ಮೋದಿ ಪಾದ ತೊಳೆದ ನಂತರ ಐವರು ಪೌರ ಕಾರ್ಮಿಕರು ಹೇಗಿದ್ದಾರೆ?: ಅವರ ಮಾತುಗಳನ್ನೇ ಕೇಳಿ…

Update: 2019-03-07 08:42 GMT

ಪ್ರಧಾನಿ ನರೇಂದ್ರ ಮೋದಿ ನೀಡಿದ ಕರವಸ್ತ್ರವನ್ನು ಪ್ಯಾರೇಲಾಲ್ ಇನ್ನೂ ಬಿಚ್ಚಿಲ್ಲ. ಹೊರಿಲಾಲ್‍ ಗೆ ಈಗ ಪ್ರತಿ ಬಾರಿ ಕಣ್ಣುಮುಚ್ಚಿದಾಗಲೂ, ಮೋದಿ ಬಗ್ಗಿ ತನ್ನ ಪಾದ ತೊಳೆದಂತೆ ಭಾಸವಾಗುತ್ತದೆ. ಆದರೆ ಆಗ ಕಟುವಾಸ್ತವ ಎದುರಾಗುತ್ತದೆ.

ಫೆಬ್ರವರಿ 24ರಂದು ಪ್ರಧಾನಿ ಮೋದಿ ಜತೆಗೆ ಕಳೆದ ಐದು ನಿಮಿಷಗಳ ನೆನಪು ಕುಂಭಮೇಳದ ಈ ಐವರು ನೈರ್ಮಲ್ಯ ಕಾರ್ಮಿಕರನ್ನು ಕಾಡುತ್ತಲೇ ಇದೆ. ಇವೆಲ್ಲದರ ನಡುವೆಯೂ ಬೇಸರದ ಸಂಗತಿಯೆಂದರೆ, ವೇತನ ಹೆಚ್ಚಳಕ್ಕಾಗಿ, ಪಕ್ಕಾ ಉದ್ಯೋಗಕ್ಕಾಗಿ, ಅವರು ಮಾಡುವ ಕೆಲಸಕ್ಕೆ ಯಂತ್ರವನ್ನು ಬಳಸುವ ಸಂಬಂಧ ಪ್ರಧಾನಿ ಜತೆ ಮಾತನಾಡುವ ಅವಕಾಶ ಅವರಿಗೆ ಸಿಕ್ಕಿಲ್ಲ ಎನ್ನುವುದು.

ಹೊರಿಲಾಲ್ (35) ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಧೊರಾತಿಯಾ ಗ್ರಾಮದಿಂದ ಕೆಲಸಕ್ಕಾಗಿ ಕುಂಭಮೇಳಕ್ಕೆ ಬಂದಿದ್ದರು.  ಇತರ ನಾಲ್ಕು ಮಂದಿಯ ಜತೆಗೆ ಬೀಗ ಹಾಕಿದ ನಿರೀಕ್ಷಣಾ ಕೊಠಡಿಯಲ್ಲಿ ಮೋದಿ ಬರುವಿಕೆಗಾಗಿ ಕಾದು ಕುಳಿತ ಅಪೂರ್ವ ಕ್ಷಣವನ್ನು ಅವರು ಮೆಲುಕು ಹಾಕಿಕೊಳ್ಳುತ್ತಾರೆ. ಜತೆಗೆ ಮೋದಿ ಇವರ ಪಾದ ತೊಳೆದು ಒರೆಸುತ್ತಿದ್ದಾಗ ಮಿಂಚಿನ ಫೋಟೊ ಫ್ಲ್ಯಾಷ್‍ ಗಳು ಇವರನ್ನು ಪುಳಕಗೊಳಿಸಿತ್ತು. "ನಮ್ಮನ್ನು ಮೋದಿ ಭೇಟಿ ಮಾಡುತ್ತಾರೆ ಎಂದು ನಮಗೆ ಹೇಳಿದ್ದರು. ಆದರೆ ನಮ್ಮ ಪಾದವನ್ನು ತೊಳೆಯುತ್ತಾರೆ ಎಂದು ಹೇಳಿರಲಿಲ್ಲ" ಎಂದು ಮುಜುಗರದಿಂದಲೇ ಅವರು ಹೇಳುತ್ತಾರೆ. "ಅಂತಹ ದೊಡ್ಡ ಮನುಷ್ಯರು ನಮ್ಮಂತಹವರ ಪಾದ ತೊಳೆಯುವುದು ನಿಜಕ್ಕೂ ಮುಜುಗರ ತರುವ ಸಂಗತಿ" ಎನ್ನುತ್ತಾರೆ ಹೊರಿಲಾಲ್. ಆ ದಿನ ತಾವು ಚೆನ್ನಾಗಿ ಸ್ನಾನ ಮಾಡಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ.

ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹೊರಿ, ತಮ್ಮ ಪತ್ನಿ ರಾಜಕುಮಾರಿ (32), ಮಕ್ಕಳಾದ ಅಮಿತ್ (15), ಆಕಾಶ್ (12) ಮತ್ತು ಕಪಿಲ್ (10) ಜತೆಗೆ ಕಳೆದ ನವೆಂಬರ್‍ ನಿಂದಲೇ ಇಲ್ಲಿದ್ದಾರೆ. ಮಕ್ಕಳು ಕುಂಭಮೇಳ ಸ್ಥಳದಲ್ಲಿ ಅಂಗನವಾಡಿಗೆ ಹೋಗುತ್ತಿದ್ದರೆ, ರಾಜಕುಮಾರಿ ನೈರ್ಮಲ್ಯ ಕಾರ್ಮಿಕಳಾಗಿ ದುಡಿಯುತ್ತಿದ್ದಾಳೆ.

ಹೊರಿ, ಕುಂಭ ಮೇಳದಲ್ಲಿ ನೈರ್ಮಲ್ಯ ಕಾರ್ಮಿಕರಾಗಿ ದುಡಿಯುತ್ತಿರುವುದು ಇದು ನಾಲ್ಕನೇ ಬಾರಿ. ಗ್ರಾಮಕ್ಕೆ ಮರಳಿದ ಬಳಿಕ ಮೇಸ್ತ್ರಿ ಕೆಲಸ ಮಾಡುತ್ತಾರೆ. ಫೆಬ್ರವರಿ 24ರ ಕ್ಷಣದಂತಹ ಯಾವ ಘಟನೆಯೂ ಅವರ ನೆನಪಿನಲ್ಲಿ ಇಲ್ಲ. ‘ಅವರು ಶ್ರೇಷ್ಠ ವ್ಯಕ್ತಿ’ ಎಂದು ಉದ್ಗಾರ ತೆಗೆಯುತ್ತಾರೆ. ಇಂತಹ ಗೌರವ ನೀಡಿದ್ದಾಗಿ ಸದಾ ನಾನು ಕೃತಜ್ಞ ಎನ್ನುವ ಹೊರಿ, "ಆದರೆ ಇದರಿಂದ ನಮ್ಮ ಜೀವನದಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಈ ಹಿಂದೆಯೂ ನಾವು ಈ ಸ್ವಚ್ಛತೆ ಕೆಲಸ ನಿರ್ವಹಿಸುತ್ತಿದ್ದೆವು. ಈಗಲೂ ಅದನ್ನೇ ಮುಂದುವರಿಸುತ್ತಿದ್ದೇವೆ" ಎಂದು ಹೇಳುತ್ತಾರೆ.

ತಾನು ಮಾಡುವ ಕೆಲಸವನ್ನು ಹೊರಿ ಇಷ್ಟಪಡುವುದಿಲ್ಲ. "ಕೆಲಸಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅಲೆಯುವುದು ನನಗೆ ಇಷ್ಟವಿಲ್ಲ. ‘ಕಾಮ್ ಕುಛ್ ಬಿ  ಹೋ, ಪಕ್ಕಾ ಹೋನಾ ಚಾಹಿಯೇ, ಪ್ರಧಾನಮಂತ್ರಿ ಅಗರ್ ನೌಕರಿ ದೇ ದೇತೇ ತೊ ಸಹಿ ಹೋತಾ’ (ಒಬ್ಬ ಯಾವ ಕೆಲಸವನ್ನಾದರೂ ಮಾಡಬಹುದು. ಆದರೆ ಅದು ಕಾಯಂ ಆಗಬೇಕು. ಪ್ರಧಾನಿ ನಮಗೆ ಉದ್ಯೋಗ ನೀಡಿದರೆ ಅದು ಒಳ್ಳೆಯದಾಗುತ್ತದೆ) ಈಗ ಇರುವ ವೇತನ ದಿನಕ್ಕೆ 310 ರೂಪಾಯಿಯಿಂದ ಹೆಚ್ಚುತ್ತದೆ. ಆದರೆ ಇದಕ್ಕೆ ಇನ್ನೂ ಸುದೀರ್ಘ ದಾರಿ ಕ್ರಮಿಸಬೇಕು ಎಂದು ಅವರು ಬೀಡಿ ಸೇದಲು ವಿರಾಮ ಪಡೆದ ಬಳಿಕ ಅಸಹಾಯಕತೆಯಿಂದ ನುಡಿದರು.

ಈ ಮಧ್ಯೆ ಹೊರಿ ಇತ್ತೀಚಿನ ದಿನಗಳಲ್ಲಿ ವಿಶ್ರಾಂತಿ ಎದುರು ನೋಡುತ್ತಿದ್ದಾರೆ. “ನನ್ನ ಕನಸಿನಲ್ಲಿ, ಎಲ್ಲ ಕ್ಯಾಮರಾಗಳು ನಮ್ಮ ಫೋಟೊ ಕ್ಲಿಕ್ಕಿಸುತ್ತಿರುವ ಕ್ಷಣಗಳೇ ಬರುತ್ತವೆ" ಎಂದು ಹೊರಿ ಬಣ್ಣಿಸುತ್ತಾರೆ.

ಕೆನೆಬಣ್ಣದ ಸ್ಕಾರ್ಫ್ ತೋರಿಸುವ ಪ್ಯಾರೇಲಾಲ್ (40) ಆ ದಿನದಿಂದ ಇಂದಿನವರೆಗೂ ಅದನ್ನು ತೆಗೆದೇ ಇಲ್ಲ. "ಮೋದಿ ಜತೆಗೆ ಇನ್ನಷ್ಟು ಸಮಯ ಸಿಗಬೇಕಿತ್ತು" ಎನ್ನುವುದು ಅವರ ಅಭಿಮತ. ಮೋದಿ ತಮ್ಮ ಪಾದಗಳನ್ನು ತೊಳೆದ ಕ್ಷಣದ ಆಘಾತ ಹಾಗೂ ಗೌರವವನ್ನು ನೆನಪಿಸಿಕೊಳ್ಳುವ ಅವರು, "ಅವರು ನಮ್ಮನ್ನು ಭೇಟಿಯಾದದ್ದು ಕೆಲ ಕ್ಷಣಗಳ ಕಾಲ ಮಾತ್ರ. ಅವರೊಂದಿಗೆ ಸರಿಯಾಗಿ ಮಾತನಾಡಲೂ ಸಾಧ್ಯವಾಗಲಿಲ್ಲ" ಎಂದು ಹೇಳುತ್ತಾರೆ.

ದಿನಗೂಲಿ ಕಾರ್ಮಿಕನಾಗಿರುವ ಪ್ಯಾರೇ, ಕಳೆದ ನವೆಂಬರ್‍ನಿಂದಲೂ ಕುಂಭಮೇಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದು ಕುಂಭಮೇಳಕ್ಕೆ ಅವರ ಆರನೇ ಭೇಟಿ. ತಮ್ಮ ಪತ್ನಿ ಜತೆಗ ಇಲ್ಲಿಗೆ ಆಗಮಿಸಿದ್ದರು. ಈ ದಂಪತಿಗೆ ಮೂವರು ಗಂಡುಮಕ್ಕಳು ಸೇರಿದಂತೆ ಎಂಟು ಮಂದಿ ಮಕ್ಕಳಿದ್ದಾರೆ. ಅವರೂ ದಿನಗೂಲಿಗಳಾಗಿ ದುಡಿಯುತ್ತಾರೆ. ತಮ್ಮ ಕೆಲಸಕ್ಕೆ ನೀಡುವ ವೇತನ ಸಾಲದು ಎಂದು ಹೇಳುವ ಪ್ಯಾರೇ, "ಪ್ರಧಾನಿ ನಮ್ಮ ವೇತನ ಹೆಚ್ಚಿಸಬೇಕಿತ್ತು. ನಾವು ನಮ್ಮ ಮನೆಗಳನ್ನು ತೊರೆದು ಇಲ್ಲಿಗೆ ಬಂದಿದ್ದೇವೆ. ಈ ಬಾರಿ ನಾವು ಮರಳುವಾಗ ಗೆಮ್ಚಾವನ್ನು ಸ್ಮರಣಿಕೆಯಾಗಿ ಒಯ್ಯಲಿದ್ದೇವೆ. ನಾನು ಮೋದಿಯವರನ್ನು ಭೇಟಿ ಮಾಡಿದ್ದಕ್ಕೆ ಇದೊಂದೇ ಸಾಕ್ಷಿ” ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಕನಿಷ್ಠ ದಿನಕ್ಕೆ 500 ರೂಪಾಯಿ ವೇತನವನ್ನಾದರೂ ನೀಡಬೇಕು ಎನ್ನುವುದು ಜ್ಯೋತಿ ಮೆಹ್ತರ್ ಅವರ ಆಗ್ರಹ. 21 ವರ್ಷದ ಆಕೆ ಕುಂಭಮೇಳದಲ್ಲಿ ಕೆಲಸ ಮಾಡುತ್ತಿರುವುದು ಇದೇ ಮೊದಲು. ಆಕೆಯ ಪತಿ ಬಬ್ಲೂ (23) ಕೂಡಾ ನೈರ್ಮಲ್ಯ ಕಾರ್ಮಿಕನಾಗಿ ದುಡಿಯುತ್ತಿದ್ದಾನೆ. "ಈ ಕೆಲಸದಲ್ಲಿ ಆರಾಮ ಎನ್ನುವುದೇ ಇಲ್ಲ" ಎಂದು ತಮಗೆ ಹಂಚಿಕೆ ಮಾಡಲಾದ ಡೇರೆಯಲ್ಲಿ ಕುಳಿತಿದ್ದ ಜ್ಯೋತಿ ನಿಟ್ಟುಸಿರು ಬಿಡುತ್ತಾರೆ.

ಮೋದಿ ಭೇಟಿಯ ಬಳಿಕ ಆಕೆ ಹೇಳಿದ್ದನ್ನು ಮಾಧ್ಯಮಗಳು ತಿರುಚಿವೆ ಎಂಬ ಬಗ್ಗೆಯೂ ಜ್ಯೋತಿಗೆ ಸಿಟ್ಟು ಇದೆ. ಆದರೆ ಮೋದಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಬೇಕು ಎಂಬ ಬಯಕೆ ಆಕೆಗೆ ಇತ್ತು. "ಅವರು ಅಷ್ಟು ದೊಡ್ಡ ಮನುಷ್ಯ. ನಾನು ಅವರಿಗೆ ಏನನ್ನಾದರೂ ಹೇಳುವುದು ಹೇಗೆ ಸಾಧ್ಯವಿತ್ತು?” ಎನ್ನುವುದು ಅವರ ಪ್ರಶ್ನೆ.

ಜಾಡಮಾಲಿ ಪದ್ಧತಿಯನ್ನು ನಿರ್ಮೂಲನೆ ಮಾಡುವಂತೆ ಒತ್ತಾಯಿಸಲು ಆಕೆ ಬಯಸಿದ್ದಳು. "ಇತರರ ಮಲವನ್ನು ಸ್ವಚ್ಛಗೊಳಿಸಲು ಕಾರ್ಮಿಕರು ಗಟಾರಕ್ಕೆ ಇಳಿಯುವಂತಾಗಬಾರದು. ಒಂದು ಯಂತ್ರ ಮಾಡಬಹುದಾದ್ದನ್ನು ಕಾರ್ಮಿಕ ಏಕೆ ಮಾಡಬೇಕು?” ಎಂದು ಅವರು ಪ್ರಶ್ನಿಸುತ್ತಾರೆ.

ನರೇಶ್ ಕುಮಾರ್ (28) ಎಂಬ ದಿನಗೂಲಿ ಮೂಲತಃ ಬಂದಾ ಜಿಲ್ಲೆಯ ನಾರಾಯಣಪುರ ಗ್ರಾಮದವರು. ಅಕ್ಟೋಬರ್‍ ನಿಂದ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ತಂದೆ ಕೂಡಾ ತೀರಾ ವೃದ್ಧಾಪ್ಯದ ಕಾರಣದಿಂದ ಕೆಲಸ ಬಿಡುವವರೆಗೆ ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.

ಮೂವರು ಪುತ್ರರು ಹಾಗೂ ಒಬ್ಬಾಕೆ ಹೆಣ್ಣುಮಗುವಿನ ತಂದೆಯಾಗಿರುವ ನರೇಶ್, "ನಮ್ಮಂಥ ತೀರಾ ಬಡಜನರನ್ನು ಸರ್ಕಾರ ನಿರ್ಲಕ್ಷಿಸುತ್ತಿದೆ" ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇಲ್ಲಿ ಇರುವ ದೊಡ್ಡ ಸಮಸ್ಯೆ ಎಂದರೆ ಜಾತಿಯದ್ದು. "ನಾವು ಈ ಕೆಲಸವನ್ನು ಮಾಡುತ್ತಲೇ ಬಂದಿದ್ದೇವೆ. ಈಗ ಕೂಡಾ ಮುಂದುವರಿಸುತ್ತಿದ್ದೇವೆ" ಎಂದು ವಾಲ್ಮೀಕಿ ಸಮುದಾಯಕ್ಕೆ ಸೇರಿದ ಅವರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಪ್ರಧಾನಿ ಅವರ ಪಾದ ತೊಳೆದಿರುವುದು ದೊಡ್ಡ ಗೌರವ. ಆದರೆ ನಮಗೆ ಸ್ವಲ್ಪವಾದರೂ ಮಾತನಾಡುವ ಅವಕಾಶ ನೀಡಬೇಕಿತ್ತು, ನಮ್ಮ ವೇತನ ಹೆಚ್ಚಿಸಲು ಕೇಳಲು, ಅಸ್ಪ್ರಶ್ಯತೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸುವ ಅವಕಾಶ ಸಿಗಬೇಕಿತ್ತು ಎಂದು ಹೇಳುವಾಗ ಅಕ್ಕಪಕ್ಕ ಇದ್ದವರೂ ಸಮ್ಮತಿಯಿಂದ ತಲೆಯಾಡಿಸಿದರು. "ಈ ದೇಶದಲ್ಲಿ ಬದಲಾವಣೆಯಾಗಲೇಬೇಕು. ಆದರೆ ಅದು ಆಗುತ್ತಿಲ್ಲ. ಬಡವರು ಹಾಗೂ ಹಿಂದುಳಿದವರು ಸಂಕಷ್ಟದಲ್ಲಿದ್ದಾರೆ"

ಚೌಬಿ (34) ಮತ್ತು ಅಮರೀಶ್ ಕುಮಾರ್ ಅವರು ತಮ್ಮ ಮೂವರು ಮಕ್ಕಳೊಂದಿಗೆ ಕುಂಭ ಮೇಳದಲ್ಲಿದ್ದಾರೆ. ದೊಡ್ಡ ಮಗ ಅರುಣ್ (18) ಕೂಡಾ ಕುಂಭಮೇಳದಲ್ಲಿ ಸ್ವಚ್ಛತಾ ಕಾರ್ಮಿಕ. ಮೋದಿಯನ್ನು ಭೇಟಿ ಮಾಡಿದ ದಿನವನ್ನು ನೆನಪಿಸಿಕೊಳ್ಳುವ ಚೌಬಿ, "ಆ ದಿನ ಬೇಗನೇ ಎದ್ದು ಸ್ನಾನ ಮಾಡಿದೆ. ಸೆಕ್ಟರ್ 1ನಲ್ಲಿರುವ ಸಭಾಗೃಹಕ್ಕೆ 11 ಗಂಟೆಗೆ ಬಂದೆ. ಬಳಿಕ ನಾವು ಕಾದೆವು. ಸಂಜೆ ಅವರು (ಮೋದಿ) ಬಂದರು" ಎಂದು ಹೇಳುತ್ತಾ ಗಂಡನ ಒಪ್ಪಿಗೆಗಾಗಿ ಅತ್ತ ನೋಡಿದರು. ಆ ದಿನ ಮೋದಿ ನಿಡಿದ ಗಮ್ಚಾವನ್ನು ಆತ ಧರಿಸಿದ್ದ.

ಬಾಂದಾ ಜಿಲ್ಲೆಯ ಮಝ್ಹಿಲಾ ಗ್ರಾಮಕ್ಕೆ ಮರಳಿದ ಬಳಿಕ ಜೀವನೋಪಾಯಕ್ಕಾಗಿ ಬೆತ್ತದ ಬುಟ್ಟಿ ಮಾಡುತ್ತಾರೆ. 20 ವರ್ಷಗಳಿಂದ ಕುಂಭಮೇಳಕ್ಕೆ ಬರುತ್ತಿರುವ ಈಕೆ, ಈ ಬಾರಿಯ ಕುಂಭಮೇಳ ಅತ್ಯಂತ ಸ್ವಚ್ಛ ಎಂದು ಅಭಿಪ್ರಾಯಪಡುತ್ತಾರೆ.

ಆದರೆ ಪತ್ನಿಯತ್ತ ಬೆಟ್ಟು ಮಾಡಿದ ಅಮ್ರೀಶ್, “ಆಕೆ ಪ್ರಧಾನಿಗೆ ಏನೂ ಹೇಳಲಿಲ್ಲ. ನನಗೆ ಅವಕಾಶ ಸಿಕ್ಕಿದ್ದರೆ ಹೇಳುತ್ತಿದ್ದೆ” ಎಂದು ವಿವರಿಸಿದರು. ಇದು ಚೌಬಿಗೆ ಇಷ್ಟವಾದಂತೆ ಕಾಣಲಿಲ್ಲ. ನೆಲದತ್ತ ಕಣ್ಣುನೆಟ್ಟ ಅವರು, "ನೀವು ಅಲ್ಲಿದ್ದರೆ ಗೊತ್ತಾಗುತ್ತಿತ್ತು. ಅವರು ನಮ್ಮ ಐದು ಮಂದಿಯನ್ನು ಭೇಟಿಯಾದದ್ದು ಕೇವಲ ಐದು ನಿಮಿಷ. ನಮಗೆ ತಿಂಗಳಿಗೆ 15 ಸಾವಿರ ಬದಲಾಗಿ 20 ಸಾವಿರವಾದರೂ ಕನಿಷ್ಠ ಸಿಗಬೇಕು. ಪ್ರಧಾನಿ ಇದಕ್ಕಾಗಿ ಏನಾದರೂ ಮಾಡಬೇಕು" ಎಂದು ಅಭಿಪ್ರಾಯಪಟ್ಟರು.

ನಿಮ್ಮನ್ನು ಆಯ್ಕೆ ಮಾಡಿದ್ದು ಹೇಗೆ ಎಂದು ಕೇಳಿದಾಗ, ಆಯ್ಕೆ ಯಾದೃಚ್ಛಿವಾಗಿತ್ತು. ಆದರೆ ಪೊಲೀಸರು ನಮ್ಮ ಗ್ರಾಮಗಳಿಗೆ ಹೋಗಿ ನಮ್ಮ ವಿರುದ್ಧ ಯಾವುದೇ ಪ್ರಕರಣ ಇದೆಯೇ ಎಂದು ಪರಿಶೀಲಿಸಿದ್ದರು. "ನಾನು ಪೊಲೀಸ್ ಠಾಣೆಯನ್ನು ನೋಡಿಯೂ ಇಲ್ಲ. ಹಾಗಿದ್ದ ಮೇಲೆ ಪ್ರಕರಣ ಎಲ್ಲಿಂದ ಬಂತು?” ಎಂದು ನಗುತ್ತಾ ಪ್ರಶ್ನಿಸಿದರು.

ಆದರೆ ಇತರ ಷರತ್ತುಗಳೂ ಇದ್ದವು. ಕುಂಭ ಮೇಳದ ಸೆಕ್ಟರ್ 3 ಸ್ವಚ್ಛತೆ ಉಸ್ತುವಾರಿ ಹೊಣೆ ಹೊತ್ತಿದ್ದ ರಾಜ್ಯ ಆರೋಗ್ಯ ಇಲಾಖೆಯ ವೈದ್ಯಕೀಯ ಅಧಿಕಾರಿ ಡಾ.ರವೀಂದ್ರ ಕುಮಾರ್ ತ್ಯಾಗಿ, ನೈರ್ಮಲ್ಯ ಕಾರ್ಮಿಕರ ಪಟ್ಟಿ ಸಿದ್ಧಪಡಿಸಿದವರಲ್ಲಿ ಒಬ್ಬರು. "ನಮಗೆ ಕೆಲ ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿತ್ತು. ಅವರು ಆರೋಗ್ಯವಂತರಿರಬೇಕು, ಅವರ ವಿರುದ್ಧ ಯಾವ ಪೊಲೀಸ್ ಪ್ರಕರಣವೂ ಇರಬಾರದು" ಎಂಬ ಸೂಚನೆ ಇತ್ತು. ಕೆಲವರ ಹಲ್ಲಿನಲ್ಲಿ ಕಲೆಗಳಿವೆ ಎಂಬ ಕಾರಣಕ್ಕೆ ಅವರನ್ನು ಕೈಬಿಡಲಾಯಿತು. ಮತ್ತೆ ಕೆಲವರನ್ನು ಮದ್ಯ ಸೇವಿಸುವ ಅಥವಾ ಗುಟ್ಕಾ ತಿನ್ನುವ ಅಭ್ಯಾಸದ ಹಿನ್ನೆಲೆಯಲ್ಲಿ ಕೈಬಿಡಲಾಯಿತು ಎಂದು ವಿವರಿಸಿದರು.

Writer - ಅಸಾದ್ ರೆಹಮಾನ್, indianexpress.com

contributor

Editor - ಅಸಾದ್ ರೆಹಮಾನ್, indianexpress.com

contributor

Similar News