ಅಝರೆಂಕಾ-ಸೆರೆನಾ ಮುಖಾಮುಖಿ
ಇಂಡಿಯನ್ ವೆಲ್ಸ್(ಕ್ಯಾಲಿಪೋರ್ನಿಯ), ಮಾ.7: ಎರಡು ಬಾರಿಯ ಇಂಡಿಯನ್ ವೆಲ್ಸ್ ಟೆನಿಸ್ ಟೂರ್ನಿಯ ಚಾಂಪಿಯನ್ ಬೆಲಾರಸ್‌ನ ವಿಕ್ಟೋರಿಯ ಅಝರೆಂಕಾ ಬುಧವಾರ ರಾತ್ರಿ ನಡೆದ ಇಂಡಿಯನ್ ವೆಲ್ಸ್ ಟೂರ್ನಿಯ ಪ್ರಥಮ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ವೆರಾ ಲಾಪ್ಕೊ ಅವರನ್ನು 6-2, 6-3 ಸೆಟ್‌ಗಳಿಂದ ಮಣಿಸಿದ್ದಾರೆ. ಆ ಮೂಲಕ ತಮ್ಮ ಬದ್ಧ ಎದುರಾಳಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಲಿದ್ದಾರೆ.
ಮಾಜಿ ವಿಶ್ವ ನಂ.1 ಆಟಗಾ ರ್ತಿಯಾಗಿರುವ ಅಝರೆಂಕಾ ಸದ್ಯ ರ್ಯಾಂಕಿಂಗ್‌ನಲ್ಲಿ 48ನೇ ಸ್ಥಾನದಲ್ಲಿದ್ದಾರೆ.
ಸೆರನಾ ವಿರುದ್ಧ ನಡೆದ 21 ಪಂದ್ಯಗಳಲ್ಲಿ ಅಝರೆಂಕಾ 17 ಪಂದ್ಯಗಳಲ್ಲಿ ಸೋತಿದ್ದರೂ 2016ರ ಇಂಡಿಯನ್ ವೆಲ್ಸ್ ಓಪನ್ ಫೈನಲ್ ಪಂದ್ಯದಲ್ಲಿ ಸೆರೆನಾರನ್ನು ಸೋಲಿಸಿ ಆತ್ಮವಿಶ್ವಾಸದಿಂದಿದ್ದಾರೆ.
ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನಲ್ಲಿ ಕೆನಡಾದ ಬಿಯಾಂಕಾ ಆ್ಯಂಡ್ರಿಸ್ಕೂ ಅವರು ರೊಮಾನಿಯದ ಇರಿನಾ ಕ್ಯಾಮೆಲಿಯ ಬೆಗು ಅವರನ್ನು 6-7(3/7), 6-3, 6-3ರಿಂದ ಮಣಿಸಿ ಎರಡನೇ ಸುತ್ತಿಗೆ ಕಾಲಿಟ್ಟರು. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ಅನ್ಸಿಮೊವಾ 6-0, 6-4 ಸೆಟ್‌ಗಳಿಂದ ಸರ್ಬಿಯದ ಅಲೆಕ್ಸಾಂಡ್ರಾ ಕ್ರುನಿಕ್ ಅವರನ್ನು ಸೋಲಿಸಿದರು.