ನಾಯಕನಾಗಿ ಕೊಹ್ಲಿ ಅಮೋಘ ಸಾಧನೆ
ನಾಗ್ಪುರ, ಮಾ.5: ನಾಯಕನಾಗಿ ಅತ್ಯಂತ ವೇಗವಾಗಿ 9,000 ಅಂತರ್‌ರಾಷ್ಟ್ರೀಯ ರನ್ ಪೂರೈಸಿದ ವಿರಾಟ್ ಕೊಹ್ಲಿ ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ರ ದಾಖಲೆಯನ್ನು ಪುಡಿಗಟ್ಟಿದರು.
ಆಸೀಸ್ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 22 ರನ್ ತಲುಪಿದಾಗ ಈ ಮೈಲುಗಲ್ಲು ತಲುಪಿದರು.
ಕೊಹ್ಲಿ ನಾಯಕನಾಗಿ 159ನೇ ಇನಿಂಗ್ಸ್‌ನಲ್ಲಿ 9,000 ರನ್ ಪೂರ್ಣಗೊಳಿಸಿದರು. ಪಾಂಟಿಂಗ್ 9 ಸಾವಿರ ರನ್ ಗಳಿಸಲು 203 ಇನಿಂಗ್ಸ್‌ಗಳಲ್ಲಿ ಆಡಿದ್ದರು. ಕೊಹ್ಲಿ ಇದಕ್ಕೂ ಮೊದಲು ನಾಯಕನಾಗಿ ಶರವೇಗದಲ್ಲಿ 4,000,5,000, 6,000, 7,000 ಹಾಗೂ 8,000 ರನ್ ಪೂರೈಸಿದ್ದಾರೆ.
ಕೊಹ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಾಯಕನಾಗಿ 9,000 ರನ್ ಗಳಿಸಿದ ಆರನೇ ಆಟಗಾರನಾಗಿದ್ದಾರೆ. ಗ್ರೇಮ್ ಸ್ಮಿತ್(220 ಇನಿಂಗ್ಸ್), ಎಂಎಸ್ ಧೋನಿ(253), ಅಲನ್ ಬಾರ್ಡರ್(257), ಸ್ಟೀಫನ್ ಫ್ಲೆಮಿಂಗ್(272)ಪಟ್ಟಿಯಲ್ಲಿರುವ ಇತರ ಮಾಜಿ ನಾಯಕರಾಗಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ 50ನೇ ಅರ್ಧಶತಕ ಸಿಡಿಸಿದ ಕೊಹ್ಲಿ 59ರ ಸರಾಸರಿಯಲ್ಲಿ 10,570 ರನ್ ಗಳಿಸಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲಿ 44 ರನ್ ಗಳಿಸಿದ್ದ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 1,000 ಬೌಂಡರಿ ಗಳಿಸಿ ಸಾಧನೆಯನ್ನು ಮಾಡಿದರು.