ನಮಗೆ ಮೈತ್ರಿ ಕೂಟದ ಗೆಲುವು ಮುಖ್ಯವೇ ಹೊರತು ಸೀಟಲ್ಲ: ಕುಮಾರಸ್ವಾಮಿ

Update: 2019-03-08 18:09 GMT

ಹೊಸದಿಲ್ಲಿ, ಮಾ.8: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಸರಕಾರ ಗರಿಷ್ಟ ಸಂಖ್ಯೆಯ ಸ್ಥಾನ ಗೆಲ್ಲುವುದಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಜೆಡಿಎಸ್‌ಗೆ ಎಷ್ಟು ಸ್ಥಾನ ಸಿಗುತ್ತದೆ ಎಂಬುದು ಮುಖ್ಯವಲ್ಲ ಎಂದು ಕರ್ನಾಟಕದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

  ಈ ಹಿಂದೆ 12 ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದ ಜೆಡಿಎಸ್ ಇದೀಗ 8 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬುಧವಾರ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರೊಂದಿಗೆ ಜೆಡಿಎಸ್ ವರಿಷ್ಟ ದೇವೇಗೌಡರು ಮಾತುಕತೆ ನಡೆಸಿದ್ದ ಸಂದರ್ಭದಲ್ಲಿ 12 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ರಾಹುಲ್ ಗಾಂಧಿ ಗಮನ ಕೇಂದ್ರೀಕರಿಸಿದ್ದು ಜೆಡಿಎಸ್ 9 ಅಥವಾ 10 ಸ್ಥಾನಗಳನ್ನು ಪಡೆಯಬಹುದು ಎಂದು ದೇವೇಗೌಡರು ಸುದ್ದಿಗಾರರಿಗೆ ತಿಳಿಸಿದ್ದರು.

ಕರ್ನಾಟಕದಲ್ಲಿ ಈಗ ಎಷ್ಟು ಸಂಖ್ಯೆಯ ಸ್ಥಾನ ಯಾವ ಪಕ್ಷಕ್ಕೆ ಎಂಬುದು ಸಮಸ್ಯೆಯಾಗಿ ಉಳಿದಿಲ್ಲ. ಆದರೆ ಮೈಸೂರು, ತುಮಕೂರು, ಚಿತ್ರದುರ್ಗದ ಲೋಕಸಭಾ ಸ್ಥಾನ ಯಾವ ಪಕ್ಷಕ್ಕೆ ಎಂಬುದು ಇನ್ನೂ ಕಗ್ಗಂಟಾಗಿಯೇ ಉಳಿದಿದೆ. ಇದೀಗ ಬುಧವಾರ ನಡೆದ ರಾಹುಲ್- ದೇವೇಗೌಡ ಮಾತುಕತೆ ಬಳಿಕ , ಒಂದು ನಿರ್ಧಾರಕ್ಕೆ ಬರಲಾಗಿದ್ದು ಉಭಯ ಪಕ್ಷಗಳ ಪ್ರಧಾನ ಕಾರ್ಯದರ್ಶಿಗಳು ಚರ್ಚಿಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬರುವುದೆಂದು ನಿರ್ಧರಿಸಲಾಗಿದೆ. ಈ ಮಧ್ಯೆ, ದೇವೇಗೌಡರು ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News