ಸರಕಾರದ ನಿರ್ಧಾರಕ್ಕೆ ಗೌರವ ನೀಡುತ್ತೇವೆ: ವಿರಾಟ್ ಕೊಹ್ಲಿ

Update: 2019-02-24 04:14 GMT

ವಿಶಾಖಪಟ್ಟಣ, ಫೆ.23: ಮುಂಬರುವ ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಂದ್ಯ ಆಡುವ ಕುರಿತಂತೆ ಸರಕಾರದ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದು ಭಾರತದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

 ಪುಲ್ವಾಮದಲ್ಲಿ ನಡೆದ ಉಗ್ರನ ಆತ್ಮಾಹುತಿ ದಾಳಿಗೆ 40 ಸಿಆರ್‌ಪಿಎಫ್ ಯೋಧರು ಹುತಾತ್ಮರಾದ ಬಳಿಕ ಭಾರತ ಕ್ರಿಕೆಟ್ ತಂಡ ಪಾಕ್ ವಿರುದ್ಧ ಜೂ.16 ರಂದು ಇಂಗ್ಲೆಂಡ್‌ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆಯುವ ವಿಶ್ವಕಪ್‌ನ ಗ್ರೂಪ್ ಪಂದ್ಯವನ್ನು ಬಹಿಷ್ಕರಿಸಬೇಕು ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಕೊಹ್ಲಿ ಹೇಳಿಕೆ ಮಹತ್ವ ಪಡೆದಿದೆ. ಭಾರತೀಯ ಕ್ರಿಕೆಟ್ ಮಂಡಳಿಯು ಈ ತನಕ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೇ ಚೆಂಡನ್ನು ಸರಕಾರದ ಅಂಗಳಕ್ಕೆ ಎಸೆದಿದೆ. ‘‘ನಮ್ಮ ನಿಲುವು ಸ್ಪಷ್ಟ. ದೇಶ ಏನು ಮಾಡಲು ಬಯಸಿದೆ ಹಾಗೂ ಬಿಸಿಸಿಐ ಏನು ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದಕ್ಕೆ ನಾವು ಬದ್ಧರಾಗಿದ್ದೇವೆ. ಸರಕಾರ ಹಾಗೂ ಮಂಡಳಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನು ನಾವು ಪಾಲಿಸುತ್ತೇವೆ ಹಾಗೂ ಅದನ್ನು ಗೌರವಿಸುತ್ತೇವೆ. ಈ ನಿರ್ದಿಷ್ಟ ವಿಷಯಕ್ಕೆ ಇದು ನಮ್ಮ ನಿಲುವಾಗಿದೆ’’ ಎಂದು ಆಸ್ಟ್ರೇಲಿಯ ವಿರುದ್ಧ ರವಿವಾರ ನಡೆಯಲಿರುವ ಮೊದಲ ಟಿ-20 ಪಂದ್ಯಕ್ಕೆ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಯಕ ಕೊಹ್ಲಿ ನುಡಿದರು.

 ಇಡೀ ಭಾರತೀಯ ತಂಡದ ಪರ ಹುತಾತ್ಮ ಯೋಧರ ಕುಟುಂಬ ವರ್ಗಕ್ಕೆ ಸಾಂತ್ವನ ಹೇಳಿದ ಕೊಹ್ಲಿ,‘‘ಉಗ್ರನ ಕೃತ್ಯಕ್ಕೆ ಪ್ರಾಣ ಕಳೆದುಕೊಂಡಿರುವ ಯೋಧರ ಕುಟುಂಬಕ್ಕೆ ನಾವು ಪ್ರಾಮಾಣಿಕ ಸಾಂತ್ವನ ಹೇಳುತ್ತೇವೆ. ಘಟನೆಯ ಬಗ್ಗೆ ಭಾರತೀಯ ಕ್ರಿಕೆಟ್ ತಂಡ ನಿಜಕ್ಕೂ ಆಘಾತ ಹಾಗೂ ಬೇಸರಗೊಂಡಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News