ಬಾಲಕೋಟ್ ದಾಳಿಯಲ್ಲಿ ಉಗ್ರರು ಸತ್ತಿರುವ ಬಗ್ಗೆ ಅಧಿಕೃತ ಮಾಹಿತಿಯಿಲ್ಲ: ನಿರ್ಮಲಾ ಸೀತಾರಾಮನ್

Update: 2019-03-05 15:28 GMT

ಹೊಸದಿಲ್ಲಿ,ಮಾ.5: ಪಾಕಿಸ್ತಾನದ ಬಾಲಕೋಟ್ ‌ನಲ್ಲಿ ಜೈಶೆ ಮುಹಮ್ಮದ್ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿ ಎಷ್ಟು ಉಗ್ರರು ಹತರಾಗಿದ್ದಾರೆ ಎಂಬ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ವಾಯುದಾಳಿಯಲ್ಲಿ ಎಷ್ಟು ಉಗ್ರರು ಸಾವನ್ನಪ್ಪಿದ್ದಾರೆ ಎಂಬುದನ್ನು ತಿಳಿಸಲು ವಾಯುಪಡೆಗೆ ಸಾಧ್ಯವಿಲ್ಲ ಎಂದು ಏರ್ ಚೀಫ್ ಮಾರ್ಶಲ್ ಬಿ.ಎಸ್ ಧನೊವಾ ಹೇಳಿಕೆ ನೀಡಿದ ನಂತರ ಸೀತಾರಾಮನ್ ಈ ಸ್ಪಷ್ಟನೆ ನೀಡಿದ್ದಾರೆ. ಆ ಮೂಲಕ ಬಾಲಕೋಟ್ ವಾಯದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಇದೇ ಮೊದಲ ಬಾರಿ ಕೇಂದ್ರದ ಹಿರಿಯ ಸಚಿವರೊಬ್ಬರು ಒಪ್ಪಿಕೊಂಡಿದ್ದಾರೆ.

ವಾಯುದಾಳಿಯಲ್ಲಿ 250 ಉಗ್ರರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿಕೆ ನೀಡಿದ್ದು ರಕ್ಷಣಾ ಸಚಿವೆಯ ಹೇಳಿಕೆಯಿಂದ ಶಾಗೆ ಮುಜುಗರ ಉಂಟಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸೀತಾರಾಮನ್, ವಾಯುದಾಳಿಯಲ್ಲಿ ಎಷ್ಟು ಉಗ್ರರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ತಿಳಿಸಿಲ್ಲ, ಅವರು ಕೇವಲ ಹೇಳಿಕೆಯನ್ನಷ್ಟೇ ನೀಡಿದ್ದಾರೆ. ಅದು ಸರಕಾರದ ನಿಲುವಾಗಿದೆ ಎಂದು ತಿಳಿಸಿದ್ದಾರೆ.

ವಾಯುದಾಳಿ ನಡೆದ ಗಂಟೆಗಳ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ್ದ ಗೋಖಲೆ, ಈ ಬಗ್ಗೆ ಸರಕಾರದ ಅಧಿಕೃತ ಪ್ರತಿಕ್ರಿಯೆನ್ನು ನೀಡಿದ್ದರು. ಈ ವೇಳೆ ವಾಯುದಾಳಿಯಲ್ಲಿ ಜೈಶೆ ಮುಹಮ್ಮದ್‌ನ ಅನೇಕ ಮುಖಂಡರು, ಕಮಾಂಡರ್‌ಗಳು ಮತ್ತು ತರಬೇತಿದಾರರು ಕೊಲ್ಲಲ್ಪಟ್ಟಿದ್ದಾರೆ ಎಂದಷ್ಟೇ ತಿಳಿಸಿದ್ದರು. ಎಷ್ಟು ಉಗ್ರರು ಕೊಲ್ಲಲ್ಪಟ್ಟಿದ್ದಾರೆ ಎಂಬುದನ್ನು ನಿಖರವಾಗಿ ತಿಳಿಸಿರಲಿಲ್ಲ. ಈ ವಾಯುದಾಳಿಯಲ್ಲಿ ನಾಗರಿಕರಿಗೆ ಹಾನಿಯಾಗದ ಕಾರಣ ಅದು ಸೇನಾ ಕಾರ್ಯಾಚರಣೆಯಲ್ಲ ಎಂದು ಸೀತಾರಾಮನ್ ಅಭಿಪ್ರಾಯಿಸಿದ್ದರು. ಬಾಲಕೋಟ್ ಉಗ್ರ ಶಿಬಿರಗಳ ಮೇಲೆ ಐಎಎಫ್ ದಾಳಿ ಮಾಡಿರುವ ಬಗ್ಗೆ ಮತ್ತು ಈ ದಾಳಿಯಲ್ಲಿ ಸತ್ತ ಉಗ್ರರ ಸಂಖ್ಯೆಯನ್ನು ನೀಡುವಂತೆ ವಿಪಕ್ಷಗಳು ಸರಕಾರವನ್ನು ಆಗ್ರಹಿಸಿದ ಹಿನ್ನೆಲೆಯಲ್ಲಿ ರಕ್ಷಣಾ ಸಚಿವೆಯ ಹೇಳಿಕೆ ಹೊರಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News