ಜೂಲನ್ ಗೋಸ್ವಾಮಿ ನಂ.1 ಬೌಲರ್
ದುಬೈ, ಮಾ.4: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಭಾರತದ ಹಿರಿಯ ವೇಗದ ಬೌಲರ್ ಜೂಲನ್ ಗೋಸ್ವಾಮಿ ಸೋಮವಾರ ಬಿಡುಗಡೆಯಾದ ಮಹಿಳೆಯರ ಐಸಿಸಿ ಏಕದಿನ ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನ ಪಡೆದಿದ್ದಾರೆ. 36ರ ಹರೆಯದ ಗೋಸ್ವಾಮಿ 2017ರ ಫೆಬ್ರವರಿಯಲ್ಲಿ ಕೊನೆಯ ಬಾರಿ ಅಗ್ರ ಸ್ಥಾನಕ್ಕೇರಿದ್ದರು. ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯಲ್ಲಿ 8 ವಿಕೆಟ್‌ಗಳನ್ನು ಉರುಳಿಸಿದ್ದ ಗೋಸ್ವಾಮಿ ಭಾರತ 8 ತಂಡಗಳು ಭಾಗವಹಿಸಿದ ಚಾಂಪಿಯನ್‌ಶಿಪ್‌ನಲ್ಲಿ 2ನೇ ಸ್ಥಾನ ಪಡೆದು 2021ರ ಮಹಿಳಾ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ನೆರವಾಗಿದ್ದರು. ಮಹಿಳಾ ಏಕದಿನ ಕ್ರಿಕೆಟ್‌ನ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಗೋಸ್ವಾಮಿ ಒಟ್ಟು 218 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಗೋಸ್ವಾಮಿ ಅವರ ಹೊಸ ಚೆಂಡಿನ ಜೊತೆಗಾರ್ತಿ ಶಿಖಾ ಪಾಂಡೆ 12 ಸ್ಥಾನ ಮೇಲಕ್ಕೇರಿ 5ನೇ ಸ್ಥಾನ ತಲುಪಿದ್ದಾರೆ. ಪಾಂಡೆ ಕೂಡ ಇಂಗ್ಲೆಂಡ್ ವಿರುದ್ಧ 8 ವಿಕೆಟ್ ಕಬಳಿಸಿದ್ದರು. ಇದೀಗ 9 ವರ್ಷಗಳ ಬಳಿಕ ಭಾರತದ ಇಬ್ಬರು ಬೌಲರ್‌ಗಳು ಬೌಲಿಂಗ್ ರ್ಯಾಂಕಿಂಗ್‌ನಲ್ಲಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ. 2010ರಲ್ಲಿ ಗೋಸ್ವಾಮಿ ಹಾಗೂ ರುಮೆಲಿ ಧರ್ ಈ ಸಾಧನೆ ಮಾಡಿದ್ದರು.
ಐಸಿಸಿ ಮಹಿಳಾ ಚಾಂಪಿಯನ್‌ಶಿಪ್‌ನಲ್ಲಿ 837 ರನ್ ಗಳಿಸಿ ಸರ್ವಾಧಿಕ ಸ್ಕೋರ್ ಗಳಿಸಿರುವ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂಧಾನಾ ಜೀವನಶ್ರೇಷ್ಠ 797 ಅಂಕ ಗಳಿಸಿ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ.
ಭಾರತ 2012ರ ಮಾರ್ಚ್‌ನಲ್ಲಿ ಕೊನೆಯ ಬಾರಿ ಐಸಿಸಿ ರ್ಯಾಂಕಿಂಗ್‌ನ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ನಂ.1 ಸ್ಥಾನ ಪಡೆದಿತ್ತು. ಮಿಥಾಲಿ ರಾಜ್ ಹಾಗೂ ಗೋಸ್ವಾಮಿ ಈ ಸಾಧನೆ ಮಾಡಿದ್ದರು.