ಸೈನಾ, ಶ್ರೀಕಾಂತ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ
ಬರ್ಮಿಂಗ್‌ಹ್ಯಾಮ್, ಮ.7: ಭಾರತದ ಅಗ್ರಮಾನ್ಯ ಶಟ್ಲರ್‌ಗಳಾದ ಸೈನಾ ನೆಹ್ವಾಲ್ ಹಾಗೂ ಕಿಡಂಬಿ ಶ್ರೀಕಾಂತ್ ಒಂದು ಮಿಲಿಯನ್ ಯುಎಸ್ ಡಾಲರ್ ಬಹುಮಾನ ಮೊತ್ತದ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.
ಗುರುವಾರ ನಡೆದ ಎರಡನೇ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಸೈನಾ ಅವರು ಡೆನ್ಮಾರ್ಕ್‌ನ ಲೈನ್ ಹೊಜ್‌ಮಾರ್ಕ್ ಜಾರ್ಸೆಫೆಲ್ಡ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಪ್ರಿ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅವರು ಎದುರಾಳಿಯನ್ನು 8-21, 21-16, 21-13ರಿಂದ ಮಣಿಸಿದ್ದಾರೆ. 51 ನಿಮಿಷಗಳ ಕಾಲ ನಡೆದ ಪಂದ್ಯದ ಮೊದಲ ಗೇಮ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಸೈನಾ, ಆನಂತರದ ಎರಡು ಗೇಮ್‌ಗಳಲ್ಲಿ ಸಂಪೂರ್ಣ ಪ್ರಾಬಲ್ಯ ಮೆರೆದರು. ತಮ್ಮ ಮುಂದಿನ ಪಂದ್ಯದಲ್ಲಿ ಅವರು ಎರಡು ಬಾರಿಯ ಚಾಂಪಿಯನ್ ಚೀನಾ ತೈಪೇಯಿಯ ತೈ ಝು ಯಿಂಗ್ ಅವರನ್ನು ಎದುರಿಸುವ ಸಾಧ್ಯತೆಯಿದೆ. ಇಲ್ಲಿ ಗುರುವಾರ ನಡೆದ ಪುರುಷರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಎರಡನೇ ಗೇಮ್ ಸೋಲಿನಿಂದ ಚೇತರಿಸಿಕೊಂಡ ಏಳನೇ ಶ್ರೇಯಾಂಕದ ಶ್ರೀಕಾಂತ್ ಏಶ್ಯನ್ ಗೇಮ್ಸ್ ಚಾಂಪಿಯನ್ ಜೋನಾಥನ್ ಕ್ರಿಸ್ಟಿ ವಿರುದ್ಧ 21-17, 11-21, 21-12 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು. ಶ್ರೀಕಾಂತ್ ಇಂಡೋನೇಶ್ಯದ ಕ್ರಿಸ್ಟಿ ವಿರುದ್ಧ ಆಡಿದ ಕಳೆದ 3 ಮುಖಾಮುಖಿಯಲ್ಲಿ ಮೊದಲ ಗೆಲುವು ದಾಖಲಿಸಿದರು.
26ರ ಹರೆಯದ ಶ್ರೀಕಾಂತ್ ಮುಂದಿನ ಸುತ್ತಿನಲ್ಲಿ ವಿಶ್ವದ ನಂ.1 ಆಟಗಾರ ಜಪಾನ್‌ನ ಕೆಂಟೊ ಮೊಮೊಟಾರ ಸವಾಲನ್ನು ಎದುರಿಸಲಿದ್ದಾರೆ. ಮೊಮೊಟಾ ಕಳೆದ ಋತುವಿನಲ್ಲಿ ಐದು ಬಾರಿ ಶ್ರೀಕಾಂತ್‌ರನ್ನು ಸೋಲಿಸಿದ್ದರು.
►ಸಮೀರ್, ಭಾರತದ ಜೋಡಿಗಳು ಪರಾಭವ
ಮತ್ತೊಂದೆಡೆ ಭಾರತದ ಪ್ರಮುಖ ಆಟಗಾರ ಸಮೀರ್ ವರ್ಮಾ ಮೊದಲ ಗೇಮ್ ಗೆಲುವಿನ ಲಾಭ ಪಡೆಯದೆ ಮಾಜಿ ವಿಶ್ವ ಚಾಂಪಿಯನ್ ಹಾಗೂ ವಿಶ್ವ ನಂ.1 ಆಟಗಾರ ಡೆನ್ಮಾರ್ಕ್‌ನ ವಿಕ್ಟರ್ ಎಕ್ಸೆಲ್ಸನ್ ವಿರುದ್ಧ 21-16, 18-21, 14-21 ಅಂತರದಲ್ಲಿ ನಿರಾಶೆ ಅನುಭವಿಸಿದರು. ಆ ಮೂಲಕ ಟೂರ್ನಿಯಿಂದ ಹೊರಬಿದ್ದರು. ಮಹಿಳಾ ಡಬಲ್ಸ್ ನಲ್ಲಿ ಭಾರತದ ಅಶ್ವಿನಿ ಪೊನ್ನಪ್ಪ ಹಾಗೂ ಎನ್. ಸಿಕ್ಕಿ ರೆಡ್ಡಿ ಮ್ಯಾರಥಾನ್ ಪಂದ್ಯದಲ್ಲಿ ಜಪಾನ್‌ನ ಏಳನೇ ಶ್ರೇಯಾಂಕದ ಜೋಡಿ ಶಿಹೊ ತಾನಕ ಹಾಗೂ ಕೊಹರು ಯೊನೆಮೊಟೊ ವಿರುದ್ಧ 21-16, 26-18, 16-21 ಗೇಮ್‌ಗಳಿಂದ ಸೋಲು ಅನುಭವಿಸಿದರು.
ಮಿಶ್ರ ಡಬಲ್್ಸ: ಮಿಶ್ರ ಡಬಲ್ಸ್ ವಿಭಾಗದಲ್ಲೂ ಭಾರತಕ್ಕೆ ನಿರಾಶೆಯೇ ಕಾಡಿತು. ಸಿಕ್ಕಿ ಹಾಗೂ ಪ್ರಣವ್ ಜೆರ್ರಿ ಚೋಪ್ರಾ ಜೋಡಿಯು ಹಾಂಕಾಂಗ್‌ನ ಚಾಂಗ್ ತಾಕ್ ಚಿಂಗ್ ಹಾಗೂ ಎನ್‌ಜಿ ವಿಂಗ್ ಯುಂಗ್ ವಿರುದ್ಧ 21-23, 17-21 ಗೇಮ್‌ಗಳಿಂದ ಮಣಿಯಿತು.
ಪುರುಷರ ಡಬಲ್್ಸ: ಪುರುಷರ ಡಬಲ್ಸ್ ನಲ್ಲೂ ಭಾರತ ಸೋಲು ಕಂಡಿದೆ. ಮನು ಅತ್ರಿ ಹಾಗೂ ಬಿ. ಸುಮಿತ್ ಜೋಡಿಯು 19-21, 21-16, 14-21ರಿಂದ ಚೀನಾದ ಕ್ಷುನ್ಯಿ ಮತ್ತು ರೆನ್ ಕ್ಸಿಯಾಂಗ್ಯು ಜೋಡಿಯ ವಿರುದ್ಧ ಸೋಲೊಪ್ಪಿಕೊಂಡಿತು.
►ಆರು ಬಾರಿಯ ಚಾಂಪಿಯನ್ ಲಿನ್ ಡಾನ್ ಹೊರಕ್ಕೆ
ಚೀನಾದ ಬ್ಯಾಡ್ಮಿಂಟನ್ ಸೂಪರ್‌ಸ್ಟಾರ್ ಲಿನ್ ಡಾನ್ ಬುಧವಾರ ರಾತ್ರಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ಆಘಾತಕಾರಿ ಸೋಲುಂಡು ಟೂರ್ನಿಯಿಂದ ಹೊರ ನಡೆದರು.
ವಿಶ್ವ ರ್ಯಾಂಕಿಂಗ್‌ನಲ್ಲಿ ಸದ್ಯ 12ನೇ ಸ್ಥಾನದಲ್ಲಿರುವ ಹಾಗೂ ಈ ಟೂರ್ನಿಯಲ್ಲಿ 6 ಬಾರಿ ಚಾಂಪಿಯನ್ ಪಟ್ಟ ಧರಿಸಿರುವ ಲಿನ್, ಜಪಾನ್‌ನ ಕಂಟಾ ತ್ಸುನೆಯಮಾ ವಿರುದ್ಧ 21-19, 14-21, 7 -21 ಗೇಮ್‌ಗಳಿಂದ ಆಘಾತ ಅನುಭವಿಸಿದರು.
ಪಂದ್ಯದ ನಂತರ ಪ್ರತಿಕ್ರಿಯಿಸಿದ 35 ವರ್ಷದ ‘ಸೂಪರ್ ಡಾನ್’ ಎಂದು ಹೆಸರಾದ ಲಿನ್, ಏಕಾಗ್ರತೆಯನ್ನು ಹಿಡಿದಿಡಲಾಗಲಿಲ್ಲ ಎಂದರು. ಪ್ರೇಕ್ಷಕರ ಭಾರೀ ಗದ್ದಲದ ನಡುವೆ ವಿಶ್ವದ ಮಹಾನ್ ಆಟಗಾರ ಲಿನ್ ಎದುರು ಮೊದಲ ಗೇಮ್‌ನಲ್ಲಿ ಹಿನ್ನಡೆ ಅನುಭವಿಸಿದ ಜಪಾನ್ ತ್ಸುನೆಯಮಾ ಸತತ ಎರಡು ಗೇಮ್‌ಗಳಲ್ಲಿ ಗೆದ್ದು ಪಾರಮ್ಯ ಮೆರೆದರು.
ಎರಡನೇ ಗೇಮ್‌ನಲ್ಲಿ ಸತತ 5 ಪಾಯಿಂಟ್ ಗಳಿಸಿದ ತ್ಸುನೆಯಮಾ ಆಟಕ್ಕೆ ವೇಗ ನೀಡಿದರೆ, ನಿರ್ಣಾಯಕ ಗೇಮ್‌ನಲ್ಲಿ ಲಿನ್ ಜಪಾನ್ ಆಟಗಾರನ ಹತ್ತಿರಕ್ಕೂ ಸುಳಿಯಲಿಲ್ಲ.
ಮತ್ತೊಂದು ದೈತ್ಯ ಸಂಹಾರ ಪಂದ್ಯದಲ್ಲಿ ಸದ್ಯ ಒಲಿಂಪಿಕ್ ಚಾಂಪಿಯನ್ ಹಾಗೂ ಎರಡು ಬಾರಿಯ ಆಲ್ ಇಂಗ್ಲೆಂಡ್ ಚಾಂಪಿಯನ್ ಆಗಿರುವ 4ನೇ ಶ್ರೇಯಾಂಕದ ಚೆನ್ ಲಾಂಗ್ ಅವರು ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ವಿರುದ್ಧ ಸೋಲು ಅನುಭವಿಸಿದರು.