ಕಾಶ್ಮೀರ ವಿರೋಧಿ ಟ್ವೀಟ್: ಮೇಘಾಲಯ ರಾಜ್ಯಪಾಲರ ಭಾಷಣಕ್ಕೆ ಬಹಿಷ್ಕಾರ

Update: 2019-03-08 18:07 GMT

ಗುವಾಹಟಿ, ಮಾ.8: ಮೇಘಾಲಯ ವಿಧಾನಸಭೆಯ ಬಜೆಟ್ ಅಧಿವೇಶನದ ಪ್ರಥಮ ದಿನವಾದ ಶುಕ್ರವಾರ ರಾಜ್ಯಪಾಲರ ಭಾಷಣಕ್ಕೆ ವಿಪಕ್ಷಗಳು ಬಹಿಷ್ಕಾರ ಹಾಕಿದ ಘಟನೆ ನಡೆದಿದೆ.

ಪುಲ್ವಾಮಾದಲ್ಲಿ ಯೋಧರ ಮೇಲೆ ಉಗ್ರರ ಆತ್ಮಾಹುತಿ ದಾಳಿ ನಡೆದ ಬಳಿಕ, ಟ್ವೀಟ್ ಮಾಡಿದ್ದ ಮೇಘಾಲಯದ ರಾಜ್ಯಪಾಲ ತಥಾಗತ ರಾಯ್, ಕಾಶ್ಮೀರದ ಜನರಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತದ ಸೇನಾಪಡೆಯ ನಿವೃತ್ತ ಅಧಿಕಾರಿಯ ವಿನಂತಿ ಏನೆಂದರೆ- ಕಾಶ್ಮೀರಕ್ಕೆ ಭೇಟಿ ನೀಡಬೇಡಿ, ಮುಂದಿನ 2 ವರ್ಷ ಅಮರನಾಥ ಯಾತ್ರೆಯನ್ನೂ ಕೈಗೊಳ್ಳಬೇಡಿ, ಪ್ರತೀ ಚಳಿಗಾಲದಲ್ಲಿ ಆಗಮಿಸುವ ಕಾಶ್ಮೀರದ ವ್ಯಾಪಾರಿಗಳ ಉತ್ಪನ್ನವನ್ನು ಖರೀದಿಸಬೇಡಿ, ಕಾಶ್ಮೀರಕ್ಕೆ ಸಂಬಂಧಿಸಿದ ಎಲ್ಲವನ್ನೂ ಬಹಿಷ್ಕರಿಸಿ ಎಂದು ಅವರು ಟ್ವೀಟ್ ಮಾಡಿದ್ದರು.

ಈ ಟ್ವೀಟ್‌ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು ತಥಾಗತರನ್ನು ರಾಜ್ಯಪಾಲರ ಹುದ್ದೆಯಿಂದ ವಜಾಗೊಳಿಸುವಂತೆ ವಿಪಕ್ಷಗಳು ಆಗ್ರಹಿಸಿದ್ದವು.ಅಲ್ಲದೆ ಬಿಜೆಪಿಯ ಮಿತ್ರಪಕ್ಷಗಳೂ ರಾಜ್ಯಪಾಲರ ವಜಾಕ್ಕೆ ಒತ್ತಾಯಿಸಿದ್ದವು. ಈ ಹಿನ್ನೆಲೆಯಲ್ಲಿ , ರಾಜ್ಯಪಾಲರ ಬಜೆಟ್ ಭಾಷಣವನ್ನು ಬಹಿಷ್ಕರಿಸುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಇದರಂತೆ ರಾಜ್ಯಪಾಲರ ಭಾಷಣವನ್ನು ವಿಪಕ್ಷಗಳು ಬಹಿಷ್ಕರಿಸಿದ್ದವು. ಬಜೆಟ್ ಭಾಷಣದಲ್ಲಿ ರಾಜ್ಯಪಾಲರು ರಾಜ್ಯದ ಕೊನ್ರಾಡ್ ಸಂಗ್ಮಾ ಸರಕಾರ ಜನತೆಯ ಜೀವನಮಟ್ಟ ಸುಧಾರಿಸಲು ನಿಶ್ಚಿತ ಮತ್ತು ವಾಸ್ತವಿಕ ಕಾರ್ಯಕ್ರಮ ರೂಪಿಸಿದ್ದು ಉತ್ತಮ ಆಡಳಿತ ನೀಡುತ್ತಿದೆ ಎಂದು ಶ್ಲಾಘಿಸಿದರು.

ರಾಜ್ಯಪಾಲರ ಬಜೆಟ್ ಭಾಷಣದ ಮೇಲೆ ವಿಪಕ್ಷ ಕಾಂಗ್ರೆಸ್‌ನ ಬಹಿಷ್ಕಾರದ ಕರಿನೆರಳು ವ್ಯಾಪಿಸಿತ್ತು ಎಂದು ವಿಪಕ್ಷದ ಮುಖಂಡ, ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಟ್ವೀಟ್ ಮಾಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News