‘ದಿ ಏಂಜೆಲ್’ ಹಾಲುಗಲ್ಲದ ಹುಡುಗನ ಕ್ರೌರ್ಯದ ಕತೆ

Update: 2019-02-26 18:39 GMT

ಕಾರ್ಲಿಟೋಸ್- 17 ವರ್ಷದ ಬಾಲಕ. ಹಾಲುಗಲ್ಲದ, ಹೊಳೆವ ಕಂಗಳ, ರಕ್ತ ಉಕ್ಕುವ ತುಟಿಗಳ, ಗುಂಗುರು ಕೂದಲಿನ, ನೋಡಿದಾಕ್ಷಣ ಮುಗ್ಧ ಎನಿಸುವ ಸುಂದರ ಹುಡುಗ. ಶಾಲೆಗೆ ಹೋಗುವ ವಿದ್ಯಾರ್ಥಿ. ಅಂತಹ ವಯಸ್ಸಿನಲ್ಲಿ ಸಹಜವಾಗಿಯೇ ಭವಿಷ್ಯದಲ್ಲಿ ತಾನು ಡಾಕ್ಟರೋ, ಇಂಜಿನಿಯರೋ, ಲಾಯರೋ ಅಥವಾ ಅದಕ್ಕಿಂತಲೂ ದೊಡ್ಡದು ಏನಾದರೂ ಆಗಬೇಕೆಂಬ ಆಸೆ ಇರುತ್ತದೆ. ಆದರೆ ಈ ನಮ್ಮ ಕಥಾನಾಯಕ ಕಾರ್ಲಿಟೋಸ್‌ಗೆ ಕಳ್ಳನಾಗಬೇಕೆಂಬ ಅದಮ್ಯ ಆಸೆ. ಅದಕ್ಕೆ ತಕ್ಕಂತೆ ‘‘ನಾನು ಹುಟ್ಟಾ ಕಳ್ಳ, ದೇವರ ಗೂಢಚಾರ, ನೇರವಾಗಿ ಸ್ವರ್ಗದಿಂದ ಇಳಿದು ಬಂದವನು’’ ಎಂದು ಅನಿಸಿದ್ದನ್ನು ಆಡುವ, ಆಡಿದ್ದನ್ನು ಮಾಡುವ ಉಢಾಳ.
ಬೆಂಗಳೂರು ಅಂತರ್ ರಾಷ್ಟ್ರೀಯ ಸಿನೆಮೋತ್ಸವದಲ್ಲಿ ಪ್ರದರ್ಶನ ಕಂಡ ಅರ್ಜೆಂಟೈನಾ ದೇಶದ ‘ದಿ ಏಂಜಲ್’ ಚಿತ್ರದ ಕಥಾನಾಯಕನ ಪುಟ್ಟ ಪರಿಚಯವಿದು. 70ರ ದಶಕದಲ್ಲಿ, ಬೋನಸ್ ಐರಿಸ್ ನಗರದಲ್ಲಿ ನಡೆಯುವ ಕತೆ. ಬಾಲಕನ ಅಪ್ಪ-ಅಮ್ಮ, ಅಷ್ಟೇನೂ ಶ್ರೀಮಂತರಲ್ಲದ ಮಧ್ಯಮವರ್ಗಕ್ಕೆ ಸೇರಿದವರು. ಒಬ್ಬನೇ ಮಗನನ್ನು ಕೊಂಚ ಮುದ್ದಿನಿಂದ ಸ್ವತಂತ್ರವಾಗಿ ಬೆಳೆಯಲು ಬಿಟ್ಟವರು. ಅಮ್ಮನಿಗೆ ಮಗನ ಮೇಲೆ ಪ್ರೀತಿ, ವ್ಯಾಮೋಹ ಮತ್ತು ಬೆಟ್ಟದಷ್ಟು ನಿರೀಕ್ಷೆ. ಆತನೂ ಅಷ್ಟೆ, ಅಮ್ಮನೊಂದಿಗೆ ಮಗುವಾಗಿದ್ದು, ಅಪ್ಪನೊಂದಿಗೆ ಅಂತರ ಕಾಯ್ದುಕೊಂಡಿರುತ್ತಾನೆ. ನೋಡಲಿಕ್ಕೆ ನಮ್ಮ-ನಿಮ್ಮಂತೆಯೇ ಕಾಣುವ ಕುಟುಂಬ.
ಮಗ ಒಂದು ದಿನ ಬುಲೆಟ್‌ನಲ್ಲಿ ಬರುತ್ತಾನೆ. ಅಮ್ಮ ‘ಎಲ್ಲಿಂದ ತಂದೆ’ ಎಂದು ಪ್ರಶ್ನಿಸಿದರೆ, ಆತ ‘ನನ್ನ ಸ್ನೇಹಿತನಿಂದ ಸಾಲ ಪಡೆದೆ’ ಎನ್ನುತ್ತಾನೆ. ಅದಕ್ಕವಳು ‘ಎಲ್ಲರೂ ನಿನಗೆ ಕೊಡೋರೆ’ ಎಂದು ನಿಟ್ಟುಸಿರುಬಿಡುತ್ತಾಳೆ. ಆ ನಿಟ್ಟುಸಿರಿನಲ್ಲಿ ಆತ ಕಳ್ಳ ಎಂಬುದು ಗೊತ್ತಿದ್ದೂ ತಿದ್ದಲಾಗದ, ತಿಳಿ ಹೇಳಲಾಗದ ಅಸಹಾಯಕತೆ ಅಡಗಿರುತ್ತದೆ.


ಶಾಲೆಯಲ್ಲಿ ತನಗಿಂತ ದೃಢಕಾಯನಾದ ಹುಡುಗನಿಗೆ ಕಿರಿಕ್ ಮಾಡಿ ಒದೆ ತಿನ್ನುತ್ತಾನೆ. ಒದೆ ತಿಂದರೂ ಆತನ ಹಿಂದೆ ಬಿದ್ದು ಸ್ನೇಹಿತನನ್ನಾಗಿಸಿಕೊಳ್ಳುತ್ತಾನೆ. ಬಲವಂತವಾಗಿ ಸ್ನೇಹಿತ ರಾಮೋಸ್‌ನ ಮನೆಗೆ ಹೋಗಿ, ಆತನ ಅಪ್ಪ-ಅಮ್ಮನನ್ನು ಭೇಟಿ ಮಾಡಿ, ಸಲುಗೆ ಬೆಳೆಸಿ, ತನ್ನ ಕಳ್ಳ ಕೃತ್ಯದ ಝಲಕ್ ತೋರಿಸುತ್ತಾನೆ. ಅವನು ಮಾಡುವ ಮೋಡಿಗೆ ಅವರೂ ಆತನ ಕೃತ್ಯದಲ್ಲಿ ಒಳಗೊಳ್ಳುತ್ತಾರೆ. ಸ್ನೇಹಿತನ ಅಪ್ಪನೇ ಈತನಿಗೆ ಪಿಸ್ತೂಲ್ ಹಿಡಿಯುವುದನ್ನು, ಗುರಿ ಮಾಡಿ ಹೊಡೆಯುವುದನ್ನು ಹೇಳಿಕೊಡುತ್ತಾನೆ. ಒಂದು ದಿನ ಇದ್ದಕ್ಕಿದ್ದಂತೆ ಕಾರ್ಲಿಟೋಸ್ ಒಬ್ಬನನ್ನು ಕೊಂದು ಬರುತ್ತಾನೆ. ಸ್ನೇಹಿತನ ಅಪ್ಪ, ‘‘ನೀನು ಕೊಂದಿದ್ದು ಸರಿಯಲ್ಲ’’ ಎನ್ನುತ್ತಾನೆ. ತಕ್ಷಣ ಕಾರ್ಲಿಟೋಸ್, ‘‘ನಾವು ಕೊಂದಿದ್ದು’’ ಎಂದು ತಿದ್ದಿ, ಇಕ್ಕಟ್ಟಿಗೆ ಸಿಲುಕಿಸುತ್ತಾನೆ. ಅಂದರೆ, ತನ್ನ ಕೃತ್ಯದಲ್ಲಿ ನೀವೆಲ್ಲ ಭಾಗಿ ಎನ್ನುವುದನ್ನು ಮನದಟ್ಟು ಮಾಡಿಸುತ್ತಾನೆ. ಹೀಗೆ ದಿನದಿಂದ ದಿನಕ್ಕೆ, ಚಿಕ್ಕದರಿಂದ ದೊಡ್ಡದಕ್ಕೆ ಆತನ ಕೃತ್ಯಗಳು ಬೆಳೆಯುತ್ತಲೇ ಹೋಗುತ್ತವೆ. ದರೋಡೆ, ಕೊಲೆ, ಲೂಟಿ ನಿರಂತರವಾಗುತ್ತವೆ. ಸ್ನೇಹಿತ, ಆತನ ಅಪ್ಪ-ಅಮ್ಮರೊಂದಿಗಿನ ಲೈಂಗಿಕ ಸಂಬಂಧ, ಮೋಜಿನ ಜೀವನ ಎಲ್ಲವೂ ಹದ್ದುಮೀರಿ ಹೋಗುತ್ತದೆೆ. ಆದರೆ ಬಾಲಕ, ಬಾಲಕನಂತೆಯೇ ಇರುತ್ತಾನೆ. ಅದೇ ಮುಗ್ಧತೆ, ಅದೇ ಅಮಾಯಕತೆ. ನಡುವೆ ಆಗೊಮ್ಮೆ ಈಗೊಮ್ಮೆ ಮನೆಗೆ ಬಂದು ಅಮ್ಮ ಮಾಡಿಟ್ಟ ಅಡುಗೆ ತಿಂದು, ಮತ್ತದೇ ಉಡಾಫೆ ಮಾತುಗಳಿಂದ ಅವಳನ್ನು ರಂಜಿಸಿ, ಕೆಲ ಹೊತ್ತು ಮಲಗಿದ್ದು, ಹೇಳದೆ ಕೇಳದೆ ಎದ್ದುಹೋಗುವುದೂ ಕೂಡ ಮಾಮೂಲಾಗಿಹೋಗುತ್ತದೆ. ಈತನ್ಮಧ್ಯೆ ಸ್ನೇಹಿತ ರಾಮೋಸ್‌ನೊಂದಿಗೆ ಜಗಳವಾಗಿ ಮತ್ತೆ ಒಂದಾಗಿ ಮತ್ತೊಂದಷ್ಟು ಕೊಲೆ ಸುಲಿಗೆಗಳಲ್ಲಿ ಮುಳುಗೇಳುತ್ತಿರುವಾಗಲೇ, ಗೆಳೆಯ ರಾಮೋಸ್‌ನನ್ನೇ ಆ್ಯಕ್ಸಿಡೆಂಟ್‌ನಲ್ಲಿ ಕೊಲ್ಲುತ್ತಾನೆ. ಇದ್ದಕ್ಕಿದ್ದಂತೆ ಕಾರನ್ನು ಅಪಘಾತ ಮಾಡಿ ಸುಟ್ಟು ಹಾಕುತ್ತಾನೆ. ಸದಾ ಎರಡೆರಡು ರಿವಾಲ್ವಾರ್‌ಗಳನ್ನಿಟ್ಟುಕೊಂಡು ಊರೂರು ಅಲೆಯುತ್ತಾನೆ. ಒಟ್ಟಿನಲ್ಲಿ ತನ್ನನ್ನೇ ತಾನು ಮೀರುವಂತೆ, ತನ್ನ ಕೃತ್ಯಗಳನ್ನು ತಾನೇ ಉಲ್ಲಂಘಿಸುವಂತೆ, ಹೊಸದನ್ನು ಅತಿಕ್ರಮಿಸುವಂತೆ ಒಂದರಿಂದ ಒಂದಕ್ಕೆ ಜಿಗಿಯುತ್ತಲೇ, ಅದರಲ್ಲಿಯೇ ವಿಹರಿಸುತ್ತಿರುತ್ತಾನೆ. ಕೊನೆಗೊಂದು ದಿನ ಪೊಲೀಸರ ಅತಿಥಿಯಾಗುತ್ತಾನೆ. ಸುದ್ದಿಯ ಕೇಂದ್ರ ಬಿಂದುವಾಗುತ್ತಾನೆ. ಟಿವಿಯ ಸುದ್ದಿಗಳಲ್ಲೆಲ್ಲ ಅವನೆ. ಪೇಪರ್‌ಗಳ ಮುಖಪುಟದಲ್ಲಿಯೂ ಆತನೆ. ದಿನಬೆಳಗಾದರೆ ಖಳನಾಯಕ ನಾಯಕನಾಗಿರುತ್ತಾನೆ. ಹದಿಹರೆಯದ ಹುಡುಗಿಯರು ಆತನ ಅಭಿಮಾನಿಗಳಾಗಿ, ಆತನ ಒಂದು ನೋಟಕ್ಕೆ, ನಗುವಿಗೆ ಹಾತೊರೆಯುತ್ತಾರೆ. ಅಪ್ಪಿಮುದ್ದಾಡಲು ಮುಂದಾಗುತ್ತಾರೆ. ಕೊನೆಗೂ ಆತ ಜೈಲು ಪಾಲಾಗುತ್ತಾನೆ. ಆದರೆ ಅಲ್ಲೂ ತನ್ನ ಕೈಚಳಕ ತೋರಿ, ಪೋಲಿಸ್ ಬಿಗಿ ಭದ್ರತೆಯನ್ನು ಭೇದಿಸಿ ತಪ್ಪಿಸಿಕೊಂಡು ಬರುತ್ತಾನೆ. ಒಬ್ಬಂಟಿಯಾಗಿ ಅಲೆಯುತ್ತಾನೆ. ಯಾರೂ ಇಲ್ಲದ ಸ್ನೇಹಿತನ ಮನೆಗೆ ಹೋಗಿ ಚೆನ್ನಾಗಿ ನಿದ್ದೆ ಮಾಡುತ್ತಾನೆ. ಅಲ್ಲಿಂದ ಅಮ್ಮನಿಗೆ ಫೋನ್ ಮಾಡಿ, ‘‘ನಿನ್ನ ಸುತ್ತ ಪೊಲೀಸರಿರಬೇಕಲ್ಲ’’ ಎನ್ನುತ್ತಾನೆ. ಅಮ್ಮನ ಸುಳಿವಿನ ಮೂಲಕ ಪೊಲೀಸರ ಅತಿಥಿಯಾಗುತ್ತಾನೆ.
ಇದು 40 ವರ್ಷಗಳಿಂದ ಸೆರೆಮನೆ ವಾಸಿಯಾಗಿರುವ ಕಾರ್ಲೋಸ್ ರೆಬ್ಲೆಡೋ ಪುಚ್ ಎಂಬ ಕೊಲೆಗಾರನ ಕತೆ. ಆತ ಖ್ಯಾತ ನಿರ್ದೇಶಕ ಕ್ವಿಂಟಿನ್ ಟೊರಾಂಟಿನೋ ಮತ್ತು ಡಿಕಾರ್ಪಿಯೋ ಸೇರಿ, ತನ್ನ ಕತೆಯನ್ನು ಚಿತ್ರ ಮಾಡಬೇಕೆಂದು ಬಯಸಿದ್ದನಂತೆ. ಅದಾಗದಿದ್ದಾಗ, ಅರ್ಜೆಂಟೈನಾದ ಯುವ ನಿರ್ದೇಶಕ ಲೂಯಿಸ್ ಒರ್ಟೆಗಾ, ಆತನ ನೈಜ ಘಟನೆಗಳನ್ನಾಧರಿಸಿ, ಅದನ್ನು ಕೊಂಚ ವೈಭವೀಕರಿಸಿ, ಸಿನಿಮೀಯ ಸ್ಪರ್ಶ ನೀಡಿ ಚಿತ್ರವನ್ನಾಗಿಸಿದ್ದಾನೆ. ನಾಯಕ-ಖಳನಾಯಕನ ಪಾತ್ರ ನಿರ್ವಹಿಸಿರುವ ಲೊರೆಂಜೋ ಫೆರೋ, ನಟಿಸಿಲ್ಲ ಜೀವಿಸಿದ್ದಾನೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಿನೆಮಾವನ್ನು ಇನ್ನಷ್ಟು ಆಪ್ತವಾಗಿಸಿದೆ. ಸಂಭಾಷಣೆ ಚುರುಕಾಗಿ, ಅಲ್ಲಲ್ಲಿ ನಗಿಸುತ್ತದೆ.
ಅಷ್ಟು ಬಿಟ್ಟರೆ, ವಿದೇಶಿ ಚಿತ್ರವೆಂಬ ವಿಶೇಷ ಒತ್ತುಕೊಟ್ಟು ನೋಡಬೇಕಾದ ಸಿನೆಮಾ ಅಲ್ಲ. ಸಾಧಾರಣ ಕ್ರೈಮ್ ಥ್ರಿಲ್ಲರ್ ಚಿತ್ರ, ಒಮ್ಮೆ ನೋಡಬಹುದಷ್ಟೆ. ಚಿತ್ರದಿಂದ ಸಂದೇಶ, ಸದಭಿರುಚಿ, ಸಾಮಾಜಿಕ ಬದಲಾವಣೆ, ಕೊನೆಗೆ ಬುದ್ಧಿಗೆ ಸಾಣೆ ಏನೂ ಇಲ್ಲ. ಚಿತ್ರ ಮಾಡಿದವರಿಗೂ ಅದು ಮುಖ್ಯ ಅನಿಸಿಲ್ಲ. ನಮ್ಮಲ್ಲಿ ದಾರಿ ತಪ್ಪಿದ ಮಕ್ಕಳು ಬೆಂಗಳೂರಿಗೆ ಬಂದು ಮಚ್ಚು ಲಾಂಗು ಹಿಡಿಯುವಂತೆ, ಅವರು, ಅಲ್ಲಿ ಸುಲಭಕ್ಕೆ ಸಿಗುವ ಗನ್ ಹಿಡಿದಿದ್ದಾರೆ, ಅಷ್ಟೇ ವ್ಯತ್ಯಾಸ.

Writer - ಬಸು ಮೇಗಲಕೇರಿ

contributor

Editor - ಬಸು ಮೇಗಲಕೇರಿ

contributor

Similar News

ಜಗದಗಲ
ಜಗ ದಗಲ