ಜಮ್ಮು ಕಾಶ್ಮೀರದ ಪೂಂಛ್, ರಾಜೋರಿ ಜಿಲ್ಲೆಯ ನಿವಾಸಿಗಳಿಗೆ 400 ಹೆಚ್ಚುವರಿ ಬಂಕರ್ ಮಂಜೂರು
ಜಮ್ಮು, ಮಾ. 2: ಕಳೆದ ಐದು ದಿನಗಳಿಂದ ಪಾಕಿಸ್ತಾನ ಸೇನಾ ಪಡೆ ತೀವ್ರ ಶೆಲ್ ದಾಳಿ ನಡೆಸುತ್ತಿರುವ ಅವಳಿ ಜಿಲ್ಲೆಗಳಾದ ಪೂಂಛ್ ಹಾಗೂ ರಾಜೋರಿಗೆ ಹೆಚ್ಚುವರಿ 400 ವೈಯುಕ್ತಿಕ ಬಂಕರ್‌ಗಳನ್ನು ಜಮ್ಮು ಹಾಗೂ ಕಾಶ್ಮೀರ ಸರಕಾರ ಶನಿವಾರ ಮಂಜೂರು ಮಾಡಿದೆ.
‘‘ಗಡಿಯಾಚೆಯಿಂದ ಶೆಲ್‌ದಾಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೂಂಛ್ ಹಾಗೂ ರಾಜೋರಿ ಜಿಲ್ಲೆಗಳಿಗೆ 200 ಹೆಚ್ಚುವರಿ ವೈಯುಕ್ತಿಕ ಬಂಕರ್‌ಗಳನ್ನು ಮಂಜೂರು ಮಾಡಲಾಗಿದೆ’’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಂಕರ್‌ಗಳನ್ನು ತ್ವರಿತವಾಗಿ ನಿರ್ಮಿಸಲು ಆಡಳಿತ ಅಧಿಕಾರಿಗಳಿಗೆ ನಿರ್ದೇಶಿಸಿದೆ. ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮೂಲಕ ಉಪ ಆಯುಕ್ತರಿಗೆ ನಿಧಿ ಒದಗಿಸಲಾಗುವುದು ಎಂದು ಅದು ಹೇಳಿದೆ.
‘‘ನಿರ್ದಿಷ್ಟಪಡಿಸಿದ ವಿವರಣೆಯಂತೆ ಮುಂದಿನ ಒಂದು ತಿಂಗಳಲ್ಲಿ ಬಂಕರ್‌ಗಳನ್ನು ನಿರ್ಮಿಸಲಾಗುವುದು.’’ ಎಂದು ಅವರು ತಿಳಿಸಿದ್ದಾರೆ.
ಗಡಿಯಾಚೆಯ ಶೆಲ್ ದಾಳಿಯನ್ನು ಪರಿಣಾಮಕಾರಿಯಾಗಿ ತಡೆಯಲು ಬಂಕರ್ ಉತ್ತಮ. ಇದು ಶೆಲ್ ದಾಳಿ ನಡೆಯುವ ಸಂದರ್ಭ ಗಡಿ ನಾಗರಿಕರಿಗೆ ಸುರಕ್ಷಿತ ಸ್ಥಳವನ್ನು ಒದಗಿಸುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.
ಈ ನಡುವೆ, ಗಡಿಯಾಚೆಯಿಂದ ಪಾಕಿಸ್ತಾನ ಪೂಂಛ್ ಜಿಲ್ಲೆಯಲ್ಲಿ ನಡೆಸುತ್ತಿರುವ ಶೆಲ್ ದಾಳಿಯಿಂದ ಕಳೆದ ಎರಡು ದಿನಗಳಲ್ಲಿ ನಾಲ್ವರು ನಾಗರಿಕರು ಮೃತಪಟ್ಟಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಗುಜ್ಜರರ ನಾಯಕ ಶಂಮ್ಶೇ ಹಕ್ಲಾ ಪೂಂಚಿ, ಗಡಿ ನಿವಾಸಿಗಳಿಗೆ ಸುರಕ್ಷಿತ ಕಾಲನಿಗಳನ್ನು ನಿರ್ಮಿಸುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.