ಪಾದಪೂಜೆಯೆಂಬ ಪ್ರಹಸನ

Update: 2019-02-26 08:03 GMT

ಅಧಿಕಾರದಲ್ಲಿರುವಾಗ ಯಾವುದೇ ಜನಪರ ಕಾರ್ಯಕ್ರಮ ಜಾರಿಗೆ ತರದವರು ಜನರಿಗಾಗಿ ಯಾವ ಕೆಲಸವನ್ನು ಮಾಡದವರು ಬರೀ ಮಾತನ್ನೇ ಬಂಡವಾಳ ಮಾಡಿಕೊಂಡು ಅದನ್ನೇ ಜನರಿಗೆ ಉಣಬಡಿಸುತ್ತ ಬಂದವರು, ಸಾಂವಿಧಾನಿಕ ಹೊಣೆಗಾರಿಕೆಯನ್ನು ಮರೆತು ಉಳ್ಳವರ ತಿಜೋರಿ ತುಂಬಿದವರು ಮತ್ತೆ ಚುನಾವಣೆಗೆ ಬಂದಾಗ ಏನು ಮಾಡುತ್ತಾರೋ ಅದನ್ನೇ ಪ್ರಧಾನಿ ಮೋದಿ ಈಗ ಮಾಡುತ್ತಿದ್ದಾರೆ. ಜನರನ್ನು ಅವರ ನಿಜವಾದ ಸಮಸ್ಯೆಗಳಿಂದ ವಿಮುಖರನ್ನಾಗಿ ಮಾಡಿ ಜಾತಿ, ಮತದ ಹುಚ್ಚು ಹೊಳೆಯಲ್ಲಿ ಹರಿದು ಹೋಗುವಂತೆ ಮಾಡುವುದು ಕೋಮುವಾದಿ ರಾಜಕಾರಣಿಗಳ ಚಾಳಿ. ಮೋದಿಯವರು ಇದಿಷ್ಟೇ ಅಲ್ಲದೆ ‘ಪೌರ ಕಾರ್ಮಿಕರ ಪಾದಪೂಜೆ’ ಎಂಬ ಹೊಸ ನಾಟಕವನ್ನು ಆಡುತ್ತಿದ್ದಾರೆ.

ಮಲದ ಗುಂಡಿ ಸ್ವಚ್ಛ ಮಾಡಲು ಒಳಚರಂಡಿಯ ಒಳಗೆ ಇಳಿಯುವ ಪೌರ ಕಾರ್ಮಿಕರು ಆಧ್ಯಾತ್ಮಿಕ ಅನುಭೂತಿ ಹೊಂದಿರುತ್ತಾರೆಂಬ ಮಾತನ್ನು ಹೇಳಿ ಮಲಹೊರುವ ಪದ್ಧತಿಯನ್ನು ಈ ಹಿಂದೆ ಸಮರ್ಥಿಸಿಕೊಂಡಿದ್ದ ನರೇಂದ್ರ ಮೋದಿ ಅವರು ರವಿವಾರ ದಿಢೀರನೆ ಪ್ರಯಾಗರಾಜ್‌ನಲ್ಲಿ, ಮಾಧ್ಯಮಗಳ ಕ್ಯಾಮರಾ ಎದುರು ಪೌರ ಕಾರ್ಮಿಕರ ಪಾದಪೂಜೆ ಮಾಡಿ ಅವರನ್ನು ಹೊಗಳಿ ಹೊನ್ನಶೂಲಕ್ಕೇರಿಸಿದ್ದಾರೆ. ಇದು ಲೋಕಸಭಾ ಚುನಾವಣೆಗಾಗಿ ಮಾಡಿದ ಪ್ರಹಸನ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.

ಜನತೆ ಚುನಾವಣೆಯ ಮೂಲಕ ಅಧಿಕಾರ ನೀಡಿದಾಗ, ದೊರೆತ ಅಧಿಕಾರವನ್ನು ಜನರ ನೋವಿಗೆ ಸ್ಪಂದಿಸಿ ಅವರ ಸೇವೆಗೆ ಮೀಸಲಾಗಿಟ್ಟರೆ ಇಂತಹ ಗಿಮಿಕ್ ಮಾಡುವ ಅಗತ್ಯವಿರುವುದಿಲ್ಲ. ಜನಸೇವೆ ಮಾಡಿದ ರಾಜಕಾರಣಿಗಳಿಗೆ ಜನರ ಮನೆ ಬಾಗಿಲಿಗೆ ಹೋಗಲು ಸಂಕೋಚವೂ ಇರುವುದಿಲ್ಲ. ಇದಕ್ಕೆ ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅತ್ಯುತ್ತಮ ಉದಾಹರಣೆ. ಅವರು ಅಧಿಕಾರದಲ್ಲಿದ್ದಾಗ ತಂದ ‘ಅನ್ನ ಭಾಗ್ಯ’ದಂತಹ ಜನಪರ ಯೋಜನೆಗಳು ಹಸಿದವರ ಒಡಲನ್ನು ತುಂಬಿ ನೆಮ್ಮದಿ ಮೂಡಿಸಿದ್ದವು. ಅವರು ಆರಂಭಿಸಿದ ಇಂದಿರಾ ಕ್ಯಾಂಟೀನ್ ನಗರ ಪ್ರದೇಶದ ಬಡ ಕೂಲಿ ಕಾರ್ಮಿಕರ, ಆಟೊ ಚಾಲಕರ, ಬಡ ವಿದ್ಯಾರ್ಥಿಗಳ ಹಸಿವನ್ನು ಇಂಗಿಸಿತು. ಹೀಗಾಗಿ ಮಾಧ್ಯಮಗಳ ಕ್ಯಾಮರಾ ಎದುರು ಪಾದ ತೊಳೆಯುವ ಅಗತ್ಯ ಅವರಿಗೆ ಉಂಟಾಗಲಿಲ್ಲ. ಯಾವ ಕೆಲಸ ಮಾಡದೇ ಬರೀ ಮಾತಾಡುತ್ತ ಉಡಾಫೆ ಹೊಡೆಯುವ ರಾಜಕಾರಣಿ ಮಾತ್ರ ಇಂತಹ ಗಿಮಿಕ್‌ಗಳಿಗೆ ಮೊರೆ ಹೋಗುತ್ತಾನೆ.

ಪೌರ ಕಾರ್ಮಿಕರ ಜೀವನಸ್ಥಿತಿ ಬದಲಿಸದೆ, ಅವರ ಸಂಬಳ ಭತ್ತೆಗಳನ್ನು ಜಾಸ್ತಿ ಮಾಡದೆ ಪಾದಪೂಜೆ ಮಾಡುವ ಇಂತಹ ಚುನಾವಣಾ ಪ್ರಹಸನಗಳು ಜನವಂಚನೆಯಲ್ಲದೆ ಬೇರೇನೂ ಅಲ್ಲ. ಕಳೆದ ನಾಲ್ಕೂವರೆ ವರ್ಷಗಳ ಕಾಲಾವಧಿಯಲ್ಲಿ ಜನರಿಗಾಗಿ ಏನನ್ನೂ ಮಾಡದೆ, ನಾಗಪುರ ಮೂಲದ ಸಂವಿಧಾನೇತರ ಅಧಿಕಾರ ಕೇಂದ್ರದ ಸೂತ್ರದ ಬೊಂಬೆಯಂತೆ ಕುಣಿದು ಅಂಬಾನಿ ಅದಾನಿಗಳಂತಹ ಕಾರ್ಪೊರೇಟ್ ಬಂಡವಾಳಶಾಹಿಯ ತಿಜೋರಿ ತುಂಬಿದ ಮೋದಿಯವರಿಗೆ ಈಗ ಪೌರ ಕಾರ್ಮಿಕರ ನೆನಪಾಗಿದೆ.

ಕಳೆದ ನಾಲ್ಕೂವರೆ ವರ್ಷಗಳಲ್ಲಿ ಜನರಿಗೆ ನೀಡಿದ ಯಾವ ಭರವಸೆಯನ್ನೂ ಈಡೇರಿಸಲಿಲ್ಲ. ವಿದೇಶದಿಂದ ಕಪ್ಪುಹಣ ಭಾರತಕ್ಕೆ ಬಂದು ಎಲ್ಲರ ಬ್ಯಾಂಕ್ ಖಾತೆಗೆ ಜಮಾ ಆಗಲಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಆಶ್ವಾಸನೆ ಈಡೇರಲಿಲ್ಲ. ನೀಡಿದ ಭರವಸೆಗಳನ್ನು ಈಡೇರಿಸುವುದು ಒತ್ತಟ್ಟಿಗಿರಲಿ, ಜನರಿಗೆ ನೆಮ್ಮದಿಯಾಗಿರಲು ಬಿಡಲಿಲ್ಲ. ದನದ ಮಾಂಸದ ಹೆಸರಿನಲ್ಲಿ ಇವರ ಪರಿವಾರ ಮಾಡಿದ ನರಹತ್ಯೆಗಳಿಗೆ ಲೆಕ್ಕವಿಲ್ಲ. ನೋಟು ಅಮಾನ್ಯೀಕರಣದ ಹೆಸರಿನಲ್ಲಿ ಬಡವರ ಪ್ರಾಣಹಿಂಡಲಾಯಿತು. ಜಿಎಸ್‌ಟಿ ತಂದು ವ್ಯಾಪಾರಸ್ಥರು ದಿವಾಳಿಯ ಅಂಚಿಗೆ ಬಂದು ನಿಲ್ಲುವಂತಾಯಿತು. ಇದನ್ನೆಲ್ಲ ಪ್ರಶ್ನಿಸಿದ ಸಾಹಿತಿ, ಚಿಂತಕರನ್ನು ‘ನಗರ ನಕ್ಸಲ’ರೆಂದು ಜೈಲಿಗೆ ತಳ್ಳಲಾಗಿದೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಅವರ ಹಂತಕರನ್ನು ಈವರೆಗೆ ದಂಡನೆಗೆ ಗುರಿಪಡಿಸಿಲ್ಲ.

ಪೌರ ಕಾರ್ಮಿಕರ ಬಗ್ಗೆ ಪ್ರಧಾನಿ ಮೋದಿಯವರಿಗೆ ನಿಜವಾಗಿ ಕಾಳಜಿ ಇದ್ದರೆ ಇಂತಹ ಪ್ರಹಸನ ನಡೆಸುವುದನ್ನು ಬಿಟ್ಟು ಅವರ ಬದುಕನ್ನು ಸುಧಾರಿಸಲು ಮುಂದಾಗಲಿ. ಕಳೆದ ಒಂದೂವರೆ ವರ್ಷದಲ್ಲಿ ಪ್ರತಿ ಐದು ದಿನಕ್ಕೆ ಒಬ್ಬ ಕಾರ್ಮಿಕ ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಸಾಯುತ್ತಿದ್ದಾನೆ. ಹೀಗೆ ಸತ್ತವರಿಗೆ ಸೂಕ್ತ ಪರಿಹಾರವೂ ದೊರೆತಿಲ್ಲ. ಅವರ ಕುಟುಂಬದ ಸದಸ್ಯರು ಬೀದಿಪಾಲಾಗಿದ್ದಾರೆ. ನಿಮ್ಮ ಪಾದಪೂಜೆಯ ನಾಟಕ ಸತ್ತವರನ್ನು ಬದುಕಿಸುವುದಿಲ್ಲ. ನಿಮಗೆ ಆತ್ಮಸಾಕ್ಷಿ ಇದ್ದರೆ ಮಲದ ಗುಂಡಿಗೆ ಇಳಿದು ಉಸಿರುಗಟ್ಟಿ ಸತ್ತವರಿಗೆ ಗಡಿಯಲ್ಲಿ ಹುತಾತ್ಮರಾದ ಸೇನಾ ಯೋಧರ ಸ್ಥಾನಮಾನ ನೀಡಿ ರಾಷ್ಟ್ರಧ್ವಜ ಹೊದಿಸಿ ಅಂತ್ಯಕ್ರಿಯೆ ಮಾಡಬೇಕು. ಮಾತ್ರವಲ್ಲ ಸೂಕ್ತ ಪರಿಹಾರ ನೀಡಿ, ಅವರ ಕುಟುಂಬಕ್ಕೆ ಪುನರ್ವಸತಿ ಕಲ್ಪಿಸಬೇಕು.

ನಿಮ್ಮ ಪಾದಪೂಜೆಯಂತಹ ಪ್ರಹಸನಗಳಿಂದ ಚುನಾವಣೆಯನ್ನು ಗೆಲ್ಲಬಹುದೆಂಬ ಭ್ರಮೆಯನ್ನು ಬಿಟ್ಟುಬಿಡಿ. ಕಳೆದ ನಾಲ್ಕೂವರೆ ವರ್ಷಗಳಲ್ಲಿ ಏನು ಕಡೆದು ಕಟ್ಟೆ ಹಾಕಿದ್ದೀರಿ ಎಂಬುದನ್ನು ಜನರಿಗೆ ಹೇಳಿಬಿಡಿ. ತಪ್ಪಾಗಿದ್ದರೆ ಜನರ ಕ್ಷಮೆ ಯಾಚಿಸಿ. ಜನಸಾಮಾನ್ಯರನ್ನು ವಂಚಿಸುವ ಇಂತಹ ನಾಟಕಗಳನ್ನು ಮೊದಲು ನಿಲ್ಲಿಸಿ.

ಇದು ಪ್ರಜಾಪ್ರಭುತ್ವ, ಇಲ್ಲಿ ಪ್ರಜೆಗಳೇ ಸರ್ವೋಚ್ಚ. ಪ್ರತಿ ಐದು ವರ್ಷಕ್ಕೆ ತಮ್ಮ ಪ್ರತಿನಿಧಿಗಳನ್ನು ಪ್ರಜೆಗಳು ಚುನಾಯಿಸುತ್ತಾರೆ. ಚುನಾಯಿತ ಪ್ರತಿನಿಧಿಗಳು ಸಂವಿಧಾನಕ್ಕೆ ವಿಧೇಯರಾಗಿ ನಡೆಯಬೇಕಾಗುತ್ತದೆ. ಹಾಗೆಂದು ಪ್ರಮಾಣ ವಚನವನ್ನು ಸ್ವೀಕರಿಸಿರುತ್ತಾರೆ. ಮೋದಿಯವರೇ, ನೀವು ಸಂವಿಧಾನಕ್ಕೆ ಬದ್ಧವಾಗಿ ಕಾರ್ಯ ನಿರ್ವಹಿಸಿದ್ದೀರಾ? ನಿಮ್ಮನ್ನು ನೀವು ಪ್ರಶ್ನಿಸಿಕೊಳ್ಳಿ. ಆರ್‌ಬಿಐ, ಸಿಬಿಐ, ಯುಜಿಸಿಯಂತಹ ಸಾಂವಿಧಾನಿಕ ಸಂಸ್ಥೆಗಳಲ್ಲಿ ಹಸ್ತಕ್ಷೇಪ ಮಾಡಿ ಅವುಗಳ ಸ್ವಾಯತ್ತೆಗೆ ಭಂಗ ತಂದಿರಿ. ಸುಪ್ರೀಂ ಕೋರ್ಟ್ ಮೇಲೂ ಪ್ರಭಾವ ಬೀರಲು ಯತ್ನಿಸಿದಿರಿ. ನಿಮ್ಮ ಸಂಪುಟದ ಮಂತ್ರಿಗಳು ಸಂವಿಧಾನದ ಬದಲಾವಣೆಯ ಬಗ್ಗೆ ಮಾತಾಡುತ್ತಿದ್ದಾರೆ. ಹತ್ತಿದ ಏಣಿಯನ್ನೇ ಒದ್ದು ಬೀಳಿಸುವ ನಿಮ್ಮನ್ನು ಮತ್ತೆ ಚುನಾಯಿಸಬೇಕೇ ಉತ್ತರಿಸಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News