ಅರುಣಾಚಲ ಪ್ರದೇಶ ಉಪ ಮುಖ್ಯಮಂತ್ರಿ ಬಂಗಲೆಗೆ ಬೆಂಕಿ ಹಚ್ಚಿದ ಪ್ರತಿಭಟನಕಾರರು

Update: 2019-02-24 15:02 GMT

ಹೊಸದಿಲ್ಲಿ, ಫೆ.24: ರಾಜ್ಯ ಸರಕಾರದ ವಿರುದ್ಧ ಅರುಣಾಚಲ ಪ್ರದೇಶದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತಿಭಟನಕಾರರು ಉಪ ಮುಖ್ಯಮಂತ್ರಿ ಚೌನ ಮೇನ್ ಅವರ ಬಂಗಲೆಗೆ ಬೆಂಕಿ ಹಚ್ಚಿದ್ದಾರೆ.

ರಾಜ್ಯ ರಾಜಧಾನಿ ಇಟಾನಗರದಿಂದ ಚೌನ ಮೇನ್ ನಮ್ಸಾಯಿ ಜಿಲ್ಲೆಗೆ ರವಿವಾರವೇ ಸ್ಥಳಾಂತರಗೊಂಡಿದ್ದರು. ಇಷ್ಟೇ ಅಲ್ಲದೆ ಜಿಲ್ಲಾ ಕಮಿಷನರ್ ಮನೆ ಮೇಲೆ ದಾಳಿ ನಡೆಸಿರುವ ಪ್ರತಿಭಟನಕಾರರು ಬೆಂಕಿ ಹಚ್ಚಿದ್ದಾರೆ.

ದಶಕಗಳಿಂದ ರಾಜ್ಯದಲ್ಲಿ ವಾಸಿಸುತ್ತಿರುವ ಸ್ಥಳೀಯರಲ್ಲದ ಸಮುದಾಯಗಳಿಗೆ ಶಾಶ್ವತ ವಸತಿ ಪತ್ರ ನೀಡುವುದಕ್ಕೆ ಸಂಬಂಧಿಸಿ ರಾಜ್ಯ ಸರಕಾರ ನೇಮಿಸಿದ ಸಮಿತಿಯ ಶಿಫಾರಸುಗಳ ವಿರುದ್ಧ ಶುಕ್ರವಾರದಿಂದ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಪೊಲೀಸ್ ಗುಂಡಿಗೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಈಗಾಗಲೇ ಕರ್ಫ್ಯೂ ಹೇರಲಾಗಿದೆ.

ಶುಕ್ರವಾರ ಸುಮಾರು 50 ಕಾರುಗಳಿಗೆ ಬೆಂಕಿ ಹಚ್ಚಿದ್ದ ಪ್ರತಿಭಟನಕಾರರು 100 ವಾಹನಗಳನ್ನು ಧ್ವಂಸಗೈದಿದ್ದರು. ಇಟಾನಗರದಲ್ಲಿ 5 ಚಿತ್ರ ಮಂದಿರಗಳಿಗೆ ಬೆಂಕಿ ಹಚ್ಚಲಾಗಿದೆ. ಇಟಾನಗರಕ್ಕೆ ಸೇನೆ ಆಗಮಿಸಿದೆ.

ಇಟಾನಗರ ಮತ್ತು ನಹರ್ಲಗುನ್‌ನಲ್ಲಿ ಅಂತರ್ಜಾಲ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮಾರುಕಟ್ಟೆ, ಪೆಟ್ರೋಲ್ ಪಂಪ್ ಮತ್ತು ಅಂಗಡಿಗಳನ್ನು ಮುಚ್ಚಲಾಗಿದ್ದು ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿದೆ. ರಾಜ್ಯ ರಾಜಧಾನಿಯಲ್ಲಿ ಸಾಮಾನ್ಯ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅರುಣಾಚಲ ಪ್ರದೇಶದ ಮೂಲನಿವಾಸಿಗಳಲ್ಲದ ಆದರೆ ರಾಜ್ಯದ ನಾಮ್ಸೈ ಮತ್ತು ಚಂಗ್ಲಾಂಗ್ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜೀವಿಸುತ್ತಿರುವ ಆರು ಬುಡಕಟ್ಟು ಸಮುದಾಯಗಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಜಂಟಿ ಉನ್ನತ ಅಧಿಕಾರ ಸಮಿತಿ (ಜೆಎಚ್‌ಪಿಸಿ)ಯ ಪ್ರಸ್ತಾವನೆಯ ವಿರುದ್ಧ ಹಲವು ಸಮುದಾಯ ಆಧಾರಿತ ಗುಂಪುಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ರಾಜ್ಯ ಸರಕಾರ ದಿಯೋರಿ, ಸೊನೊವಲ್ ಕಚರಿ, ಮೊರನ್,ಆದಿವಾಸಿ,ಮಿಶಿಂಗ್ ಮತ್ತು ಗೋರ್ಖಾ ಮುಂತಾದ ಬುಡಕಟ್ಟು ಸಮುದಾಯಗಳಿಗೆ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಮೂಲಕ ರಾಜ್ಯದ ಮೂಲಜನರ ಹಕ್ಕುಗಳು ಮತ್ತು ಹಿತಾಸಕ್ತಿಗಳ ಜೊತೆ ಹೊಂದಾಣಿಕೆ ಮಾಡಲಿ ಮುಂದಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News