ದೇಶದ ಅರ್ಧ ಭಾಗದಲ್ಲಿ ಬರ

Update: 2019-03-06 04:33 GMT

ಇನ್ನು ಮೂರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ಪ್ರಚಾರದ ಭರಾಟೆ, ಅದಕ್ಕೆ ಪೂರಕವಾಗಿ ಕೆರಳಿಸುತ್ತಿರುವ ಯುದ್ಧೋನ್ಮಾದ, ರಾಜಕೀಯ ಧ್ರುವೀಕರಣದ ಅಬ್ಬರದಲ್ಲಿ ದೇಶ ಎದುರಿಸುತ್ತಿರುವ ಬರ ಪರಿಸ್ಥಿತಿಯನ್ನು ನಾವು ಮರೆತೇ ಬಿಟ್ಟಿದ್ದೇವೆ. ಈ ಹಿನ್ನೆಲೆಯಲ್ಲಿ ಭಾರತೀಯ ತಂತ್ರಜ್ಞಾನ ಸಂಸ್ಥೆಯ ವಿಜ್ಞಾನಿಗಳು ಇತ್ತೀಚೆಗೆ ನೀಡಿರುವ ಎಚ್ಚರಿಕೆ ಆತಂಕಕಾರಿಯಾಗಿದೆ. ಅವರು ನೀಡಿರುವ ಎಚ್ಚರಿಕೆ ಪ್ರಕಾರ ದೇಶದ ಶೇ. 50ರಷ್ಟು ಪ್ರದೇಶ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಪಡೆದ ವಿವಿಧ ಸ್ಥಳಗಳ ಮಳೆಯ ಸಮಗ್ರ ಮಾಹಿತಿ ಹಾಗೂ ಮಣ್ಣಿನ ತೇವಾಂಶ ಇತ್ಯಾದಿ ವಿವರಗಳನ್ನು ಆಧರಿಸಿ ವಿಜ್ಞಾನಿಗಳು ಬರ ಪರಿಸ್ಥಿತಿ ಬಗ್ಗೆ ಈ ಎಚ್ಚರಿಕೆ ನೀಡಿದ್ದಾರೆ. ಇದೆಲ್ಲದರ ಒಟ್ಟು ಪರಿಣಾಮವಾಗಿ ಅಂತರ್ಜಲ ಕುಸಿಯುತ್ತಿರುವ ಬಗೆಗೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ತೀವ್ರ ಬರಗಾಲದಿಂದಾಗಿ ಈ ಬಾರಿ ಬೇಸಿಗೆಯಲ್ಲಿ ದೇಶಾದ್ಯಂತ ಅತಿಯಾದ ನೀರಿನ ಸಮಸ್ಯೆ ಉಂಟಾಗಲಿದೆ. ಅರುಣಾಚಲದಂಥ ಪ್ರದೇಶದಲ್ಲೂ ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಅಲ್ಲದೆ ಜಾರ್ಖಂಡ್, ಆಂಧ್ರಪ್ರದೇಶ, ಗುಜರಾತ್, ತಮಿಳುನಾಡು ಸೇರಿ ಕರ್ನಾಟಕದ ಬಹುತೇಕ ಕಡೆ ಈ ಬಾರಿ ಮಳೆಯ ಕೊರತೆ ಉಂಟಾಗಿದೆ. ಹೀಗಾಗಿ ದೇಶದ ಅನೇಕ ಕಡೆ ಗಂಭೀರವಾದ ಬರಗಾಲ ಸನ್ನಿಹಿತವಾಗಿದೆ. ನಿರಂತರ ಮಳೆಯ ಅಭಾವದಿಂದ ಅಂತರ್ಜಲ ಪ್ರಮಾಣ ಇನ್ನಷ್ಟು ಕುಸಿಯಲಿದೆ. ಅಂತರ್ಜಲ ಮರು ಪೂರಣಕ್ಕೆ ಸರಿಯಾದ ಕ್ರಮಗಳನ್ನು ಕೈಗೊಂಡಿಲ್ಲ. ಇದರ ಬದಲಾಗಿ ಭೂಮಿಯಿಂದ ಅಪಾರ ಪ್ರಮಾಣದ ನೀರನ್ನು ಪಡೆಯುವ ಕೊಳವೆ ಬಾವಿ ಕೊರೆತದ ಕಾರ್ಯ ನಿರಂತರವಾಗಿ ನಡೆದಿದೆ. ಅಗತ್ಯವಿರಲಿ, ಇಲ್ಲದಿರಲಿ ಅಂತರ್ಜಲವನ್ನು ಪಡೆಯುವ ಮನೋಭಾವ ಹೆಚ್ಚಾಗಿದೆ. ಕುಡಿಯುವ ನೀರಿಗಾಗಿ ಮಾತ್ರವಲ್ಲ, ಕೃಷಿ ಚಟುವಟಿಕೆಗಾಗಿ ಅಂತರ್ಜಲವನ್ನು ಬೇಕಾಬಿಟ್ಟಿಯಾಗಿ ದೋಚಲಾಗುತ್ತಿದೆ. ಇದರಿಂದ ಬರದ ತೀವ್ರತೆ ಹೆಚ್ಚಾಗಲಿದೆ,
ಅತಿ ಹೆಚ್ಚು ನೀರು ಬೇಡುವ ಲಾಭದಾಯಕ ಬೆಳೆಯನ್ನು ಬೆಳೆಯುವ ಪ್ರವೃತ್ತಿ ರೈತರಲ್ಲಿ ಹೆಚ್ಚುತ್ತಿದೆ. ಕಬ್ಬು, ಭತ್ತದಂಥ ಬೆಳೆಗೆ ಹೆಚ್ಚು ನೀರು ಬೇಕು. ರೈತರು ಇಂಥ ಬೆಳೆಗಳನ್ನೇ ಬೆಳೆಯಲು ಇಷ್ಟಪಡುತ್ತಾರೆ. ಹೀಗಾಗಿ ನೀರಾವರಿ ಯೋಜನೆಗಳ ಸದುಪಯೋಗ ಆಗುತ್ತಿಲ್ಲ.

ಕರ್ನಾಟಕದಲ್ಲೂ ಕೂಡಾ ಬರ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಪರಿಸ್ಥಿತಿ ಗಂಭೀರವಾಗಿದೆ. ಮುಂಗಾರು ಮತ್ತು ಹಿಂಗಾರು ಎರಡೂ ಮಳೆಗಳು ಕೈ ಕೊಟ್ಟಿವೆ. ಹೀಗಾಗಿ ರಾಜ್ಯದಲ್ಲಿ ತೀವ್ರ ನೀರಿನ ಕೊರತೆ ಉಂಟಾಗಲಿದೆ. ಮಳೆ ಅಭಾವದಿಂದ 16 ಜಿಲ್ಲೆಗಳ 156 ತಾಲೂಕುಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಮಾರ್ಚ್ ತಿಂಗಳಲ್ಲೇ ಬಿಸಿಲಿನ ಧಗೆ ಹೆಚ್ಚುತ್ತಿದೆ. ವಿಶೇಷವಾಗಿ, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಬಳ್ಳಾರಿ, ಹಾವೇರಿ, ವಿಜಯಪುರ, ಗದಗ, ಉತ್ತರ ಕನ್ನಡ, ದಾವಣಗೆರೆ, ಚಿತ್ರದುರ್ಗ, ಬೀದರ್, ಬೆಳಗಾವಿಗಳಲ್ಲಿ ತೀವ್ರ ಬರದ ಛಾಯೆ ಕವಿದಿದೆ. ಅನೇಕ ಕಡೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ವಿಪರೀತವಾಗಿದೆ. ಮೇವಿಗಾಗಿ ರೈತರು ಊರೂರಿಗೆ ಅಲೆಯುವ ಸ್ಥಿತಿ ನಿರ್ಮಾಣವಾಗಿದೆ. ಹಿಂಗಾರು ಹಂಗಾಮಿನಲ್ಲಿ ವಾಡಿಕೆಯಂತೆ 188 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಈ ಬಾರಿ 96 ಮಿ. ಮೀ. ಮಾತ್ರ ಮಳೆಯಾಗಿದೆ. ಹೀಗಾಗಿ ಪರಿಸ್ಥಿತಿ ದಾರುಣವಾಗಿದೆ

ಬರಗಾಲದಿಂದ ದೇಶದ ಆರ್ಥಿಕ ಪರಿಸ್ಥಿತಿಯೂ ಹದಗೆಟ್ಟಿದೆ. ಬಡವರು, ಸಣ್ಣಪುಟ್ಟ ರೈತರು ತೊಂದರೆಗೆ ಒಳಗಾಗಿದ್ದಾರೆ. ‘‘ಅಂತರ್ಜಲ ಮರುಪೂರಣಕ್ಕೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ವರ್ಷ ಪರಿಸ್ಥಿತಿ ಇನ್ನೂ ಹದಗೆಡಲಿದೆ’’ ಎಂದು ವಿಜ್ಞಾನಿಗಳು ನೀಡಿದ ಎಚ್ಚರಿಕೆಯನ್ನು ಸರಕಾರ ಮಾತ್ರವಲ್ಲ, ಸಮಾಜ ಕೂಡಾ ಗಂಭೀರವಾಗಿ ಪರಿಗಣಿಸಬೇಕಾಗಿದೆ

ಬರಗಾಲ ಬಂದಾಗ ತರಾತುರಿಯಲ್ಲಿ ಪರಿಹಾರ ಕ್ರಮಗಳನ್ನು ಕೈಗೊಂಡರೆ ಸಾಲದು. ಬರ ಪರಿಸ್ಥಿತಿ ಎದುರಿಸಲು ಶಾಶ್ವತವಾದ ಕ್ರಮಗಳನ್ನು ಕೈಗೊಳ್ಳಬೇಕು. ನಿಸರ್ಗದಲ್ಲಿನ ಏರುಪೇರುಗಳು ಬರ ಪರಿಸ್ಥಿತಿಗೆ ಕಾರಣ ಎಂಬುದು ನಿಜವಾದರೂ ಮಾನವನ ಸ್ವಯಂಕೃತ ಅಪರಾಧವೂ ಇದಕ್ಕೆ ಕಾರಣವಾಗಿದೆ. ಕೈಗಾರಿಕೀಕರಣದ ಹೆಸರಿನಲ್ಲಿ ನಿಸರ್ಗದ ಮೇಲೆ ನಡೆದ ದಾಳಿ ಹಾಗೂ ವಾಯು ಮಾಲಿನ್ಯ, ಜಲ ಮಾಲಿನ್ಯ, ತಾಪಮಾನ ಹೆಚ್ಚಳ, ಓರೆನ್ ಪದರಕ್ಕೆ ಹಾನಿ ಇತ್ಯಾದಿಗಳು ಬರ ಪರಿಸ್ಥಿತಿಗೆ ಕಾರಣ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡಗಳ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ. ಉತ್ತರ ಕನ್ನಡದ ಕೆಲವು ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ.
ಬರ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕ್ರಮಗಳನ್ನು ರೂಪಿಸಬೇಕು. ಜಲ ಮೂಲಗಳಾದ ಕೆರೆ, ನದಿ, ಹಳ್ಳಗಳ ಸರ್ವೇ ಮಾಡಿಸಿ ಒತ್ತುವರಿ ತೆರವುಗೊಳಿಸಬೇಕು. ರಾಜ್ಯದಲ್ಲಿ ವ್ಯಾಪಕ ವಿಸ್ತಾರ ಹೊಂದಿರುವ ಸಾವಿರಾರು ಕೆರೆಗಳಿದ್ದು ಅವುಗಳ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ಅರಣ್ಯ ಒತ್ತುವರಿ ತೆರವುಗೊಳಿಸಬೇಕು. ಕಾಡು ನಾಶವನ್ನು ನಿಲ್ಲಿಸಬೇಕು. ಹಸೀರೀಕರಣ ಯೋಜನೆಯನ್ನು ಕಡ್ಡಾಯವಾಗಿ ಜಾರಿಗೆ ತರಬೇಕು. ನೆಲಕ್ಕೆ ಬಿದ್ದ ಮಳೆ ನೀರು ಭೂಮಿಯಲ್ಲಿ ಇಂಗಿ ಹೋಗುವಂತೆ ಮಾಡಿ ಅಂತರ್ಜಲ ಪ್ರಮಾಣವನ್ನು ಹೆಚ್ಚಿಸಬೇಕು. ಹೀಗೆ ಬರ ಪರಿಹಾರಕ್ಕೆ ಶಾಶ್ವತವಾದ ಕ್ರಮಗಳನ್ನು ಕೈಗೊಳ್ಳುವುದು ಇಂದಿನ ಅಗತ್ಯವಾಗಿದೆ.

ಬರಗಾಲ ಪರಿಹಾರಕ್ಕೆ ಇವಷ್ಟು ಕ್ರಮಗಳಲ್ಲದೆ, ತುರ್ತಾಗಿ ಇನ್ನಿತರ ಕೆಲವು ಅಗತ್ಯ ಕ್ರಮಗಳನ್ನು ಕೈ ಗೊಳ್ಳಬೇಕು. ಉದ್ಯೋಗ ಖಾತ್ರಿ, ಕುಡಿಯುವ ನೀರು ಪೂರೈಕೆ, ದನಕರುಗಳಿಗೆ ಮೇವು ಇವೆಲ್ಲ್ಲ ತುರ್ತು ಕೈಗೊಳ್ಳಬೇಕಾದ ಕ್ರಮಗಳು. ಕೇಂದ್ರ ಸರಕಾರ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಯಾ ಜಿಲ್ಲೆಗಳಿಗೆ ಅನ್ವಯವಾಗುವ ದೂರಗಾಮಿ ಬರ ಪರಿಹಾರ ಕ್ರಮಗಳನ್ನು ರೂಪಿಸಬೇಕು. ರಾಜ್ಯ ಸರಕಾರಗಳೂ ಇದಕ್ಕೆ ಸಹಕಾರ ನೀಡಬೇಕು. ಆಗ ಮಾತ್ರ ಬರಗಾಲದಿಂದ ಶಾಶ್ವ್ವತ ಮುಕ್ತಿ ಸಾಧ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News