ಮೊದಲ ಬಾರಿ ಪ್ರಜ್ಞೇಶ್ ಅರ್ಹತೆ
ಕ್ಯಾಲಿಫೋರ್ನಿಯ, ಮಾ.7: ಇಟಲಿಯ ಸಲ್ವಾಟೊರ್ ಕ್ರುಸೊರನ್ನು 6-2, 3-6, 6-2 ಸೆಟ್‌ಗಳ ಅಂತರದಿಂದ ಸೋಲಿಸಿದ ಪ್ರಜ್ಞೇಶ್ ಗುಣೇಶ್ವರನ್ ಇಂಡಿಯನ್ ವೆಲ್ಸ್‌ನಲ್ಲಿ ನಡೆಯುವ ಎಟಿಪಿ ಮಾಸ್ಟರ್ಸ್ 1000 ಟೂರ್ನಿಗೆ ಮೊದಲ ಬಾರಿ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಒಂದು ಗಂಟೆ ಹಾಗೂ 41 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಜಯ ದಾಖಲಿಸಿರುವ ಚೆನ್ನೈ ಆಟಗಾರ ಪ್ರಜ್ಞೇಶ್ ಕ್ಯಾಲಿಫೋರ್ನಿಯದಲ್ಲಿ ನಡೆಯುವ ಹಾರ್ಡ್‌ಕೋರ್ಟ್ ಟೂರ್ನಿಯಲ್ಲಿ ಆಡಲಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಕಳೆದ ವರ್ಷ ಎಟಿಪಿ ಟೂರ್ನಮೆಂಟ್‌ನ ಮುಖ್ಯ ಸುತ್ತಿಗೆ ಪ್ರವೇಶಿಸಿದ್ದ ಪ್ರಜ್ಞೇಶ್, ಈ ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದರು.
ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾದ ಎಟಿಪಿ ರ್ಯಾಂಕಿಂಗ್‌ನಲ್ಲಿ 97ನೇ ರ್ಯಾಂಕಿಗೆ ತಲುಪುವ ಮೂಲಕ ವೃತ್ತಿಜೀವನದಲ್ಲಿ ಮೊದಲ ಬಾರಿ ಅಗ್ರ-100ರಲ್ಲಿ ಸ್ಥಾನ ಪಡೆದಿದ್ದರು. ಟೂರ್ನಮೆಂಟ್‌ನ ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ರಾಮಕುಮಾರ್ ರಾಮನಾಥನ್ ವಿಶ್ವದ ನಂ.113ನೇ ಆಟಗಾರ ಫಿಲಿಪ್ ಕ್ರಾಜಿನೊವಿಕ್ ಎದುರು 4-6, 0-6 ಅಂತರದಿಂದ ಸೋತಿದ್ದರು.