ಯೋಧರ ತ್ಯಾಗ, ಬಲಿದಾನಕ್ಕೆ ಕಳಂಕ ತಂದ ರಾಜಕಾರಣಿಗಳ ವರ್ತನೆ

Update: 2019-03-01 06:36 GMT

ಪುಲ್ವಾಮ ದಾಳಿಯ ಬಳಿಕದ ಬೆಳವಣಿಗೆಗಳು ಚಿತ್ರ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತಿವೆೆ. ಒಂದೆಡೆ ಸೇನೆಯ ಯೋಧರು ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಗಡಿಯಲ್ಲಿ ಉಗ್ರರ ವಿರುದ್ಧ ಹೋರಾಡುತ್ತಿದ್ದಾರೆ, ಇತ್ತ ದೇಶದೊಳಗೆ, ಅದೇ ಯೋಧರ ತ್ಯಾಗ ಬಲಿದಾನಗಳನ್ನು ಮುಂದಿಟ್ಟುಕೊಂಡು ರಾಜಕೀಯ ನಡೆಸಲು ಕೆಲವರು ತರಾತುರಿಯಲ್ಲಿದ್ದಾರೆ. ಗಡಿಯಲ್ಲಿ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್‌ನ್ನು ಬಿಜೆಪಿ ರಾಜಕೀಯಗೊಳಿಸಿದ ಪರಿಣಾಮಗಳಿಂದಾಗಿ ಉಗ್ರರ ವಿರುದ್ಧದ ಹೋರಾಟಕ್ಕೆ ಕೆಲವು ಅಡಚಣೆಗಳು ಎದುರಾಗಿವೆ. ನಮ್ಮ ವಾಯುಪಡೆಯು ಗಡಿಯನ್ನು ಉಲ್ಲಂಘಿಸಿ ನಡೆಸುವ ದಾಳಿ ಗುಟ್ಟಾಗಿರಬೇಕು. ಆದರೆ ರಾಜಕೀಯ ನಾಯಕರು ಅದನ್ನು ಬಹಿರಂಗವಾಗಿ ಘೋಷಿಸಿ ಮೂರ್ಖತನವನ್ನು ಪ್ರದರ್ಶಿಸಿದರು. ಉಗ್ರರ ಹತ್ಯೆಯನ್ನು ಸೇನೆ ಘೋಷಿಸದೇ ಇದ್ದರೂ ಮಾಧ್ಯಮಗಳು 300 ಉಗ್ರರ ಹತ್ಯೆಯಾಗಿದೆ ಎಂದು ಬಹಿರಂಗವಾಗಿ ಬೊಬ್ಬಿಡತೊಡಗಿದರು. ಸೇನೆ ಏನು ಮಾಡಬೇಕು ಎನ್ನುವುದನ್ನು ಮೋದಿಯ ಭಕ್ತರು, ಪತ್ರಕರ್ತರು, ರಾಜಕಾರಣಿಗಳು ಆದೇಶ ನೀಡತೊಡಗಿದರು. ಇದೇ ಸಂದರ್ಭದಲ್ಲಿ ಪಾಕಿಸ್ತಾನ ನಮ್ಮ ಯುದ್ಧವಿಮಾನವನ್ನು ಕೆಡವಿ ಅದರ ಪೈಲಟ್ ಒಬ್ಬನನ್ನು ಬಂಧಿಸಿರುವುದು ಉಗ್ರರ ವಿರುದ್ಧದ ಹೋರಾಟದಲ್ಲಿ ಇನ್ನೊಂದು ಹಿನ್ನಡೆಯಾಯಿತು. ಆದರೆ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್‌ಖಾನ್ ಈ ಸಂದರ್ಭದಲ್ಲಿ ಒಂದಿಷ್ಟು ಪ್ರಬುದ್ಧತೆಯನ್ನು ಮೆರೆದರು. ನಮ್ಮ ಯೋಧನನ್ನು ಘನತೆಯಿಂದ ನೋಡಿಕೊಂಡದ್ದೇ ಅಲ್ಲದೆ, ಶಾಂತಿ ಮಾತುಕತೆಯ ಭಾಗವಾಗಿ ಅಭಿನಂದನ್‌ರನ್ನು ಶುಕ್ರವಾರ ಭಾರತಕ್ಕೆ ಮರಳಿಸುವ ಪ್ರಕಟನೆಯನ್ನು ನೀಡಿದರು.

ಉಗ್ರರನ್ನು ನಮ್ಮ ಸೇನೆ ಸದೆಬಡಿಯುತ್ತಾ ಬಂದಿರುವುದು ಇದೇ ಮೊದಲಲ್ಲ. ಈ ದೇಶ ಹಲವು ಯುದ್ಧಗಳನ್ನು ನೋಡಿದೆ ಮತ್ತು ಅವುಗಳಲ್ಲಿ ಗೆದ್ದಿದೆ ಕೂಡ. ಪಾಕಿಸ್ತಾನದಿಂದ ಬಂಗಾಳವನ್ನು ಇಬ್ಭಾಗ ಮಾಡಿ ಅದಕ್ಕೆ ಸ್ವಾತಂತ್ರವನ್ನು ನೀಡಿದ ಹೆಗ್ಗಳಿಕೆ ಭಾರತದ್ದು. ಕಳೆದ 70 ವರ್ಷಗಳಲ್ಲಿ ನಮ್ಮನ್ನಾಳಿದವರ ಕೊಡುಗೆಯ ಫಲವಾಗಿ ನಮ್ಮ ಸೇನೆ ವಿಶ್ವದಲ್ಲೇ ಅತ್ಯಂತ ಬಲಿಷ್ಠ ಸೇನೆಯಾಗಿ ರೂಪುಗೊಂಡಿದೆ. ಇಂತಹ ಸೇನೆಯನ್ನು ಪ್ರಧಾನಿ ಮೋದಿ ತನ್ನ ರಾಜಕೀಯಕ್ಕಾಗಿ ಬಳಸುವ ಮೂಲಕ ಸೈನ್ಯದ ನೈತಿಕ ಸ್ಥೈರ್ಯಕ್ಕೆ ಬಹುದೊಡ್ಡ ಧಕ್ಕೆ ತಂದಿದ್ದಾರೆ ಎನ್ನುವುದು ಸದ್ಯದ ಬೆಳವಣಿಗೆಗಳಿಂದ ಅರ್ಥ ಮಾಡಿಕೊಳ್ಳಬಹುದಾಗಿದೆ. ಸರ್ಜಿಕಲ್ ಸ್ಟ್ರೈಕ್ ಎನ್ನುವುದು ಗಡಿ ಭಾಗಗಳಲ್ಲಿ ಆಗಾಗ ಸೇನೆ ನಡೆಸುವ ಸಾಮಾನ್ಯ ಗುಪ್ತ ಕಾರ್ಯಾಚರಣೆ. ಸೇನೆಯ ಗಡಿ ಉಲ್ಲಂಘನೆ ಬಹಿರಂಗವಾಗಿ ಘೋಷಿಸುವ ವಿಷಯವಲ್ಲ. ಅದು ಒಂದು ದೇಶಕ್ಕೆ ಭೂಷಣವೂ ಅಲ್ಲ. ಆದರೆ ಕೆಲವೊಮ್ಮೆ ಅಂತಹ ಉಲ್ಲಂಘನೆ ಅನಿವಾರ್ಯ. ಅದನ್ನು ನಮ್ಮ ಸೇನೆ ಆಗಾಗ ನಡೆಸುತ್ತಾ ಬಂದಿದೆ. ಈವರೆಗೆ ಯಾವ ಪ್ರಧಾನಿಯೂ ಅದನ್ನು ಬಹಿರಂಗಗೊಳಿಸಿಲ್ಲ. ಅಥವಾ ಅದನ್ನು ತನ್ನ ಸಾಧನೆ ಎಂದು ಬಿಂಬಿಸಿಲ್ಲ. ಆದರೆ ನಮ್ಮ ಸೇನೆಯ ಮೇಲೆ ಪದೇ ಪದೇ ನಡೆಯುತ್ತಿರುವ ಉಗ್ರರ ದಾಳಿಯಿಂದ ತನ್ನ ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಮನಗಂಡು ಹತಾಶೆಗೊಂಡ ಪ್ರಧಾನಿ ಮೋದಿಯವರು ಮೊತ್ತ ಮೊದಲಬಾರಿಗೆ ಈ ಸ್ಟ್ರೈಕ್‌ನ್ನು ಬಹಿರಂಗಗೊಳಿಸಿದರು ಮಾತ್ರವಲ್ಲ, ರಾಜಕೀಯಗೊಳಿಸಿದರು.

ಪುಲ್ವಾಮ ದಾಳಿಯಲ್ಲಂತೂ ಒಬ್ಬ ಪ್ರಧಾನಿಯಾಗಿ ಪ್ರದರ್ಶಿಸಬೇಕಾದ ಪ್ರಬುದ್ಧತೆಯೇ ಅವರಲ್ಲಿರಲಿಲ್ಲ. ‘‘ಈ ದೇಶ ನನ್ನ ಕೈಯಲ್ಲಿ ಸುರಕ್ಷಿತವಾಗಿದೆ’ ಎಂದ ಬೆನ್ನಿಗೇ ಗಡಿ ಭಾಗದಲ್ಲಿ ವಾಯು ನೆಲೆ ಉಲ್ಲಂಘಿಸಿದ ನಮ್ಮ ವಿಮಾನವನ್ನು ಪಾಕ್ ಹೊಡೆದುರುಳಿಸಿ ಪೈಲಟ್‌ನನ್ನು ಬಂಧಿಸಿತು. ಗಡಿಯಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗ, ನಮ್ಮ ಸೇನೆ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕಾರ್ಯಾಚರಣೆ ನಡೆಸುತ್ತಿರುವಾಗ ಇತ್ತ ಕರ್ನಾಟಕದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಯಡಿಯೂರಪ್ಪ ‘ಈ ದಾಳಿಯಿಂದಾಗಿ ಬಿಜೆಪಿ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ 22 ಸ್ಥಾನಗಳನ್ನು ಪಡೆಯುತ್ತದೆ’’ ಎಂಬ ಹೇಳಿಕೆಯನ್ನು ನೀಡಿ ಬಿಟ್ಟರು. ಈ ಹೇಳಿಕೆ ಪಾಕಿಸ್ತಾನಕ್ಕೆ ಅದೆಷ್ಟು ಲಾಭ ಮಾಡಿ ಕೊಟ್ಟಿತು ಎಂದರೆ ‘‘ಇವೆಲ್ಲವನ್ನೂ ಭಾರತ ಮಾಡುತ್ತಿರುವುದು ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು’’ ಎಂಬಂತೆ ಅಲ್ಲಿನ ಮಾಧ್ಯಮಗಳು ಬರೆದವು.

ಯಡಿಯೂರಪ್ಪರ ಹೇಳಿಕೆ ಪುಲ್ವಾಮದಲ್ಲಿ ಉಗ್ರರಿಗೆ ಬಲಿಯಾದ ಅಷ್ಟೂ ಸೈನಿಕರಿಗೆ ಮಾಡಿದ ಅವಮಾನವಾಗಿದೆ. ಇಡೀ ದೇಶದ ಗಮನ ಪಾಕಿಸ್ತಾನದಲ್ಲಿ ಸೆರೆಯಾಗಿರುವ ಯೋಧ ಅಭಿನಂದನ್ ಕಡೆಗಿದ್ದರೆ, ಬಿಜೆಪಿ, ಇದರಿಂದ ತನಗೆಷ್ಟು ಸ್ಥಾನಗಳು ದೊರೆಯುತ್ತವೆ ಎಂದು ಲೆಕ್ಕ ಹಾಕಿರುವುದು ದೇಶದ್ರೋಹದ ಕೆಲಸ. ಯಡಿಯೂರಪ್ಪರ ಹೇಳಿಕೆಯ ಕುರಿತಂತೆ ಪ್ರಧಾನಿ ಮೋದಿಯಾಗಲಿ, ಅಮಿತ್ ಶಾ ಅವರಾಗಲಿ ಈವರೆಗೆ ಸ್ಪಷ್ಟನೆ ನೀಡಿಲ್ಲ. ಬದಲಿಗೆ ಸರ್ಜಿಕಲ್ ದಾಳಿಯನ್ನು ಸ್ವತಃ ಪಕ್ಷದ ನಾಯಕ ಅಮಿತ್ ಶಾ ಅವರೇ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು. ‘ಮೋದಿಯಿಂದಾಗಿಯೇ ಇದು ಸಾಧ್ಯವಾಯಿತು. ದೇಶದ ಭದ್ರತೆಗಾಗಿ ಮೋದಿಯನ್ನು ಆಯ್ಕೆ ಮಾಡಬೇಕು’ ಎಂಬ ಅರ್ಥದ ಮಾತುಗಳನ್ನು ಸಾರ್ವಜನಿಕ ಸಮಾರಂಭದಲ್ಲಿ ಆಡಿ ವಿವಾದಕ್ಕೊಳಗಾದರು. ನರೇಂದ್ರ ಮೋದಿಯಂತೂ ‘ನನಗೆ ದೇಶಕ್ಕಿಂತ ಚುನಾವಣೆ ಮುಖ್ಯ’ ಎನ್ನುವುದನ್ನು ಗುರುವಾರ ದೇಶದ ಮುಂದೆ ಜಾಹೀರುಗೊಳಿಸಿದ್ದಾರೆ. ನಮ್ಮ ವಾಯುಪಡೆಯನ್ನು ಹೊಡೆದುರುಳಿಸಿ, ಯೋಧನನ್ನು ಪಾಕಿಸ್ತಾನ ಸೆರೆಹಿಡಿದ ಬಳಿಕದ ಬೆಳವಣಿಗೆಗಳು ದೇಶದ ಹಿತದೃಷ್ಟಿಯಿಂದ ಅತ್ಯಮೂಲ್ಯವಾದುದು. ಸೇನೆಯ ಜೊತೆಗಿದ್ದು ಬೆಳವಣಿಗೆಗಳನ್ನು ಪ್ರಧಾನಿ ಮೋದಿಯವರು ಗಮನಿಸಬೇಕಾಗಿತ್ತು. ಆದರೆ ಅವರಿಗೆ ದೇಶದ ಭದ್ರತೆಗಿಂತ ಪಕ್ಷದ ಚುನಾವಣಾ ಪ್ರಚಾರ ಮುಖ್ಯವಾಯಿತು.

ಸೇನೆಯೊಂದಿಗೆ ಸಂವಾದ ನಡೆಸುವ ಬದಲು, ಗುರುವಾರ ಇಡೀ ದಿನ ಕಾರ್ಯಕರ್ತರ ಜೊತೆಗೆ ಭವಿಷ್ಯದಲ್ಲಿ ಚುನಾವಣೆಯನ್ನು ಎದುರಿಸುವ ಕುರಿತಂತೆ ಸಂವಾದ ನಡೆಸಿದರು. ಈ ಮೂಲಕ, ದೇಶದ ಭದ್ರತೆಗಿಂತ ಮುಂದಿನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವುದೇ ಮುಖ್ಯ ಎನ್ನುವುದನ್ನು ಅವರು ದೇಶದ ಜನರಿಗೆ ಮನವರಿಕೆ ಮಾಡಿಸಿದ್ದಾರೆ. ಮೋದಿಯ ಭಕ್ತರಂತೂ ಎಲ್ಲ ಎಲ್ಲೆಗಳನ್ನು ಮೀರಿ ಕ್ರೌರ್ಯಗಳನ್ನು ಮೆರೆದಿದ್ದಾರೆ. ಮೊನ್ನೆ ಪುಲ್ವಾಮದಲ್ಲಿ ಉಗ್ರರಿಂದ ಹತರಾದ ಸೈನಿಕನ ಪತ್ನಿಯೊಬ್ಬರು ‘ಯುದ್ಧ ಬೇಡ. ಪಾಕಿಸ್ತಾನದ ಜೊತೆಗೆ ಶಾಂತಿಗಾಗಿ ಮಾತುಕತೆ ನಡೆಸಿ’ ಎಂದು ಕರೆಕೊಟ್ಟರು. ಯುದ್ಧದ ದುಷ್ಪರಿಣಾಮ ಏನು ಎನ್ನುವುದು ಒಬ್ಬ ಮೃತ ಸೈನಿಕನ ಪತ್ನಿಯಷ್ಟೇ ಅರ್ಥ ಮಾಡಿಕೊಳ್ಳಬಲ್ಲಳು. ಯುದ್ಧ ಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸುವ ಹಕ್ಕು ಆಕೆಗೆ ಮಾತ್ರ ಇದೆ. ದುರದೃಷ್ಟವಶಾತ್, ಮೋದಿ ಭಕ್ತರು ಶಾಂತಿಗೆ ಕರೆಕೊಟ್ಟ ಈ ಯೋಧನ ಪತ್ನಿಯನ್ನೇ ಕೆಟ್ಟ ಭಾಷೆಯಲ್ಲಿ ನಿಂದಿಸಿದರು. ಇಂದು ಈ ದೇಶಕ್ಕಿಂತ ಮೋದಿ ಮುಖ್ಯ ಎನ್ನುವ ವಾತಾವರಣವನ್ನು ಮೋದಿ ಭಕ್ತರು ನಿರ್ಮಿಸುತ್ತಿದ್ದಾರೆ. ಒಂದು ಗುಂಪು ಮೋದಿಯ ಪರವಾಗಿ ನಿಂತಿದ್ದರೆ ಇನ್ನೊಂದು ಗುಂಪು ದೇಶದ ಪರವಾಗಿ ಮಾತನಾಡುತ್ತಿದೆ.

ಇದೇ ಸಂದರ್ಭದಲ್ಲಿ ಸೆರೆಸಿಕ್ಕಿದ ಯೋಧನನ್ನು ಘನತೆಯಿಂದ ನಡೆಸಿ, ಅವರನ್ನು ಭಾರತಕ್ಕೆ ಮರಳಿಸುವ ಪ್ರಬುದ್ಧ ನಿರ್ಧಾರವನ್ನು ತೆಗೆದುಕೊಂಡ ಮತ್ತು ಶಾಂತಿ ಮಾತುಕತೆಗಾಗಿ ಗರಿಷ್ಠ ಮಟ್ಟದಲ್ಲಿ ಶಾಂತಿ ಪ್ರಸ್ತಾವವನ್ನು ಮುಂದಿಟ್ಟ ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ರನ್ನು ನಾವು ಅಭಿನಂದಿಸಬೇಕು. ಜೊತೆಗೆ ಬಗಲಲ್ಲಿ ಉಗ್ರರನ್ನು ಸಾಕುತ್ತಾ ಶಾಂತಿ ಮಾತುಕತೆ ಯಶಸ್ವಿಯಾಗಲಾರದು ಎನ್ನುವುದು ಉಭಯ ದೇಶಗಳೂ ಅರ್ಥ ಮಾಡಿಕೊಳ್ಳಬೇಕು. ಅಝರ್ ಮಸೂದ್‌ನಂತಹ ಉಗ್ರವಾದಿಗಳನ್ನು ಒಂದೋ ಪಾಕಿಸ್ತಾನ ದಮನಿಸಬೇಕು ಅಥವಾ ಅವರನ್ನು ಭಾರತಕ್ಕೆ ಒಪ್ಪಿಸಬೇಕು. ಇದೇ ಸಂದರ್ಭದಲ್ಲಿ ಮೋದಿ ಸರಕಾರವೂ ತನ್ನ ಬಗಲಲ್ಲಿ ಬಚ್ಚಿಟ್ಟುಕೊಂಡಿರುವ ಸಂಘಪರಿವಾರದ ಉಗ್ರವಾದಿಗಳ ವಿರುದ್ಧ, ಸನಾತನಸಂಸ್ಥೆಯಂತಹ ಸಂಘಟನೆಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಭಯೋತ್ಪಾದನೆ ಯಾವ ಧರ್ಮದ ವೇಷದಲ್ಲಿದ್ದರೂ ನಾವದನ್ನು ಸಹಿಸುವುದಿಲ್ಲ ಎನ್ನುವುದನ್ನು ವಿಶ್ವಕ್ಕೆ ಮನವರಿಕೆ ಮಾಡಿಕೊಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News