×
Ad

ಮಿಲಿಟರಿ ನೆಲೆಗಳು ತನ್ನ ಗುರಿಯಾಗಿರಲಿಲ್ಲ ಎಂಬ ಪಾಕಿಸ್ತಾನದ ಹೇಳಿಕೆ ಸುಳ್ಳು: ರಕ್ಷಣಾ ಅಧಿಕಾರಿಗಳು

Update: 2019-02-28 19:19 IST

ಹೊಸದಿಲ್ಲಿ,ಫೆ.28: ಬುಧವಾರ ಭಾರತೀಯ ವಾಯುಪ್ರದೇಶವನ್ನು ಅತಿಕ್ರಮಿಸಿದ್ದ ಸಂದರ್ಭದಲ್ಲಿ ಮಿಲಿಟರಿ ನೆಲೆಗಳು ತನ್ನ ವಾಯುಪಡೆಯ ಗುರಿಯಾಗಿರಲಿಲ್ಲ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಭಾರತ ಸರಕಾರವು ಗುರುವಾರ ತಿರಸ್ಕರಿಸಿದೆ ಎಂದು ರಕ್ಷಣಾ ಸಚಿವಾಲಯದ ಅನಾಮಿಕ ಅಧಿಕಾರಿಗಳನ್ನು ಉಲ್ಲೇಖಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಪಾಕಿಸ್ತಾನಿ ಯುದ್ಧವಿಮಾನಗಳು ನೌಶೇರಾ ಮತ್ತು ರಾಜೌರಿಯಲ್ಲಿನ ಹಲವಾರು ಮಿಲಿಟರಿ ನೆಲೆಗಳನ್ನು ಸ್ಪಷ್ಟವಾಗಿ ಗುರಿಯಾಗಿಸಿಕೊಂಡಿದ್ದವು,ಆದರೆ ಅವುಗಳ ಪ್ರಯತ್ನವನ್ನು ಭಾರತೀಯ ವಾಯುಪಡೆಯು ವಿಫಲಗೊಳಿಸಿತ್ತು ಎಂದು ಈ ಅಧಿಕಾರಿಗಳು ತಿಳಿಸಿದರು.

ಭದ್ರತಾ ಪಡೆಗಳ ಸಿಬ್ಬಂದಿಗಳಿಗೆ ನೀಡಲಾಗಿದ್ದ ರಜೆಯನ್ನು ರದ್ದುಗೊಳಿಸಲಾಗಿದೆ ಎಂಬ ವರದಿಗಳನ್ನು ನಿರಾಕರಿಸಿದ ಅವರು,ಆದರೆ ಪ್ರಮುಖ ಹುದ್ದೆಗಳಲ್ಲಿರುವ ಸಿಬ್ಬಂದಿಗಳ ರಜೆಗಳನ್ನು ಸೀಮಿತಗೊಳಿಸಲಾಗಿದೆ ಎಂದರು. ಪದಾತಿ ಪಡೆಗಳನ್ನು ಇನ್ನೂ ಕ್ರೋಡೀಕರಿಸಿಲ್ಲ,ಆದರೆ ಅಲ್ಪಾವಧಿ ಸೂಚನೆಗೆ ನಿಗದಿತ ಸ್ಥಳಕ್ಕೆ ತೆರಳಲು ಸಿಬ್ಬಂದಿಗಳು ಸನ್ನದ್ಧರಾಗಿದ್ದಾರೆ ಎಂದರು.

ಯುದ್ಧ ಮನೋಸ್ಥಿತಿಯನ್ನು ಸೃಷ್ಟಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತವು ವಿಫಲಗೊಳಿಸಿದೆ ಎಂದು ಸರಕಾರದಲ್ಲಿನ ಮೂಲಗಳು ತಿಳಿಸಿದವು. ಭಾರತೀಯ ವಾಯುಪಡೆಯು ನಾಗರಿಕರನ್ನು ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡಿತ್ತು ಹಾಗೂ ಉದ್ದೇಶಪೂರ್ವಕವಾಗಿ ನಿಯಂತ್ರಣ ರೇಖೆಯನ್ನು ದಾಟಿತ್ತು ಎಂಬ ಹೇಳಿಕೆಗಳನ್ನೂ ಅವು ನಿರಾಕರಿಸಿದವು.

ಜೈಶೆ ಮುಹಮ್ಮದ್ ಕುರಿತು ಮತ್ತು ಇಬ್ಬರು ಭಾರತೀಯ ಪೈಲಟ್‌ಗಳು ತನ್ನ ವಶದಲ್ಲಿರುವ ಕುರಿತು ಪಾಕಿಸ್ತಾನವು ಅಂತರರಾಷ್ಟ್ರೀಯ ಸಮುದಾಯಕ್ಕೆ ಸುಳ್ಳು ಹೇಳುತ್ತಿದೆ ಎಂದು ಮೂಲಗಳು ಆರೋಪಿಸಿದವು.

ಪುಲ್ವಾಮಾ ದಾಳಿಯ ಕುರಿತು ಮಾಹಿತಿಗಳು ಮತ್ತು ಸಾಕ್ಷಾಧಾರಗಳನ್ನು ಭಾರತವು ಗುರುವಾರ ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ.

ಭಾರತದೊಂದಿಗೆ ಮಾತುಕತೆಗೆ ಮುನ್ನ ಪಾಕಿಸ್ತಾನವು ಭಯೋತ್ಪಾದಕರ ವಿರುದ್ಧ ತಕ್ಷಣದ ಮತ್ತು ವಿಶ್ವಾಸಾರ್ಹ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದ ಮೂಲಗಳು,ಭೀತಿವಾದದ ಕುರಿತು ಇಮ್ರಾನ್ ಖಾನ್ ಅವರು ಈಗ ಮಾತಿನಂತೆ ನಡೆದುಕೊಳ್ಳಬೇಕಿದೆ. ಇದು ಪಾಕಿಸ್ತಾನ ಮತ್ತು ಅಂತರರಾಷ್ಟ್ರೀಯ ಸಮುದಾಯಕ್ಕೆ ಭಾರತದ ಸಂದೇಶವಾಗಿದೆ ಎಂದು ತಿಳಿಸಿದವು.

ಗುರುವಾರ ಬೆಳಿಗ್ಗೆ ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಕುರೇಷಿ ಅವರು,ಎಲ್ಲ ಧನಾತ್ಮಕ ಮಾತುಕತೆಗಳಿಗೆ ಸರಕಾರವು ಸಿದ್ಧವಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ಧರಿದ್ದರೆ ಅವರೊಂದಿಗೆ ಮಾತನಾಡಲು ಪ್ರಧಾನಿ ಇಮ್ರಾನ್ ಸಿದ್ಧರಾಗಿದ್ದಾರೆ ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News