ಟ್ರೋಫಿಗಳ ಶತಕ: ಫೆಡರರ್‌ಗೆ ನಾಲ್ಕನೇ ಸ್ಥಾನ
Update: 2019-03-04 23:37 IST
ಪ್ಯಾರಿಸ್, ಮಾ.4: ಇತ್ತೀಚೆಗೆ ತಮ್ಮ ವೃತ್ತಿಜೀವನದ 100ನೇ ಎಟಿಪಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ ಸ್ವಿಸ್‌ನ ಖ್ಯಾತ ಟೆನಿಸ್ ತಾರೆ ರೋಜರ್ ಫೆಡರರ್ ನೂತನ ಎಟಿಪಿ ರ್ಯಾಂಕಿಂಗ್‌ನಲ್ಲಿ ನಾಲ್ಕನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.
ದುಬೈ ಟೂರ್ನಿಯ ಫೈನಲ್‌ನಲ್ಲಿ ಫೆಡರರ್‌ಗೆ ಮಣಿದ ಗ್ರೀಸ್‌ನ ಟಿಟ್ಸಿಪಾಸ್ (10ನೇ ಸ್ಥಾನ) ಕೂಡ ಒಂದು ಸ್ಥಾನ ಏರಿಕೆ ಕಂಡು ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದಾರೆ. ಇದೇ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ಗೇಲ್ ಮೊನ್‌ಫಿಲ್ಸ್(19) ನಾಲ್ಕು ಸ್ಥಾನ ಭಡ್ತಿ ಪಡೆದಿದ್ದಾರೆ.
ಮೆಕ್ಸಿಕೊ ಟೂರ್ನಿಯಲ್ಲಿ ಖ್ಯಾತನಾಮರನ್ನು ಮಣ್ಣುಮುಕ್ಕಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಆಸ್ಟ್ರೇಲಿಯದ ನಿಕ್ ಕಿರ್ಗಿಯೊಸ್ 39 ಸ್ಥಾನಗಳ ಭಾರೀ ಏರಿಕೆ ಕಂಡು 33ನೇ ಸ್ಥಾನ ಅಲಂಕರಿಸಿದ್ದಾರೆ. ಜೊಕೊವಿಕ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದು, ರಫೆಲ್ ನಡಾಲ್(2) ಹಾಗೂ ಅಲೆಕ್ಸಾಂಡರ್ ಝ್ವೆರೆವ್(3) ಅವರನ್ನು ಹಿಂಬಾಲಿಸಿದ್ದಾರೆ.