ತೂಕ ವಿಭಾಗಗಳನ್ನು ಮರುರೂಪಿಸಿದ ಎಐಬಿಎ
ಹೊಸದಿಲ್ಲಿ, ಮಾ.7: ಅಂತರ್‌ರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆಯು(ಎಐಬಿಎ) 2010 ಟೋಕಿಯೊ ಒಲಿಂಪಿಕ್ಸ್‌ಗೆಬಾಕ್ಸರ್‌ಗಳ ತೂಕ ವಿಭಾಗದಲ್ಲಿ ಬದಲಾವಣೆ ಮಾಡಿದೆ. ಇದರಿಂದ ಭಾರತದ ಪ್ರಮುಖ ಬಾಕ್ಸಿಂಗ್ ಪಟುಗಳಾದ ಅಮಿತ್ ಪಾಂಘಾಲ್, ಶಿವ ಥಾಪ ಹಾಗೂ ಮನೀಷ್ ಕೌಶಿಕ್ ತಾವು ಸ್ಪರ್ಧಿಸುವ ತೂಕ ವಿಭಾಗಗಳನ್ನು ಬದಲಾಯಿಸಬೇಕಾಗಿದೆ. ಟೋಕಿಯೊ ಒಲಿಂಪಿಕ್ಸ್‌ಗೆ ಎಐಬಿಎಯು 8 ಮಂದಿ ಪುರುಷ ಬಾಕ್ಸಿಂಗ್ ಪಟುಗಳು ಹಾಗೂ ಐದು ಮಂದಿ ಮಹಿಳಾ ಪಟುಗಳ ತೂಕ ವಿಭಾಗಗಳನ್ನು ಅಂತಿಮಗೊಳಿಸಿದೆ.
ಪುರುಷರ ಪರಿಷ್ಕೃತ ತೂಕ ವಿಭಾಗಗಳು 52 ಕೆ.ಜಿ., 57 ಕೆ.ಜಿ., 63 ಕೆ.ಜಿ., 69 ಕೆ.ಜಿ., 75 ಕೆ.ಜಿ., 81 ಕೆ.ಜಿ., 91 ಕೆ.ಜಿ. ಹಾಗೂ +91 ಕೆ.ಜಿ. ಆಗಿವೆ. ಇನ್ನು ಮಹಿಳೆಯರ ತೂಕ ವಿಭಾಗಗಳನ್ನು 51 ಕೆ.ಜಿ., 57 ಕೆ.ಜಿ., 64 ಕೆ.ಜಿ., 69 ಕೆ.ಜಿ. ಹಾಗೂ 75 ಕೆ.ಜಿ.ಗೆ ಬದಲಾಯಿಸಿದೆ.
ಈ ವರ್ಷದ ಸೆಪ್ಟಂಬರ್‌ನಿಂದ ಬೌಟ್ ಮರುಪರಿಶೀಲನೆ ಪದ್ಧತಿಯನ್ನೂ ಅಳವಡಿಸಲು ಎಐಬಿಎ ನಿರ್ಧರಿಸಿದೆ. ಟೂರ್ನಿಯಲ್ಲಿ ತಂಡಗಳು ಎರಡು ಬೌಟ್‌ಗಳ ನಿರ್ಣಯಗಳನ್ನು ಪ್ರಶ್ನಿಸಲು ಇದು ಅವಕಾಶ ಕಲ್ಪಿಸಲಿದೆ.
ಭಾರತದ ಅಮಿತ್ ಪಾಂಘಾಲ್ ಈಗಿನ 49 ಕೆ.ಜಿ.ಯಿಂದ 52 ಕೆ.ಜಿ.ಗೆ ವಿಭಾಗವನ್ನು ಬದಲಿಸಿಕೊಳ್ಳಬೇಕಿದೆ. ಥಾಪ ಹಾಗೂ ಕೌಶಿಕ್ 60 ಕೆ.ಜಿ.ಯಿಂದ 63 ಕೆ.ಜಿ.ಗೆ ಹೆಚ್ಚಿಸಿಕೊಳ್ಳಬೇಕಿದೆ.
ಮಹಿಳಾ ಬಾಕ್ಸರ್‌ಗಳ ತೂಕ ವಿಭಾಗಗಳನ್ನು 3ರಿಂದ 5ಕ್ಕೆ ಹೆಚ್ಚಿಸಲಾಗಿದೆ.
ಬದಲಾವಣೆಗೆ ಸಿದ್ಧ: ಈ ಬದಲಾವಣೆಯ ಕುರಿತು ಪಿಟಿಐಗೆ ಪ್ರತಿಕ್ರಿಯಿಸಿರುವ ಭಾರತ ಬಾಕ್ಸಿಂಗ್‌ನ ಹೈ ಪರ್ಫಾರ್ಮೆನ್ಸ್ ನಿರ್ದೇಶಕ ಸ್ಯಾಂಟಿಯಾಗೊ ನೈವಾ ‘‘ನಾವು ಈ ಬದಲಾವಣೆಗೆ ಸಿದ್ಧವಾಗಿದ್ದೇವೆ . ತೂಕ ವಿಭಾಗದಲ್ಲಿ ಬದಲಾವಣೆ ಆಗುತ್ತದೆ ಎಂಬುದು ತಿಳಿದಿತ್ತು. ಮುಂದಿನ ತಿಂಗಳು ನಡೆಯಲಿರುವ ಏಶ್ಯನ್ ಚಾಂಪಿಯನ್‌ಶಿಪ್‌ಬಳಿಕ ಬಾಕ್ಸರ್‌ಗಳು ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳಲಿದ್ದಾರೆ’’ ಎಂದಿದ್ದಾರೆ.