ಮೋದಿ ಪ್ರತಿ ಬಾರಿ ತಮಿಳುನಾಡಿಗೆ ಹೋದಾಗ #GoBackModi ಟ್ರೆಂಡಿಂಗ್ ಆಗುವುದೇಕೆ?: ಇಲ್ಲಿದೆ ಕಾರಣ

Update: 2019-03-01 18:08 GMT

ಚೆನ್ನೈ, ಮಾ.1: ಶುಕ್ರವಾರ ಟ್ವಿಟರ್ ನಲ್ಲಿ ವಾಯುಪಡೆಯ ಪೈಲಟ್ ಅಭಿನಂದನ್ ರಿಗೆ ಸ್ವಾಗತ ಕೋರಿ ‘ವೆಲ್ಕಮ್ ಹೋಮ್ ಅಭಿನಂದನ್’ ಎನ್ನುವ ಹ್ಯಾಶ್ ಟ್ಯಾಗ್ ಜೊತೆಗೆ ಮತ್ತೊಂದು ಹ್ಯಾಶ್ ಟ್ಯಾಗ್ ಕೂಡ ಟ್ರೆಂಡಿಂಗ್ ನಲ್ಲಿತ್ತು. ಅದು ಬೇರೆ ಯಾವುದೂ ಅಲ್ಲ #GobackModi.

2018ರ ಎಪ್ರಿಲ್ 12ರಂದು ಮೊತ್ತಮೊದಲ ಬಾರಿಗೆ ಈ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿತ್ತು. ಕಾರ್ಯಕ್ರಮವೊಂದರ ನಿಮಿತ್ತ ಮೋದಿ ತಮಿಳುನಾಡಿಗೆ ಭೇಟಿ ನೀಡುವ ಸಂದರ್ಭ ಈ ಹ್ಯಾಶ್ ಟ್ಯಾಗ್ ಟ್ವಿಟರ್ ಟ್ರೆಂಡಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿತ್ತು. ಮೋದಿಯ ಭೇಟಿಯನ್ನು ತಮಿಳುನಾಡಿನ ಜನರು ಸಂಪೂರ್ಣವಾಗಿ ವಿರೋಧಿಸಿದ್ದರು. ಪ್ರಧಾನಿ ಮೋದಿಯವರನ್ನು ಕೇರಳದಂತೆ ತಮಿಳುನಾಡಿನ ಜನತೆ ವಿರೋಧಿಸಲು ಹಲವು ಕಾರಣಗಳಿದ್ದು, ಅವುಗಳನ್ನು ಸಂಕ್ಷಿಪ್ತವಾಗಿ ಹೀಗೆ ವಿವರಿಸಬಹುದು.

ಕಾವೇರಿ ಜನ ನಿರ್ವಹಣಾ ಮಂಡಳಿಯನ್ನು ಸ್ಥಾಪಿಸದ ವಿಚಾರದಲ್ಲಿ ತಮಿಳುನಾಡಿನ ಜನತೆ ಕೇಂದ್ರ ಸರಕಾರವನ್ನು ದ್ವೇಷಿಸುತ್ತಾರೆ. ಪ್ರಧಾನಿ ಮೋದಿ ಎಪ್ರಿಲ್ ನಲ್ಲಿ ಭೇಟಿ ನೀಡಿದ್ದ ಸಂದರ್ಭ ವಿಪಕ್ಷಗಳು ಪ್ರಧಾನಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿತ್ತು. ಕರ್ನಾಟಕದ ಚುನಾವಣೆ ಗೆಲ್ಲಲು ಕೇಂದ್ರ ಸರಕಾರ ಕಾವೇರಿ ಜಲ ನಿರ್ವಹಣಾ ಮಂಡಳಿ ಸ್ಥಾಪಿಸಲು ಹಿಂದೇಟು ಹಾಕುತ್ತಿದೆ ಎನ್ನುವುದು ವಿಪಕ್ಷಗಳ ಆರೋಪವಾಗಿತ್ತು. ವಿಮಾನ ನಿಲ್ದಾಣದಿಂದಲೇ ಮೋದಿ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಲಾಗಿತ್ತು. ಇದರಿಂದಾಗಿ ಮೋದಿ ಅಲ್ಲಿಂದಲೇ ಹೆಲಿಕಾಪ್ಟರ್ ಮೂಲಕ ಪ್ರಯಾಣಿಸಬೇಕಾಯಿತು.

ದಿಲ್ಲಿಯಲ್ಲಿ ಸುಮಾರು 150  ದಿನಗಳ ಕಾಲ ನಡೆದ ತಮಿಳುನಾಡು ರೈತರ ಪ್ರತಿಭಟನೆಯನ್ನು ಮೋದಿ ನಿರ್ಲಕ್ಷಿಸಿದ್ದಾರೆ ಎನ್ನುವ ಆಕ್ರೋಶವೂ ತಮಿಳುನಾಡಿನ ಜನರಲ್ಲಿದೆ.  

“ನೀಟ್ ನಿಂದ ಹಿಡಿದು ಓಚ್ಕಿ ಚಂಡಮಾರುತಕ್ಕೆ ರಾಜ್ಯವು ತುತ್ತಾದಾಗಲೂ ಅವರು ಹಿಂದಿರುಗಿ ನೋಡಿರಲಿಲ್ಲ. ಕೇಂದ್ರವು ತಮಿಳುನಾಡು ಮತ್ತು ತಮಿಳುನಾಡಿನ ಜನರ ಹಿತಾಸಕ್ತಿಯ ವಿರುದ್ಧವಾಗಿದೆ” ಎಂದು ತಮಿಳುನಾಡಿನ ಟ್ವಿಟರ್ ಬಳಕೆದಾರರೊಬ್ಬರು ಹೇಳುತ್ತಾರೆ. ಜಗತ್ತಿನೆಲ್ಲೆಡೆ ಇರುವ ತಮಿಳರು #GobackModi ಹ್ಯಾಶ್ ಟ್ಯಾಗನ್ನು ವೈರಲ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

ನಂತರ ಈ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆದದ್ದು ಜನವರಿ 27ರಂದು ಏಮ್ಸ್ ಗೆ ಶಿಲಾನ್ಯಾಸ ಮಾಡಲು ಮೋದಿ ಮಧುರೈಗೆ ತೆರಳಿದ್ದಾಗ. ಆನಂತರ ಫೆಬ್ರವರಿ 10ರಂದು ಪ್ರಧಾನಿ ತಿರುಪುರ್ ಭೇಟಿಯ ಸಂದರ್ಭವೂ ತಮಿಳಿಗರು ‘ಗೋಬ್ಯಾಕ್ ಮೋದಿ’ ಎಂದಿದ್ದರು.

ಬಿಜೆಪಿ ಪರ ಟ್ವಿಟರ್ ಖಾತೆಗಳು #TNWelcomesModi ಹ್ಯಾಶ್ ಟ್ಯಾಗ್ ಮೂಲಕ ಎಷ್ಟೇ ಪ್ರಯತ್ನಿಸಿದರೂ…. ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲೇ ಇತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News