ಗೈಡೊ ಪೆಲ್ಲಾಗೆ ಬ್ರೆಝಿಲ್ ಓಪನ್ ಕಿರೀಟ
Update: 2019-03-04 23:49 IST
ಸಾವೊಪೌಲೊ, ಮಾ.4: ಚಿಲಿಯ ಕ್ರಿಸ್ಟಿಯನ್ ಗರಿನ್ ಅವರನ್ನು 7-5, 6-3 ಸೆಟ್‌ಗಳಿಂದ ಮಣಿಸಿದ ಅರ್ಜೆಂಟೀನದ ಗೈಡೊ ಪೆಲ್ಲಾ ಬ್ರೆಝಿಲ್ ಓಪನ್ ಟೆನಿಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದು ಅವರು ಜಯಿಸಿದ ಚೊಚ್ಚಲ ಎಟಿಪಿ ಪ್ರಶಸ್ತಿಯಾಗಿರುವುದು ವಿಶೇಷ.
ಈ ಹಿಂದೆ ಒಟ್ಟು ನಾಲ್ಕು ಬಾರಿ ಎಟಿಪಿ ಟೂರ್ನಿಗಳ ಫೈನಲ್‌ಗೆ ಪ್ರವೇಶ ಪಡೆದಿದ್ದ ಗೈಡೊ ನಿರಾಶೆ ಅನುಭವಿಸಿದ್ದರು. ಈ ಬಾರಿ ಚಿಲಿ ಆಟಗಾರನಿಗೆ ಸೋಲುಣಿಸುವ ಮೂಲಕ ಹಳೆಯ ನಿರಾಶೆಯನ್ನು ಬದಿಗೊತ್ತಿದರು. ಈ ವಾರ ಆಡಿದ ಪಂದ್ಯಗಳಲ್ಲಿ ಅವರು ಒಂದೂ ಸೆಟನ್ನು ಎದುರಾಳಿಗೆ ಬಿಟ್ಟುಕೊಟ್ಟಿಲ್ಲ.
ಈ ಗೆಲುವಿನ ಮೂಲಕ 28 ವರ್ಷದ ಗೈಡೊ ಸೋಮವಾರ ಪ್ರಕಟವಾದ ಎಟಿಪಿ ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 34ನೇ ಸ್ಥಾನಕ್ಕೆ ತಲುಪಿದ್ದಾರೆ. ಸುಮಾರು ಒಂದು ದಶಕದ ಬಳಿಕ ಫರ್ನಾಂಡೊ ಗೊಂಝಾಲೆಝ್ ನಂತರ ಎಟಿಪಿ ಪ್ರಶಸ್ತಿ ಜಯಿಸಿದ ಚಿಲಿಯ ಮೊದಲ ಆಟಗಾರ ಎನಿಸಿಕೊಳ್ಳುವ ಅವಕಾಶ ಗರಿನ್‌ಗೆ ಇತ್ತು. ಆದರೆ ಗೈಡೊ ಅದನ್ನು ತಡೆದರು.