿ 18.89 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗಿದೆ. ಅಂದರೆ, 23 ಲಕ್ಷ ಬುಡಕಟ್ಟು ಕುಟುಂಬಗಳು ತೆರವು ಕಾರ್ಯಾಚರಣೆಯ ಭೀತಿಯನ್ನು ಎದುರಿಸುತ್ತಿವೆ. ಈ ಸಂಖ್ಯೆಯು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾದ ಸಂಖ್ಯೆಯ ದುಪ್ಪಟ್ಟಿಗಿಂತಲೂ ಹೆಚ್ಚಾಗಿದೆ. ಈ ಆದೇಶ ಅರಣ್ಯ ಇಲಾಖೆ ಮತ್ತು ಆದಿವಾಸಿಗಳ ನಡುವೆ ಒಂದು ದೊಡ್ಡ ಯುದ್ಧದ ಸನ್ನಿವೇಶವನ್ನು ಸೃಷ್ಟಿಸುತ್ತಿದೆ. ಆದಿವಾಸಿಗಳು ಅರಣ್ಯದ ಜೊತೆಗೆ ಅವಿನಾಭಾವ ಸಂಬಂಧವನ್ನು ಬೆಸೆದುಕೊಂಡವರು. ಅರಣ್ಯ ಉತ್ಪತ್ತಿಗಳನ್ನೇ ನೆಚ್ಚಿಕೊಂಡು ತಮ್ಮ ಬದುಕನ್ನು ಸಾಗಿಸಿಕೊಂಡು ಬಂದಿದ್ದಾರೆ. ಇವರಿಂದ ಅರಣ್ಯಕ್ಕೆ ತೊಂದರೆಯಿದೆ, ಹಾನಿಯಿದೆ ಎನ್ನುವುದೇ ಪ್ರಭುತ್ವ ಸೃಷ್ಟಿಸಿದ ದೊಡ್ಡ ಸುಳ್ಳು. ಕಾಡನ್ನು ದೇವರಂತೆ ಪ್ರೀತಿಸುತ್ತಾರೆ ಆದಿವಾಸಿಗಳು. ಅವರಿಂದಾಗಿಯೇ ಮರಗಳ್ಳರು, ಕಾರ್ಪೊರೇಟ್ ಕುಳಗಳು ಅದರೊಳಗೆ ಹಸ್ತಕ್ಷೇಪ ನಡೆಸಲು ಅಸಾಧ್ಯವಾಗಿದೆ. ಆದಿವಾಸಿಗಳಿಂದಾಗಿಯೇ ಬಹುತೇಕ ಕಾಡುಗಳು ಇನ್ನೂ ಉಳಿದುಕೊಂಡಿವೆ. ಇವರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆಗಳು ಬೇರೆ ಬೇರೆ ರೀತಿಯ ತಂತ್ರಗಳನ್ನು ಬಳಸುತ್ತಾ ಬಂದಿವೆ. ಅರಣ್ಯದಲ್ಲಿ ಅವರ ಬದುಕನ್ನು ಅಸಹನೀಯಗೊಳಿಸಿ ಅಲ್ಲಿಂದ ಸ್ವಯಂ ತೆರಳುವಂತೆ ಮಾಡುವುದು ಅವರ ಉದ್ದೇಶ. ಇದೀಗ ನ್ಯಾಯಾಲಯವೇ ಅನುಮತಿ ನೀಡಿದ ಬಳಿಕ ಆದಿವಾಸಿಗಳ ವಿರುದ್ಧ ಅರಣ್ಯ ಇಲಾಖೆ ಎಸಗಬಹುದಾದ ದೌರ್ಜನ್ಯಗಳನ್ನು ಊಹಿಸಲೂ ಅಸಾಧ್ಯ.

ಇಷ್ಟಕ್ಕೂ ಈ ತೀರ್ಪಿನ ಹಿಂದೆ ಕೇಂದ್ರ ಸರಕಾರದ ಕೈವಾಡವೂ ಇದೆ. ಆದಿವಾಸಿಗಳ ಪರವಾಗಿ ವಾದಿಸಬೇಕಾಗಿದ್ದ ಸರಕಾರಿ ವಕೀಲರು ನ್ಯಾಯಾಲಯಕ್ಕೆ ಹಾಜರಾಗಿರಲೇ ಇಲ್ಲ. ಆದಿವಾಸಿಗಳ ವಿರುದ್ಧ ತೀರ್ಪು ಹೊರಬೀಳಲು ಇದು ಮುಖ್ಯ ಕಾರಣ. ಇದರ ಜೊತೆಗೆ, ಆದಿವಾಸಿಗಳು ತಮಗೆ ಬೇಕಾದ ಪ್ರಮಾಣ ಪತ್ರಗಳನ್ನು ಪಡೆಯಬೇಕಾದರೆ ಮತ್ತೆ ಸರಕಾರಿ ಅಧಿಕಾರಿಗಳನ್ನೇ ಅವಲಂಬಿಸಬೇಕು. ಅವರಲ್ಲಿ ಬಹುಸಂಖ್ಯಾತರು ಅನಕ್ಷರಸ್ಥರು. ಸೂಕ್ತ ದಾಖಲೆಗಳನ್ನು ಒದಗಿಸಲು ಇವರಿಗೆ ಸಾಧ್ಯವೂ ಇರಲಿಲ್ಲ. ಇವೆಲ್ಲದರ ಪರಿಣಾಮವಾಗಿಯೇ ನ್ಯಾಯಾಲಯ ಅರಣ್ಯದ ನಿಜವಾದ ವಾರಸುದಾರರ ವಿರುದ್ಧ ತೀರ್ಪು ನೀಡುವಂತಾಯಿತು. ನರೇಂದ್ರ ಮೋದಿ ಸರಕಾರ ಆದಿವಾಸಿಗಳನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ಸರ್ವೋಚ್ಚ ನ್ಯಾಯಾಲಯದಲ್ಲಿ ಅರಣ್ಯ ಹಕ್ಕುಗಳ ಕಾಯ್ದೆಯನ್ನು ಸರಿಯಾಗಿ ಪ್ರತಿಪಾದಿಸುವಲ್ಲಿ ವಿಫಲವಾಗಿರುವುದು ಮಾತ್ರವಲ್ಲ, ಬಿಜೆಪಿ ಆಡಳಿತದ ರಾಜ್ಯ ಸರಕಾರಗಳೂ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಮತ್ತು ಬದಲಿಸುವ ಕಾರ್ಯದಲ್ಲಿ ತೊಡಗಿವೆ. ಇದೀಗ ಅವರು ಬುಡಕಟ್ಟು ಜನರನ್ನು ಅರಣ್ಯದಿಂದಲೇ ತೆರವುಗೊಳಿಸಲು ಮುಂದಾಗಿದ್ದಾರೆ. ಇಷ್ಟಕ್ಕೂ ಅರಣ್ಯಗಳನ್ನು ಉಳಿಸುವುದಕ್ಕಾಗಿ ಈ ಆದೇಶ ಹೊರಬಿದ್ದಿದೆಯೇ? ಎಂದರೆ ನಿರಾಸೆ ಕಟ್ಟಿಟ್ಟ ಬುತ್ತಿ. ಅರಣ್ಯದೊಳಗಿರುವ ಆದಿವಾಸಿಗಳನ್ನು ಹೊರ ಹಾಕಿ ಅಲ್ಲಿ ಬೃಹತ್ ಕಾರ್ಪೊರೇಟ್ ಶಕ್ತಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶ ಇದರ ಹಿಂದಿದೆ. ಈ ದೇಶದಲ್ಲಿ ಇನ್ನೂ ನಾಗರಿಕನೆಂದು ಕರೆಸಿಕೊಳ್ಳುವ ಮನುಷ್ಯನ ಸ್ಪರ್ಶದಿಂದ ಕಳಂಕಿತವಾಗದ ದಟ್ಟ ಅರಣ್ಯಗಳಿವೆ. ಅವು ಬಚ್ಚಿಟ್ಟುಕೊಂಡಿರುವ ಅಪಾರ ಸಂಪತ್ತಿನ ಮೇಲೆ ಕಾರ್ಪೊರೇಟ್‌ಗಳ ಕಣ್ಣು ಬಿದ್ದಿವೆ. ಆದರೆ ಅರಣ್ಯದೊಳಗೆ ಅವರ ಯಂತ್ರಗಳು ಪ್ರವೇಶಿಸಲು ಆದಿವಾಸಿಗಳು ಬಹುದೊಡ್ಡ ಅಡ್ಡಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರನ್ನು ಸಾಮೂಹಿಕವಾಗಿ ನಿವಾರಣೆ ಮಾಡಲು ಅವರು ನ್ಯಾಯಾಲಯವನ್ನು ಬಳಸಿಕೊಂಡಿದ್ದಾರೆ.

ಆದರೆ ಇದು ಆದಿವಾಸಿಗಳನ್ನು ಭಾರತದ ವಿರುದ್ಧ ಎತ್ತಿಕಟ್ಟುವ ಎಲ್ಲ ಸಾಧ್ಯತೆಗಳಿವೆ. ಈಶಾನ್ಯ ಭಾರತದಲ್ಲಂತೂ ನಕ್ಸಲರು ತಮ್ಮ ಕಾರ್ಯಸಾಧಿಸಲು ಆದಿವಾಸಿಗಳ ಅಸಹಾಯಕತೆಯನ್ನು ಬಳಸಿಕೊಳ್ಳುತ್ತಿದ್ದಾರೆ. ನಾಳೆ, ಸೇನೆಯನ್ನು ಬಳಸಿಕೊಂಡು ಈ ಆದಿವಾಸಿಗಳನ್ನು ಸಾಮೂಹಿಕವಾಗಿ ಎತ್ತಂಗಡಿ ಮಾಡಲು ಶುರು ಹಚ್ಚಿದರೆ, ಆ ಸನ್ನಿವೇಶವನ್ನು ನಕ್ಸಲ್ ಉಗ್ರವಾದಿಗಳು ತಮಗೆ ಪೂರಕವಾಗಿ ಬಳಸಿಕೊಳ್ಳುವ ಎಲ್ಲ ಸಾಧ್ಯತೆಗಳಿವೆ. ಹತಾಶ ಆದಿವಾಸಿಗಳು ಭಾರತದ ಪ್ರಭುತ್ವದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಂಡು ಹಿಂಸೆಗಿಳಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಈ ನಿಟ್ಟಿನಲ್ಲಿ, ಸರಕಾರ ಆದಿವಾಸಿಗಳ ವಿಷಯದಲ್ಲಿ ಮಧ್ಯ ಪ್ರವೇಶಿಸಲೇ ಬೇಕು. ಆದಿವಾಸಿಗಳು ಈ ದೇಶದ ಮತ್ತು ಅರಣ್ಯದ ಭಾಗವಾಗಿದ್ದಾರೆ. ಅವರು ಅರಣ್ಯದ ಮಕ್ಕಳು ಮಾತ್ರವಲ್ಲ, ದೇಶದ ಪ್ರಜೆಗಳು. ಅವರನ್ನು ಹೊರಗಿಟ್ಟು ನಾವು ಪರಿಸರವನ್ನು ನೋಡಲಾಗುವುದಿಲ್ಲ. ಅವರ ಬದುಕನ್ನು ಸುಧಾರಿಸುವ ಕಡೆಗೆ ಸರಕಾರ ಮನ ಮಾಡಬಹುದು. ಅವರನ್ನು ಮನವೊಲಿಸಿ, ಅವರಿಗೆ ಅತ್ಯುತ್ತಮವಾದ ಪುನರ್ವಸತಿಯನ್ನು ಕಲ್ಪಿಸುವುದರಿಂದಷ್ಟೇ ಘರ್ಷಣೆಯನ್ನು ತಪ್ಪಿಸಬಹುದು. ಇಲ್ಲವಾದರೆ ಪಾಕಿಸ್ತಾನ, ಚೀನಾದ ಜೊತೆ ಜೊತೆಗೆ ನಮ್ಮದೇ ಜನರ ವಿರುದ್ಧವೂ ಯುದ್ಧ ಮಾಡಬೇಕಾದಂತಹ ಭೀಕರ ಸನ್ನಿವೇಶ ಸೃಷ್ಟಿಯಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News