ಆಕೆ ‘ಸರಸಿ’ಯಾಗಲು ಬಂದಿಲ್ಲ...

Update: 2019-03-08 08:39 GMT

 ‘‘ಸಿನೆಮಾ ನಟಿಯರ ಮೀಟೂಗೆ ಎಷ್ಟೆಲ್ಲಾ ಪ್ರಚಾರ, ಸಹಾನುಭೂತಿ ಸಿಕ್ಕಿತು. ನಮ್ಮನ್ನು ಕೇಳೋರ್ಯಾರು?’’ ಇದು ನನ್ನ ಪರಿಚಯದ ಕೇರಳಮೂಲದ ನರ್ಸ್ ಒಬ್ಬರ ದೂರು. ಅವರು ಖಾಸಗಿ ಆಸ್ಪತ್ರೆಯಲ್ಲಿ ದುಡಿಯುತ್ತಾರೆ.

‘‘ಸಿನೆಮಾ ನಟಿಯರು ಅತ್ಯಲ್ಪಕಾಲದಲ್ಲಿ ಲಕ್ಷ ಲಕ್ಷ ಹಣ ನೋಡುತ್ತಾರೆ. ಇವತ್ತು ತನುಶ್ರೀ ಸಿನೆಮಾ- ಭಾರತ ಎರಡನ್ನೂ ಬಿಟ್ಟುಹೋದರು. ಶ್ರುತಿಗೂ ಅದು ಸಾಧ್ಯವಿದೆ. ಆದರೆ ನನ್ನಂಥವರು ಕೆಲಸ ಬಿಟ್ಟು ಹೋಗೋದೆಲ್ಲಿಗೆ? ಮನೆಯವರ ಬಳಿ ಹೇಳಿಕೊಂಡರೆ ‘‘ಕೆಲಸ ಬಿಡು, ಇಲ್ಲಾ ಹೇಗಾದರೂ ಅಡ್ಜಸ್ಟ್ ಮಾಡಿಕೊಂಡು ಹೋಗು’’ ಅಂತಾರೆ. ಮಾಧ್ಯಮಗಳು ಯಾವತ್ತೂ ಗಂಡಸರ ಅದರಲ್ಲೂ ಶ್ರೀಮಂತರ ಪರ’’ ಎಂದು ನೊಂದು ಹೇಳಿದ ಆ ಹುಡುಗಿ ‘‘ಇಲ್ಲಿ ರೋಗಿಗಳ ಸೇವೆ, ಮನೆಯಲ್ಲಿ ರೋಗ ಇಲ್ಲದವರ ಸೇವೆ ಮಾಡುತ್ತಾ ಸವೆದು ಹೋಗಿದ್ದೇವೆ. ನಾವು ಹೇಗೆ ಕಾಣ್ತೇವೆ ಇವರಿಗೆ?’’ ಎಂದು ಸಂಕಟ ಕಕ್ಕಿಕೊಂಡರು.

ಆಕೆ ಹೇಳಿದ ‘ಇವರು’ ಎಂಬುದು ರೋಗಿಗಳ ಕಡೆಯವರಿಗೆ, ವೈದ್ಯರಿಗೆ ಆಸ್ಪತ್ರೆ ಆಡಳಿತ ವರ್ಗದ ಕೆಲವರು, ಅಷ್ಟೇಕೆ ಕೆಲವು ಸಲ ರೋಗಿಗಳಿಗೂ ಅನ್ವಯಿಸುತ್ತದೆ. ಅನೇಕ ಮಹಿಳಾ ವೈದ್ಯೆಯರೂ ನರ್ಸ್‌ಗಳನ್ನು ಕಸದಂತೆ ಕಾಣುತ್ತಾರೆ ಮತ್ತು ರೋಗಿ ಕಡೆಯ ಮಹಿಳೆಯರು ಕೂಡಾ ಅವರು ನಮ್ಮಂತಲ್ಲ ಎಂಬ ಪ್ರತ್ಯೇಕ ದೃಷ್ಟಿ ಕೋನದಿಂದ ಕಾಣುತ್ತಾರೆ ಎಂದು ಆಕೆಯ ಸಹೋದ್ಯೋಗಿಯೂ ದನಿಗೂಡಿಸಿದಳು.

ಸ್ಥಳೀಯ ನರ್ಸ್‌ಗಳ ಬಗ್ಗೆ ತುಸು ಹಿಂಜರಿಕೆ ಇದೆ. ನಮ್ಮದೇ ನೆಲದ ಹೆಣ್ಣುಮಕ್ಕಳು ಎಂಬ ಅಭಿಮಾನ ಅಲ್ಲ ಅದು. ಅವರ ಕುಟುಂಬ, ಬಂಧುಗಳು ಇಲ್ಲೇ ಇರುವುದರಿಂದ ದೂರು ಹೇಳಿ ಕರೆತಂದರೆ ಅಚ್ಚಗನ್ನಡದಲ್ಲಿ ಬೈದು ಜನ್ಮ ಜಾಲಾಡಿದರೆ ಏನುಗತಿ ಎಂಬ ಭಯ ಒಂಚೂರು ಮೆತ್ತಿಕೊಂಡಿದೆ. ಬೇರೆ ರಾಜ್ಯದವರಾದರೆ ಕೇಳುವವರೇ ಇಲ್ಲ.

 ಇಷ್ಟಕ್ಕೂ ಬೇರೆಕಡೆಯ ನರ್ಸ್‌ಗಳೆಲ್ಲಾ ಮೋಹಿನಿಯರಲ್ಲ. ಚೆಲ್ಲು ಚೆಲ್ಲಾಗಿ ಆಡೋದೊ ಇಲ್ಲ. ಹಾಗಿದ್ದರೂ ಆಸ್ಪತ್ರೆಗೆ ಬಂದ ಬಹಳಷ್ಟು ಗಂಡಸರು ಅವರನ್ನು ಹಸಿದ ತೋಳಗಳಂತೆ ಗುರಾಯಿಸುವುದು, ದ್ವಂದ್ವಾರ್ಥದ ಮಾತುಗಳು, ನಗು, ಅನಪೇಕ್ಷಿತ ಸ್ಪರ್ಶಗಳಿಂದ ಗೋಳು ಹುಯ್ದುಕೊಳ್ಳುವುದು ಸರ್ವೇಸಾಮಾನ್ಯ. 

ಆದರೆ ನನ್ನ ಪರಿಚಯದ ಇಬ್ಬರು ಯುವ ನರ್ಸ್‌ಗಳಂತೆ ಎಲ್ಲರೂ ಬಾಯ್ಬಿಡುವುದಿಲ್ಲ. ‘‘ಅಂತದೇನೂ ಇಲ್ಲ. ನಾವು ಸರಿಯಾಗಿದ್ರೆ ಆಯ್ತು’’ ಎಂದು ಮೌನವಾಗುತ್ತಾರೆ. ದೌರ್ಭಾಗ್ಯವೆಂದರೆ ಕೆಲವು ಸ್ಥಳೀಯ ಸಿಸ್ಟರ್‌ಗಳು ಸಹ ಬೇರೆ ರಾಜ್ಯದಿಂದ ಬಂದವರನ್ನು ನಿರಾಧಾರವಾಗಿ ‘ಅವರು ಸ್ವಲ್ಪ ಹಂಗಂಗೇ’ ಎಂದು ತೀರ್ಮಾನಿಸುವುದುಂಟು.

ಇದು ದಶಕಗಳಿಂದ ಚಾಲ್ತಿಯಲ್ಲಿರುವ ಹೀನ ಚಾಳಿ. ಕನ್ನಡದ ಅನೇಕ ಕಾದಂಬರಿಕಾರರು ಸಿನೆಮಾ ನಿರ್ದೇಶಕರು ನರ್ಸ್ ಎಂದರೆ ಚೆಲ್ಲು ಸ್ವಭಾವದ ಅಷ್ಟೇನೂ ಮಡಿವಂತಿಕೆ ಇಲ್ಲದವರು ಎಂಬಂತೆ ಚಿತ್ರಿಸುತ್ತಾ ಬಂದಿದ್ದಾರೆ. ಒಂದು ಕಾಲದಲ್ಲಿ ನರ್ಸ್ ಆಗುವುದಕ್ಕೆ ಸಿನೆಮಾ ನಟಿಯರಾಗುವುದಕ್ಕೆ ಇದ್ದಷ್ಟೇ ವಿರೋಧ ಇತ್ತು. ಮೇಲ್ಜಾತಿಯ ನರ್ಸ್‌ಗಳು ಕೆಳಜಾತಿ ರೋಗಿಗಳನ್ನು ಮುಟ್ಟಬೇಕಲ್ಲ! ಅದೇ ವೈದ್ಯರಾದರೆ ಅಂತಸ್ತು ಸಂಪಾದನೆಗಳಿಂದ ಅವರ ಖದರ್ರೇ ಬೇರೆಯಷ್ಟೆ!.

ನರ್ಸ್ ವೃತ್ತಿ, ವೈದ್ಯರ ವೃತ್ತಿಯಷ್ಟೇ ಪಾವಿತ್ರ ಘನತೆಗಳಿಂದ ಕೂಡಿರುವುದು. ಯುದ್ಧ ಕೈದಿಗಳಿಗಾಗಿ ನರಳುತ್ತಿದ್ದವರ ಸೇವೆಗೆ ಪ್ರಾಣಪಣವಾಗಿಟ್ಟು ದುಡಿದ ದೀಪದ ಮಹಿಳೆ ಫ್ಲಾರೆನ್ಸ್ ನೈಟಿಂಗೇಲ್ ಜಗತ್ತಿಗೇ ಪ್ರೇಮದ ಬೆಳಕು ಚೆಲ್ಲಿದವರು. ಹಾಗಂತ ನರ್ಸ್‌ಗಳೆಲ್ಲಾ ಪ್ರೇಮ ಸ್ವರೂಪಿಗಳಲ್ಲ. ಬಹಳಷ್ಟು ನರ್ಸ್‌ಗಳು ಬಡರೋಗಿಗಳನ್ನು ಉಪಚರಿಸುವಾಗ ಸಿಡಿದು ಬೀಳುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಮೇಲ್ ಫೀಮೇಲ್ ನರ್ಸ್‌ಗಳ ಬ್ಲಾಕ್‌ಮೇಲ್ ಅನುಭವ ಇಲ್ಲದ ರೋಗಿಗಳು ಇರಲಾರರು. ಹೆರಿಗೆ ನೋವಿನಿಂದ ನರಳುತ್ತಿದ್ದ ಬಡಗರ್ಭಿಣಿಯರನ್ನೂ ಗದರಿಸುವ ತಾಟಕಿ ನರ್ಸ್‌ಗಳನ್ನು ಚಿಕ್ಕಂದಿನಲ್ಲಿ ನಾನು ಕಣ್ಣಾರೆ ಕಂಡಿದ್ದೇನೆ. ಮನೆ ಒಳಗಿನ ಹೊರಗಿನ ಜಂಜಾಟ ಅವರನ್ನು ಒರಟಾಗಿಸುತ್ತದೆ.

ನರ್ಸ್‌ಗಳಲ್ಲಿ ಯಾರೂ ಪ್ರಚೋದಕ ಉಡುಗೆ ಧರಿಸುವುದಿಲ್ಲ. ಅವರು ಆಸ್ಪತ್ರೆಗೆ ಕಂಡ ಕಂಡವರೊಂದಿಗೆ ಸರಸವಾಡಲು ಬರುವುದಿಲ್ಲ. ಅನ್ಯಾಯದ ವಿರುದ್ಧ ದನಿ ಎತ್ತಿದ ಅರುಣಾ ಶಾನ್‌ಭಾಗ್‌ರಿಗೆ ಯಾವ ಗತಿ ಬಂತೆಂಬುದನ್ನು ದೇಶ ಕಂಡಿದೆ. ನರ್ಸ್‌ಗಳು ತಮ್ಮನ್ನು ‘ಸುಲಭದ ತುತ್ತು’ಗಳಂತೆ ಕಾಣುವ ರೋಗಿ, ವೈದ್ಯ, ಸಿಬ್ಬಂದಿ ಯಾರೇ ಆಗಿದ್ದರೂ ಅವರಿಗೆ ಸೂಕ್ತ ಉಪಚಾರ ನೀಡುವ ಧೈರ್ಯ ಬೆಳಸಿಕೊಳ್ಳಬೇಕು.

ಆಸ್ಪತ್ರೆ ಸಿನೆಮಾ ಥಿಯೇಟರ್ ಅಲ್ಲ. ಸಾವು ಬದುಕುಗಳ ರಣರಂಗ, ಇಲ್ಲಿ ವೈದ್ಯರ ಅಂತಸ್ತಿಗೆ ಮಾತ್ರ ಬೆಲೆ ಕೊಡುತ್ತಾ, ನರ್ಸ್‌ಗಳನ್ನು ಬೆಲೆವೆಣ್ಣಿನಂತೆ ಕಾಣುವ ರೋಗಕ್ಕೆ ನರ್ಸ್‌ಗಳು ಸಂಘಟಿತರಾಗಿ ಕಾನೂನಿನ ಅಸ್ತ್ರ ಹಿಡಿದು ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದೆ. ಮಹಿಳಾ ವೈದ್ಯೆಯರು ಅವರಿಗೆ ಒತ್ತಾಸೆಯಾಗಿ ನಿಲ್ಲಬೇಕು.

ಹಾಗೆಯೇ ನರ್ಸಮ್ಮಗಳು ನಮ್ಮಂಥ ವಯಸ್ಸಾದ ಕೆಳವರ್ಗದ ಮಹಿಳೆಯರು ಆಸ್ಪತ್ರೆಗೆ ಹೋದಾಗ ಕನಿಷ್ಠ ಮಾನವತ್ವದಿಂದ ನಡೆದುಕೊಳ್ಳುವಷ್ಟು ಸಹನಶೀಲೆಯರಾಗಲಿ.

Writer - ಕಸ್ತೂರಿ

contributor

Editor - ಕಸ್ತೂರಿ

contributor

Similar News