×
Ad

ಭಾರತ ಎ, ಬಿ ತಂಡಗಳ ಶುಭಾರಂಭ

Update: 2019-03-05 23:41 IST

ತಿರುವನಂತಪುರ, ಮಾ.5: ಭಾರತ ‘ಎ’ ಹಾಗೂ ‘ಬಿ’ ತಂಡಗಳು ಕ್ರಮವಾಗಿ ದ.ಆಫ್ರಿಕ ಹಾಗೂ ಅಫ್ಘಾನಿಸ್ತಾನ ತಂಡಗಳನ್ನು ಸೋಲಿಸುವ ಮೂಲಕ ಮಂಗಳವಾರ ಅಂಡರ್-19 ಚತುಷ್ಕೋನ ಏಕದಿನ ಸರಣಿಯ ತಮ್ಮ ಮೊದಲ ಪಂದ್ಯಗಳಲ್ಲಿ ಜಯಭೇರಿ ಬಾರಿಸಿವೆ.

ಗ್ರೀನ್‌ಫೀಲ್ಡ್ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ‘ಎ’ ತಂಡ ದ.ಆಫ್ರಿಕವನ್ನು 157 ರನ್ ಭಾರೀ ಅಂತರದಿಂದ ಮಣಿಸಿದರೆ, ಸೈಂಟ್ ಕ್ಸೇವಿಯರ್ ಕೆಸಿಎ ಮೈದಾನದಲ್ಲಿ ನಡೆದ ಇನ್ನೊಂದು ಪಂದ್ಯದಲ್ಲಿ ಬಿ ತಂಡ ಅಫ್ಘಾನಿಸ್ತಾನವನ್ನು 7 ವಿಕೆಟ್‌ಗಳಿಂದ ಸದೆಬಡಿದಿದೆ.

ದ.ಆಫ್ರಿಕ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ‘ಎ’ ತಂಡ 50 ಓವರ್‌ಗಳಲ್ಲಿ 251 ರನ್ ಗಳಿಸಿ ಸರ್ವಪತನವಾಯಿತು. ಕಮ್ರಾನ್ ಇಕ್ಬಾಲ್ (60) ಹಾಗೂ ಶಾಶ್ವತ್ ರಾವತ್(64) ಅರ್ಧಶತಕಗಳ ಕಾಣಿಕೆ ನೀಡಿದರು. ಪ್ರತಿಯಾಗಿ ಬ್ಯಾಟಿಂಗ್ ಮಾಡಿದ ದ.ಆಫ್ರಿಕ 35.4 ಓವರ್‌ಗಳಲ್ಲಿ 94 ರನ್‌ಗಳಿಗೆ ಎಲ್ಲ ವಿಕೆಟ್‌ಗಳನ್ನು ಒಪ್ಪಿಸಿತು.

ಹರಿಣಪಡೆಯ ಪರ ಮಾರ್ಕೊ ಜಾನ್ಸೆನ್(33) ಗರಿಷ್ಠ ಸ್ಕೋರರ್ ಎನಿಸಿದರು. ಇನ್ನೊಂದು ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ, ಭಾರತ ‘ಬಿ’ ತಂಡದ ವೇಗಿ ಪೂರ್ಣಾಂಕ್ ತ್ಯಾಗಿ ಬೌಲಿಂಗ್ (36ಕ್ಕೆ 4) ದಾಳಿಗೆ ಸಿಲುಕಿ 47.3 ಓವರ್‌ಗಳಲ್ಲಿ 106 ರನ್‌ಗಳಿಗೆ ಗಂಟುಮೂಟೆ ಕಟ್ಟಿತು. ಲೆಗ್ ಸ್ಪಿನ್ನರ್ ಪಾರಸ್ ರಾಯ್ ಬರ್ಮನ್ 10 ರನ್‌ಗೆ ಮೂರು ವಿಕೆಟ್ ಪಡೆದರು. ಜಂಶೀದ್(28) ಅಫ್ಘನ್ ಪರ ಅಗ್ರ ಸ್ಕೋರರ್ ಎನಿಸಿದರು. ಗುರಿ ಬೆನ್ನಟ್ಟಿದ ಭಾರತ ‘ಬಿ’ ತಂಡ ನಾಯಕ ರಾಹುಲ್ ಚಾಂಡ್ರೊಲ್ (ಅಜೇಯ 56) ಹಾಗೂ ಕೆ.ನಿತೀಶ್ ಕುಮಾರ್ ರೆಡ್ಡಿ (44) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ 22.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವಿನ ಗುರಿ ತಲುಪಿ ಸಂಭ್ರಮಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News