ವಾರಣಾಸಿಯಲ್ಲಿ ಹುತಾತ್ಮರಾದ ಇಬ್ಬರು ಪೌರ ಯೋಧರು!

Update: 2019-03-04 05:45 GMT

ಗಡಿಯಲ್ಲಿ ಹುತಾತ್ಮರಾಗುತ್ತಿರುವ ಸೈನಿಕರ ಸಂಖ್ಯೆಗಳನ್ನು ಜೇಬಿನಲ್ಲಿಟ್ಟುಕೊಂಡು ಪ್ರಧಾನಿ ಮೋದಿ ದೇಶಾದ್ಯಂತ ಓಡಾಡುತ್ತಿದ್ದಾರೆ. ಸೈನಿಕರ ಶೌರ್ಯ ಸಾವು, ಬಲಿದಾನ, ದುಃಖಗಳನ್ನು ಬಣ್ಣಿಸುತ್ತಾ ತನ್ನ ರಾಜಕೀಯ ಸಮಾವೇಶಗಳಿಗೆ ಅವರು ಜನ ಸೇರಿಸಲು ಯತ್ನಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಪ್ರತಿನಿಧಿಸುತ್ತಿರುವ ವಾರಣಾಸಿ ಕ್ಷೇತ್ರದಲ್ಲಿ ಇಬ್ಬರು ಹುತಾತ್ಮರಾಗಿದ್ದಾರೆ. ಘಟನೆ ನಡೆದು ಎರಡು ದಿನಗಳು ಕಳೆದಿವೆಯಾದರೂ ಅದಿನ್ನೂ ಅವರ ಕಿವಿಗೆ ಬಿದ್ದಿರುವುದೇ ಅನುಮಾನ. ಈ ಹುತಾತ್ಮ ಯೋಧರಿಗೆ ಬಹುದೊಡ್ಡ ಹಿನ್ನೆಲೆಯಿದೆ. ಒಂದು ವಾರದ ಹಿಂದೆ ಈ ಯೋಧ ಸಮುದಾಯವನ್ನು ಪ್ರತಿನಿಧಿಸುವ ಐವರನ್ನು ಕುಳ್ಳಿರಿಸಿ ನಮ್ಮ ದೇಶದ ಪ್ರಧಾನಿ ಕ್ಯಾಮರಾಗಳ ಮುಂದೆ ಅವರ ಪಾದಗಳನ್ನು ತೊಳೆದಿದ್ದರು. ಕುಂಭಮೇಳದಲ್ಲಿ ಈ ಯೋಧರು ಬಾಚಿದ ಹೇಲು, ಮೂತ್ರ ವಿಸರ್ಜನೆಗಳಿಗೆ ಅದು ಪರಿಹಾರ ಎಂದು ಅವರು ದೇಶದ ಜನರಿಗೆ ಆ ಮೂಲಕ ಹೇಳಿದ್ದರು. ದುರದೃಷ್ಟವಶಾತ್ ಮೋದಿಯವರು ಅವರ ಪಾದ ತೊಳೆದು ಒಂದು ವಾರವೂ ಆಗಿಲ್ಲ, ಅದಷ್ಟರಲ್ಲೇ ಅವರದೇ ಕ್ಷೇತ್ರದ ವಾರಣಾಸಿಯಲ್ಲಿ ಇಬ್ಬರು ದಲಿತರು ಮಲದ ಗುಂಡಿಗೆ ಬಿದ್ದು ಮೃತಪಟ್ಟಿದ್ದಾರೆ.

ನರೇಂದ್ರ ಮೋದಿ ತಮ್ಮ ಆಡಳಿತದುದ್ದಕ್ಕೂ ಸ್ವಚ್ಛತಾ ಆಂದೋಲನಕ್ಕೆ ಮಹತ್ವ ನೀಡುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಅವರು ಜನರ ಮೇಲೆ ತೆರಿಗೆ ವಿಧಿಸಿರುವುದು ಮಾತ್ರವಲ್ಲ, ಸ್ವಚ್ಛತೆಯನ್ನು ಒಂದು ಆಂದೋಲನದಂತೆ ಅವರು ಆಚರಿಸಲು ಕರೆ ನೀಡಿದರು. ಈ ಆಂದೋಲನಕ್ಕಾಗಿ ಸಹಸ್ರಾರು ಕೋಟಿ ರೂಪಾಯಿಗಳನ್ನು ಅವರು ವೆಚ್ಚ ಮಾಡಿದ್ದಾರೆ. ಈ ಆಂದೋಲನದ ನಿಜವಾದ ಸೇನಾನಿಗಳು ಪೌರ ಕಾರ್ಮಿಕರು. ಜಾಹೀರಾತು, ಭಾಷಣಗಳು, ಸಮಾರಂಭಗಳು ಇವೆಲ್ಲವುಗಳಿಂದ ನಮ್ಮ ನಗರಗಳು ಸ್ವಚ್ಛಗೊಳ್ಳುವುದಿಲ್ಲ. ಬೆಳ್ಳಂಬೆಳಗ್ಗೆ ಪೌರ ಕಾರ್ಮಿಕರು ಎದ್ದು ರಸ್ತೆಯನ್ನು ಗುಡಿಸಿ, ಚರಂಡಿಗಳನ್ನು ಶುಚಿಗೊಳಿಸಿದ ಬಳಿಕವಷ್ಟೇ ನಗರದ ಬದುಕು ತೆರೆದುಕೊಳ್ಳುತ್ತದೆ. ನಾವು ನಗರಕ್ಕೆ ಕಾಲಿಟ್ಟಾಗ ಅವು ಒಪ್ಪ ಓರಣವಾಗಿದೆಯೆಂದರೆ ಅದಕ್ಕೆ ಕಾರಣ ಮೋದೀಜಿಯ ಭಾಷಣ ಅಲ್ಲ. ಮುಂಜಾವು ಎದ್ದು ಈ ಸೈನಿಕರು ನಗರವನ್ನು ಗುಡಿಸಿ ಶುಚಿಗೊಳಿಸಿದ್ದರ ಪರಿಣಾಮವಾಗಿದೆ. ಶುಚಿತ್ವವೇ ಆರೋಗ್ಯ. ಹೇಗೆ ಸೈನಿಕರು ಹಿಮಾಲಯದ ಹಿಮಗಳ ನಡುವೆ ಗಡಿ ಕಾಯುತ್ತಾ ತಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೆಯೋ ಹಾಗೆಯೇ ಈ ಪೌರ ಸೈನಿಕರು ನಮ್ಮ ನಾಡನ್ನು ಶುಚಿಯಾಗಿಡಲು, ಆರೋಗ್ಯವಾಗಿಡಲು ತಮ್ಮ ಆರೋಗ್ಯವನ್ನು ಬಲಿಕೊಡುತ್ತಾ ಬಂದಿದ್ದಾರೆ. ಪೌರ ಕಾರ್ಮಿಕರ ಸರಾಸರಿ ಆಯುಷ್ಯ ನಲವತ್ತು ವರ್ಷ ಎನ್ನುವ ಅಂಶವನ್ನೂ ಈಗಾಗಲೇ ಕೆಲವು ತಜ್ಞರು ಬಹಿರಂಗಪಡಿಸಿದ್ದಾರೆ.

ಇದೇ ಸಂದರ್ಭದಲ್ಲಿ ಇಂದಿಗೂ ಈ ದೇಶದಲ್ಲಿ ಮಲದ ಗುಂಡಿಗಳನ್ನು ಮನುಷ್ಯರೇ ಶುಚಿಗೊಳಿಸುವ, ಮ್ಯಾನ್‌ಹೋಲ್‌ಗಳಿಗೆ ಮನುಷ್ಯರನ್ನೇ ಇಳಿಸುವ ಪದ್ಧತಿ ಮುಂದುವರಿದಿದೆ. ಸ್ವಚ್ಛತಾ ಆಂದೋಲನಕ್ಕಾಗಿ ಸಹಸ್ರಾರು ಕೋಟಿ ರೂಪಾಯಿಗಳನ್ನು ಸರಕಾರ ಸುರಿದಿದೆಯಾದರೂ ಈ ಪೌರ ಸೈನಿಕರ ಕಾರ್ಯವಿಧಾನದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ. ಕನಿಷ್ಟ ಮ್ಯಾನ್ ಹೋಲ್‌ಗಳಿಗೆ ಇಳಿಯಲು ಯಂತ್ರಗಳನ್ನು ಬಳಸುವ ಪದ್ಧತಿಯನ್ನಾದರೂ ಮೋದಿಯವರು ಆರಂಭಿಸಿದ್ದಿದ್ದರೆ ಅದು ಸ್ವಚ್ಛತಾ ಆಂದೋಲನದಲ್ಲಿ ನಡೆಯುವ ಬಹುದೊಡ್ಡ ಕ್ರಾಂತಿಯಾಗಿ ಬಿಂಬಿತವಾಗುತ್ತಿತ್ತು. ಈಗಾಗಲೇ ಸಾವಿರಾರು ಜನರು ಮಲದಗುಂಡಿಗೆ ಇಳಿದು ಮೃತಪಟ್ಟಿದ್ದಾರೆ. ಶತ್ರುಗಳ ಗುಂಡೇಟಿಗೆ ಜಗ್ಗದೇ ಮುಂದೆ ಹೆಜ್ಜೆಯಿಡುವ ಸೈನಿಕರಿಗೂ ಈ ಪೌರ ಕಾರ್ಮಿಕರಿಗೂ ಯಾವುದೇ ವ್ಯತ್ಯಾಸವಿಲ್ಲ. ಮರಣ ಮುಂದಿದೆ ಎಂದು ಗೊತ್ತಿದ್ದೂ ನಾಡಿಗಾಗಿ ಸೈನಿಕರು ಪ್ರಾಣವನ್ನು ಅರ್ಪಿಸುತ್ತಾರೆ. ಪೌರ ಕಾರ್ಮಿಕರು ಕೂಡ ಕೂಡ ಅದೇ ಆತ್ಮವಿಶ್ವಾಸದಲ್ಲಿ ಮಲದಗುಂಡಿಯಲ್ಲಿ ಇಳಿದು ಪ್ರಾಣ ಬಿಡುತ್ತಾರೆ. ಆದರೆ ಸೈನಿಕನು ಹುತಾತ್ಮನಾದಾಗ ಅದು ವೈಭವೀಕರಿಸಲ್ಪಡುತ್ತದೆ.

ಇದೇ ಸಂದರ್ಭದಲ್ಲಿ ಮಲದಗುಂಡಿಯಲ್ಲಿ ಪ್ರಾಣ ಬಿಡುವ ಪೌರ ಕಾರ್ಮಿಕನ ಬದುಕಿಗೆ ಯಾವ ಬೆಲೆಯೂ ಇರುವುದಿಲ್ಲ. ಮನುಷ್ಯ ಘನತೆಅವನ ಜೊತೆಗೆ ಸತ್ತಿರುತ್ತದೆ. ವಿಶೇಷ ಪರಿಹಾರವಂತೂ ದೂರದ ಮಾತು. ಅವನ ಬಳಿಕ ಅದೇ ಜಾಗಕ್ಕೆ ಅವನ ಮಕ್ಕಳು ಸೇರ್ಪಡೆಯಾಗುತ್ತಾರೆ. ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಭಂಗಿಗಳ ಕೆಲಸದಲ್ಲೇ ಆ ಕಾರ್ಮಿಕರಿಗೆ ಮೋಕ್ಷವಿದೆ ಎಂಬ ಅರ್ಥ ಬರುವ ಮಾತುಗಳನ್ನು ಮೋದಿ ಆಡಿದ್ದರು. ಇತ್ತೀಚೆಗೆ ಕುಂಭಮೇಳದಲ್ಲಿ ಪೌರಕಾರ್ಮಿಕರ ಕಾಲು ತೊಳೆಯುವ ಭಾವನಾತ್ಮಕ ಪ್ರಹಸನದ ಹಿಂದೆಯೂ ಅದೇ ಮನಸ್ಥಿತಿ ಇದೆ. ‘ನಿಮ್ಮ ಕೆಲಸವೂ ಶ್ರೇಷ್ಠವೇ ಆಗಿದೆ. ಆದುದರಿಂದ ಅದೇ ಕೆಲಸದಲ್ಲಿ ಮುಂದುವರಿಯಿರಿ’ ಎನ್ನುವ ಸಂದೇಶವನ್ನು ಕಾರ್ಮಿಕರಿಗೆ ನೀಡಿದ್ದಾರೆ. ಕುಂಭ ಮೇಳದಲ್ಲಿ ಸೇರಿದ್ದ ಲಕ್ಷಾಂತರ ಜನರ ಹೇಲು ಬಾಚಿದ್ದ ಸಹಸ್ರಾರು ಕಾರ್ಮಿಕರಿಗೆ ನರೇಂದ್ರ ಮೋದಿ ನೀಡಿದ ಕೊಡುಗೆ ಅದಾಗಿತ್ತು. ನಿಜಕ್ಕೂ ಅವರು ಪೌರ ಕಾರ್ಮಿಕರ ಮೇಲೆ ಕೃತಜ್ಞತೆಯನ್ನು ಹೊಂದಿದ್ದರೆ, ಅವರಿಗಾಗಿ ವಿಶೇಷ ಯೋಜನೆಗಳನ್ನು ಘೋಷಣೆ ಮಾಡಬೇಕಾಗಿತ್ತು.

ಈ ದೇಶದಲ್ಲಿ ಅತಂತ್ರವಾಗಿ ಬದುಕುತ್ತಿರುವ ಲಕ್ಷಾಂತರ ಪೌರ ಕಾರ್ಮಿಕರ ಹುದ್ದೆಗಳನ್ನು ಖಾಯಂಗೊಳಿಸುವುದು, ಅವರಿಗೆ ಸವಲತ್ತುಗಳನ್ನು ಒದಗಿಸುವುದು, ಅವರ ಮಕ್ಕಳಿಗೆ ಸೇನೆಯಲ್ಲಿರುವವರ ಮಕ್ಕಳಿಗೆ ನೀಡುವ ಸವಲತ್ತುಗಳು ಇತ್ಯಾದಿ ಕೊಡುಗೆಗಳನ್ನು ನೀಡುವ ಮೂಲಕ ಅವರ ಬದುಕಿನ ಘನತೆಯನ್ನು ಅಲ್ಪವಾದರೂ ಮೇಲೆತ್ತುವ ಪ್ರಯತ್ನವನ್ನು ಮಾಡಬೇಕಾಗಿತ್ತು. ಆದರೆ ಕ್ಯಾಮರಾಗಳ ಮುಂದೆ ಅವರ ಪಾದ ತೊಳೆಯುವ ಮೂಲಕ ಆ ದುರದೃಷ್ಟವಂತರ ಬದುಕನ್ನೂ ತಮ್ಮ ಚುನಾವಣೆಗೆ ಬಳಸಿಕೊಂಡರು. ವಾರಣಾಸಿಯಲ್ಲಿ ನಡೆದಿರುವ ದುರಂತ, ಈ ದೇಶದಲ್ಲಿ ಕಾರ್ಮಿಕರನ್ನು ಮಲದಗುಂಡಿಗೆ ಇಳಿಸದೇ ಇರುವ ದಿನಗಳು ಭವಿಷ್ಯದಲ್ಲಿ ಬರಲು ಸಾಧ್ಯವೇ ಇಲ್ಲವೇನೋ ಎನ್ನುವುದನ್ನು ಹೇಳುತ್ತಿದೆ.

ಇದನ್ನು ತಡೆಯುವವರೆಗೆ ಪ್ರಧಾನಿ ಮೋದಿ ಮಲದ ಗುಂಡಿಯಲ್ಲಿ ಮೃತಪಡುವ ಪೌರಕಾರ್ಮಿಕರಿಗೆ ಹುತಾತ್ಮ ಸೈನಿಕರಿಗೆ ನೀಡುವ ಎಲ್ಲ ಗೌರವಗಳನ್ನು ನೀಡಬೇಕು. ಸರಕಾರಿ ಗೌರವಗಳೊಂದಿಗೆ ಅವರ ಅಂತ್ಯ ಸಂಸ್ಕಾರ ಮಾಡಬೇಕು. ಅವರ ಕುಟುಂಬದ ಸಂಪೂರ್ಣ ಹೊಣೆಯನ್ನು ಸರಕಾರ ವಹಿಸಿಕೊಳ್ಳಬೇಕು. ಗರಿಷ್ಠ ಮಟ್ಟದಲ್ಲಿ ಪರಿಹಾರವನ್ನು ನೀಡಬೇಕು. ಸದ್ಯಕ್ಕೆ ಇಷ್ಟನ್ನು ಮಾಡುವುದು ದಲಿತ ಪೌರಕಾರ್ಮಿಕರ ಪಾದವನ್ನು ತೊಳೆದ ಪ್ರಧಾನಿ ಮೋದಿಯವರ ಹೊಣೆಗಾರಿಕೆಯಾಗಿದೆ. ಸ್ವಚ್ಛತಾ ಆಂದೋಲನ ಇಂತಹ ನಿರ್ಧಾರಗಳಿಂದಷ್ಟೇ ವಾಸ್ತವ ರೂಪವನ್ನು ಪಡೆಯಬಹುದು. ಆದರೆ ಚುನಾವಣಾ ಪ್ರಚಾರಕ್ಕಾಗಿ ಸೈನಿಕರ ಮೃತದೇಹಗಳನ್ನು ಎಣಿಸುತ್ತಿರುವ ಪ್ರಧಾನಿ ಮೋದಿಗೆ ಈ ಪೌರ ಕಾರ್ಮಿಕರ ಮೃತದೇಹ ಕಣ್ಣಿಗೆ ಬೀಳಬಹುದೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News