''ನಾವು ಯು-ಟರ್ನ್, ಸಿ-ಟರ್ನ್, ಅಥವಾ ಝೆಡ್-ಟರ್ನ್ ಕೂಡ ಹೊಡೆಯುತ್ತೇವೆ''

Update: 2019-02-28 08:20 GMT

ಮುಂಬೈ, ಫೆ.28: ಮುಂದಿನ ಚುನಾವಣೆಯನ್ನು ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಈ ಹಿಂದೆ ಹೇಳಿದ್ದ ಶಿವಸೇನೆ ಇದೀಗ ಬಿಜೆಪಿ ಜತೆ ಮೈತ್ರಿ ಮುಂದುವರಿಸಿಕೊಂಡು ಹೋಗಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿರುವಂತೆಯೇ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಬುಧವಾರ ನಡೆದ ಪಕ್ಷದ ಸ್ಥಾನೀಯ ಲೋಕಾಧಿಕಾರ್ ಸಮಿತಿ ಸಭೆಯಲ್ಲಿ ಮಾತನಾಡುತ್ತಾ ಟೀಕಾಕಾರರಿಗೆ ಪ್ರತ್ಯುತ್ತರ ನೀಡಿದ್ದಾರೆ.

‘‘ಮೈತ್ರಿಯಿಂದ ಪಕ್ಷ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆಂದು ಹಾಗೂ ಉದ್ಧವ್ ಠಾಕ್ರೆ ಯು-ಟರ್ನ್ ಹೊಡೆದಿದ್ದಾರೆಂದು ಹೇಳಲಾಗುತ್ತಿದೆ. ನಾನು ಸಿ-ಟರ್ನ್ ಅಥವಾ ಝೆಡ್-ಟರ್ನ್ ಹೊಡೆಯುತ್ತೇನೆ. ನನಗೆ ಬೇಕಿದ್ದಂತೆ, ಸೈನಿಕರ ಸಹಾಯದಿಂದ ಪಕ್ಷ ನಡೆಸುತ್ತೇನೆ’’ ಎಂದು ಉದ್ಧವ್ ಠಾಕ್ರೆ ಹೇಳಿದರು.

‘‘ನಾವು ಏಕಾಂಗಿಯಾಗಿ ಚುನಾವಣೆ ಸ್ಪರ್ಧಿಸಿದ್ದರೆ ಗೆಲ್ಲುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ ಯಾವುದೇ ಪಕ್ಷ, ಅದು ಕಾಂಗ್ರೆಸ್ ಅಥವಾ ಬಿಜೆಪಿಯಾಗಿರಲಿ, ಏಕಾಂಗಿಯಾಗಿ ಹೋರಾಡುವುದಿಲ್ಲ. ನಾವು ಕೂಡ ಏಕಾಂಗಿಯಾಗಿ ಸ್ಪರ್ಧಿಸಿ ಗೆಲ್ಲುತ್ತಿದ್ದರೂ ಅತಂತ್ರ ಸಂಸತ್ತು ನಿರ್ಮಾಣವಾಗುತ್ತಿತ್ತು. ಹಾಗೇನಾದರೂ ಆದರೆ ಕಾಂಗ್ರೆಸ್ ಜತೆ ಕೈಜೋಡಿಸಲು ಸಾಧ್ಯವೇ?,’’ ಎಂದು ಅವರು ಪ್ರಶ್ನಿಸಿದರು.

‘‘ನಾವು ಮತ್ತು ಬಿಜೆಪಿ 25 ವರ್ಷ ಜತೆಯಾಗಿದ್ದೆವು. ಅವರಿಗೆ ಇನ್ನೊಂದು ಐದು ವರ್ಷಗಳನ್ನು ನೀಡೋಣ. ದೇಶ ಕಾಂಗ್ರೆಸ್ ಕೈಗೆ ಹೋಗಿದ್ದರೆ, ಹಿಂದುತ್ವ ಸೇರಿದಂತೆ ಬಹಳಷ್ಟು ವಿಚಾರಗಳು ಹಿಂದೆ ಸರಿಯುತ್ತಿದ್ದವು’’ ಎಂದು ಉದ್ಧವ್ ಠಾಕ್ರೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News