ಯೋಧರ ಫೋಟೊ, ಸಮವಸ್ತ್ರ ಧರಿಸಿ ರಾಜಕೀಯ ಲಾಭ ಪಡೆಯುತ್ತಿರುವುದನ್ನು ತಡೆಯಿರಿ

Update: 2019-03-08 11:45 GMT

ಹೊಸದಿಲ್ಲಿ, ಮಾ.8: ಇತ್ತೀಚೆಗೆ ಪಾಕಿಸ್ತಾನದಲ್ಲಿನ ಉಗ್ರ ನೆಲೆಯ ಮೇಲೆ ನಡೆಸಿದ ವಾಯುದಾಳಿಯನ್ನು ರಾಜಕೀಯ ಉದ್ದೇಶಗಳಿಗಾಗಿ ದುರ್ಬಳಕೆ ಮಾಡುವುದನ್ನು ತಡೆಯಬೇಕೆಂದು ನೌಕಾಪಡೆಯ ಮಾಜಿ ಮುಖ್ಯಸ್ಥ ಅಡ್ಮಿರಲ್ ಎಲ್. ರಾಮದಾಸ್ ಚುನಾವಣಾ ಆಯೋಗಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ.

ತಾವು ಇತರ ಮಾಜಿ ಸೇನಾಧಿಕಾರಿಗಳ ಪರವಾಗಿ ಬರೆಯುತ್ತಿರುವುದಾಗಿ ಹೇಳಿರುವ ರಾಮದಾಸ್ ವಾಯುದಾಳಿಯ ಹಿನ್ನೆಲೆಯಲ್ಲಿ ಜನರನ್ನು ರಾಷ್ಟ್ರಭಕ್ತಿಯ ಹೆಸರಿನಲ್ಲಿ ಬಡಿದೆಬ್ಬಿಸಿ ಅವರ ಮೇಲೆ ಪ್ರಭಾವ ಬೀರುವ ಯತ್ನಗಳನ್ನು ತಡೆಯಬೇಕು ಎಂದು ಕೋರಿದ್ದಾರೆ.

ಪುಲ್ವಾಮ ಉಗ್ರ ದಾಳಿ ಹಾಗೂ ನಂತರ ಭಾರತ ನಡೆಸಿದ ವಾಯುದಾಳಿ ಮತ್ತು ಭಾರತೀಯ ಪೈಲಟ್ ಒಬ್ಬರ ಸೆರೆ ಮತ್ತು ಬಿಡುಗಡೆ ವಿಚಾರಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿರುವುದರ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

``ಕೆಲ ಪಕ್ಷಗಳು ಸೇನಾ ಪಡೆಯ ಚಿತ್ರಗಳು, ಸಮವಸ್ತ್ರಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಚುನಾವಣಾ ರ್ಯಾಲಿಗಳಲ್ಲಿಯೂ ಪ್ರದರ್ಶಿಸಿ ಲಾಭ ಗಿಟ್ಟಿಸಲು ಬಹಿರಂಗವಾಗಿ ಯತ್ನಿಸುತ್ತಿವೆ. ಇದು ಅಸ್ವೀಕಾರಾರ್ಹ. ಇದು ನಮ್ಮ ಸೇನಾ ಪಡೆಗಳ ಬುನಾದಿಯನ್ನೇ ನಾಶಪಡಿಸುವ ಅಪಾಯ ಹೊಂದಿದೆ. ಚುನಾವಣಾ ಆಯೋಗ ತಕ್ಷಣ ಮಧ್ಯ ಪ್ರವೇಶಿಸಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಬೇಕು,'' ಎಂದು ಅವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News