ಭಾರತದ 18 ವರ್ಷಗಳ ನಿರೀಕ್ಷೆಗೆ ಬೀಳುವುದೇ ತೆರೆ?
ಸೆನಾ, ಸಿಂಧು, ಶ್ರೀಕಿ ಮೇಲೆ ಕೋಚ್ ವಿಶ್ವಾಸ
ಬರ್ಮಿಂಗ್‌ಹ್ಯಾಮ್, ಮಾ.5: ಬ್ಯಾಡ್ಮಿಂಟನ್‌ನ ಪ್ರಮುಖ ಟೂರ್ನಿಯಾದ ಆಲ್ ಇಂಗ್ಲೆಂಡ್ ಚಾಂಪಿಯನ್‌ಶಿಪ್ ಬುಧವಾರದಿಂದ ಆರಂಭವಾಗಲಿದ್ದು ಖ್ಯಾತ ಶಟ್ಲರ್‌ಗಳಾದ ಪಿ.ವಿ. ಸಿಂಧು ಹಾಗೂ ಸೈನಾ ನೆಹ್ವಾಲ್ ಭಾರತದ ಸುಮಾರು 2 ದಶಕಗಳ ಪ್ರಶಸ್ತಿಯ ಬರವನ್ನು ನೀಗಿಸುವರೆಂಬ ವಿಶ್ವಾಸ ಗರಿಗೆದರಿದೆ.
ಸೈನಾ ಹಾಗೂ ಸಿಂಧು ಅವರ ಮೆಂಟರ್ ಹಾಗೂ ಸದ್ಯದ ರಾಷ್ಟ್ರೀಯ ಬ್ಯಾಡ್ಮಿಂಟನ್ ಮುಖ್ಯ ಕೋಚ್ ಗೋಪಿಚಂದ್ 2001ರಲ್ಲಿ ಕೊನೆಯ ಬಾರಿ ಭಾರತದ ಪರ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು.
ವಿಶ್ವ ಬ್ಯಾಡ್ಮಿಂಟನ್ ಒಕ್ಕೂಟದ ರ್ಯಾಂಕಿಂಗ್‌ನಲ್ಲಿ ಅಗ್ರ 32ರ ಸ್ಥಾನದೊಳಗಿರುವ ಆಟಗಾರರು ಮಾತ್ರ ಈ ಕೂಟಕ್ಕೆ ಅರ್ಹತೆ ಪಡೆದಿದ್ದು, ಭಾರತದ ಮೂವರು ಆಟಗಾರರಿಗೆ ಮಾತ್ರ ಶ್ರೇಯಾಂಕ ನೀಡಲಾಗಿದೆ. ಮೂರನೆಯವರೆಂದರೆ ಪುರುಷರ ವಿಭಾಗದ ಕಿಡಂಬಿ ಶ್ರೀಕಾಂತ್. ಒಂದು ಮಿಲಿಯನ್ ಯುಎಸ್ ಡಾಲರ್ ಮೊತ್ತದ ಟೂರ್ನಿಯಲ್ಲಿ 5ನೇ ಶ್ರೇಯಾಂಕ ಪಡೆದಿರುವ ಒಲಿಂಪಿಕ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನ ಬೆಳ್ಳಿಪದಕ ವಿಜೇತ ಆಟಗಾರ್ತಿ ಸಿಂಧು ತಮ್ಮ ಮೊದಲ ಪಂದ್ಯದಲ್ಲಿ ಮಾಜಿ ವಿಶ್ವ ನಂ.2 ದಕ್ಷಿಣ ಕೊರಿಯದ ಸಂಗ್ ಜಿ ಹ್ಯುನ್‌ರ ಸವಾಲು ಎದುರಿಸಲಿದ್ದಾರೆ.
ಲಂಡನ್ ಒಲಿಂಪಿಕ್ಸ್ ಕಂಚು ವಿಜೇತ ಸೈನಾ ನೆಹ್ವಾಲ್ 8ನೇ ಶ್ರೇಯಾಂಕ ಪಡೆದಿದ್ದಾರೆ. ಅವರು ತಮ್ಮ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿ ಗಿಲ್ಮರ್ ಅವರನ್ನು ಎದುರುಗೊಳ್ಳುವರು. ತಮ್ಮ ಪ್ರಥಮ ಸುತ್ತಿನ ಎದುರಾಳಿಗಳ ವಿರುದ್ಧ ಭಾರತದ ಉಭಯ ಆಟಗಾರ್ತಿಯರು ಸ್ಪರ್ಧಾತ್ಮಕ ಗೆಲುವು ಸೋಲಿನ ದಾಖಲೆ ಹೊಂದಿದ್ದಾರೆ. ಸೈನಾ ಅವರು ಗಿಲ್ಮರ್ ವಿರುದ್ಧ 6-0 ಒಟ್ಟಾರೆ ಗೆಲುವಿನ ದಾಖಲೆ ಹೊಂದಿದ್ದರೆ, ಸಿಂಧು ಅವರು ಸಂಗ್ ಜಿ ವಿರುದ್ಧ ಕಳೆದ 14 ಪಂದ್ಯಗಳಲ್ಲಿ 8-6ರ ಮುನ್ನಡೆಯಲ್ಲಿದ್ದಾರೆ.
ಇನ್ನು ಪುರುಷರ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಅವರು ಫ್ರೆಂಚ್ ಆಟಗಾರ ಬ್ರೈಸ್ ಲೆವರ್ಡೆಝ್ ಅವರೆದುರು ಸ್ಪರ್ಧಿಸಲಿದ್ದಾರೆ. ಫಾರ್ಮ್‌ನಲ್ಲಿರುವ ಆಟಗಾರ ಸಮೀರ್ ವರ್ಮ ವರು ಮಾಜಿ ವಿಶ್ವ ಚಾಂಪಿಯನ್ ಹಾಗೂ ವಿಶ್ವದ ನಂ.1 ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲೆನ್ಸ್ ಅವರ ಸವಾಲಿಗೆ ಎದೆಯೊಡ್ಡಲಿದ್ದಾರೆ. ಇನ್ನುಳಿದವರಲ್ಲಿ ಬಿ.ಸಾಯಿಪ್ರಣೀತ್ ಹಾಗೂ ಎಚ್. ಎಸ್ . ಪ್ರಣಯ್ ಪರಸ್ಪರ ಎದುರಾಗಲಿದ್ದಾರೆ. ಮಹಿಳಾ ಡಬಲ್ಸ್ ವಿಭಾಗದಲ್ಲಿ ಭಾರತದ ಪರ ಅಶ್ವಿನಿ ಪೊನ್ನಪ್ಪ ಹಾಗೂ ಎನ್ ಸಿಕ್ಕಿರೆಡ್ಡಿ, ಮೇಘನಾ ಜಕ್ಕಂಪುಡಿ ಹಾಗೂ ಪೂರ್ವಿಶಾ ರಾಮ್ ಜೋಡಿ ಸ್ಪರ್ಧೆ ನಡೆಸಲಿದೆ. ಪುರುಷರ ಡಬಲ್ಸ್‌ನಲ್ಲಿ ಮನು ಅತ್ರಿ ಹಾಗೂ ಸಮಿತ್ ರೆಡ್ಡಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಕೋಚ್ ಗೋಪಿಚಂದ್ ಕೂಡ ಸೈನಾ, ಸಿಂಧು ಹಾಗೂ ಶ್ರೀಕಾಂತ್ ಮೇಲೆ ಹೆಚ್ಚು ಭರವಸೆ ಇಟ್ಟುಕೊಂಡಿದ್ದಾರೆ. ಈ ತ್ರಿವಳಿಯು ಭಾರತದ 18 ವರ್ಷಗಳ ದೀರ್ಘ ಕಾಯುವಿಕೆಗೆ ಕೊನೆ ಹಾಡಲಿದೆ ಎಂದು ನಂಬಿದ್ದಾರೆ.
ತುಲನಾತ್ಮಕವಾಗಿ ನೋಡಿದರೆ ಪ್ರತೀ ಸುತ್ತು ಕಠಿಣವಾದುದು. ಪ್ರತೀ ಅಂಕವೂ ನನಗೆ ಮಹತ್ವದ್ದು. ಪ್ರಥಮ ಸುತ್ತಿನಲ್ಲಿ ನಾನು ಸಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದು ಹಾಗಾಗಿ ಪ್ರಥಮ ಸುತ್ತಿನಿಂದಲೇ ಹೆಚ್ಚು ಗಮನಹರಿಸುತ್ತೇವೆ
► ಪಿ.ವಿ.ಸಿಂಧು, ಭಾರತದ ಸಿಂಗಲ್ಸ್ ಆಟಗಾರ್ತಿ