ಹತ ಉಗ್ರರ ಸಂಖ್ಯೆ ತಿಳಿಯುವುದು ಭಾರತೀಯನ ಹಕ್ಕು: ಶಿವಸೇನೆ

Update: 2019-03-05 17:57 GMT

ಮುಂಬೈ, ಮಾ. 4: ಪಾಕಿಸ್ತಾನ ಬಾಲಕೋಟ್‌ನ ಜೈಶೆ ಮುಹಮ್ಮದ್ ಭಯೋತ್ಪಾದಕ ಸಂಘಟನೆಯ ಶಿಬಿರದ ಮೇಲೆ ಭಾರತೀಯ ವಾಯು ಪಡೆ ನಡೆಸಿದ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂದು ತಿಳಿಯುವುದು ಪ್ರತಿಯೊಬ್ಬ ಭಾರತೀಯನ ಹಕ್ಕಾಗಿದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ.

ಭಾರತೀಯ ವಾಯು ಪಡೆ ನಡೆಸಿದ ವಾಯು ದಾಳಿಯಲ್ಲಿ ಹತರಾದ ಉಗ್ರರ ಖಚಿತ ಸಂಖ್ಯೆ ಬಹಿರಂಗಪಡಿಸುವಂತೆ ಪ್ರತಿಪಕ್ಷಗಳು ಕೂಡ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವನ್ನು ಆಗ್ರಹಿಸಿದೆ.

ವಾಯು ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಹತರಾದರು ಎಂಬ ಪ್ರಶ್ನೆಯನ್ನು ಮೋದಿ ಅವರ ರಾಜಕೀಯ ವಿರೋಧಿಗಳು ಮಾತ್ರ ಕೇಳುತ್ತಿಲ್ಲ, ಇಂಗ್ಲೆಂಡ್, ಅಮೆರಿಕ ಹಾಗೂ ಇತರ ಮಾದ್ಯಮಗಳು ಕೂಡ ಈ ಪ್ರಶ್ನೆಯನ್ನು ಎತ್ತಿವೆ.

ಭದ್ರತಾ ಪಡೆಯಿಂದ ಶತ್ರುಗಳಿಗೆ ಎಷ್ಟು ಪ್ರಮಾಣದ ಹಾನಿಯಾಗಿದೆ ಎಂದು ತಿಳಿದುಕೊಳ್ಳುವ ಹಕ್ಕು ದೇಶದ ನಾಗರಿಕರಿಗೆ ಇದೆ. ಪ್ರಶ್ನಿಸುವ ಮೂಲಕ ನಮ್ಮ ಸೇನೆಯ ನೈತಿಕತೆಗೆ ಕುಂದುಂಟಾಗುತ್ತದೆ ಎಂದು ನಾವು ಭಾವಿಸುವುದಿಲ್ಲ ಎಂದು ಶಿವ ಸೇನೆಯ ಮುಖವಾಣಿಯಾದ ‘ಸಾಮ್ನಾ’ದ ಸಂಪಾದಕೀಯದಲ್ಲಿ ಅವರು ಹೇಳಿದ್ದಾರೆ.

ಪ್ರತಿಪಕ್ಷಗಳು ಪುರಾವೆ ಕೇಳುತ್ತಿವೆ. ಇದಕ್ಕೆ ಪ್ರಧಾನಿ ಮೋದಿ ಅವರು ಆಕ್ರೋಶಿತರಾಗಿದ್ದಾರೆ. ಪುಲ್ವಾಮ ಆತ್ಮಾಹುತಿ ದಾಳಿಯಲ್ಲಿ ಬಳಸಲಾಗಿದ್ದ 300 ಕಿ.ಗ್ರಾಂ. ಆರ್‌ಡಿಎಕ್ಸ್ ಎಲ್ಲಿಂದ ಬಂತು?, ಬಾಲಕೋಟ್‌ನ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ದಾಳಿಯಿಂದ ಎಷ್ಟು ಮಂದಿ ಹತರಾದರು ?, ಈ ಬಗೆಗಿನ ಚರ್ಚೆ ಚುನಾವಣೆಯ ಕೊನೆ ದಿನದ ವರೆಗೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ. ನರೇಂದ್ರ ಮೋದಿ ಸರಕಾರದ ವಿರುದ್ಧ ಬಳಸಬಹುದಾಗಿದ್ದ ಜ್ವಲಂತ ಸಮಸ್ಯೆಗಳಾದ ಹಣದುಬ್ಬರ, ನಿರುದ್ಯೋಗ ಹಾಗೂ ರಫೇಲ್ ಒಪ್ಪಂದದ ಮೇಲೆ ಪ್ರಧಾನಿ ಅವರು ಬಾಂಬ್ ಹಾಕಿದ ಬಳಿಕ ಪ್ರತಿಪಕ್ಷಗಳು ನಿರಾಶೆಗೊಂಡಿವೆ ಎಂದು ಅವರು ಹೇಳಿದ್ದಾರೆ.

ಭಯೋತ್ಪಾದಕ ಶಿಬಿರದ ಮೇಲೆ ವಾಯು ದಾಳಿ ಹಾಗೂ ಯುದ್ಧದ ರೀತಿಯ ಪರಿಸ್ಥಿತಿ ಅಯೋಧ್ಯೆಯ ರಾಮ ಮಂದಿರ, ಜಮ್ಮುಕಾಶ್ಮೀರದ ಕಲಂ 370 ಹಾಗೂ ಕೃಷಿಕರ ಬಿಕ್ಕಟ್ಟು ಮೊದಲಾದ ವಿಷಯಗಳನ್ನು ಬದಿಗೆ ಸರಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News