ರಾಜ್ಯ ಸರಕಾರದ ಸುದ್ದಿ, ಜಾಹೀರಾತುಗಳಿಗೆ 3 ದಿನ ಬಹಿಷ್ಕಾರ : ಅಸ್ಸಾಂ ದಿನಪತ್ರಿಕೆಗಳ ನಿರ್ಧಾರ

Update: 2019-03-09 18:02 GMT

ಗುವಾಹಟಿ, ಮಾ.9: ಮಾಧ್ಯಮ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರ ಅಸಡ್ಡೆ ತೋರುತ್ತಿದೆ ಎಂದು ಆರೋಪಿಸಿರುವ ಅಸ್ಸಾಂನ ದಿನಪತ್ರಿಕೆಗಳು, ಮಾರ್ಚ್ 10ರಿಂದ ಮೂರು ದಿನ ರಾಜ್ಯ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ, ಜಾಹೀರಾತು ಅಥವಾ ಛಾಯಾಚಿತ್ರಗಳನ್ನು ಬಹಿಷ್ಕರಿಸುವುದಾಗಿ ಘೋಷಿಸಿವೆ.

ಶುಕ್ರವಾರ ಗುವಾಹಟಿಯಲ್ಲಿ ನಡೆದ ಈಶಾನ್ಯ ದಿನಪತ್ರಿಕೆಗಳ ಸಂಘದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ನ್ಯೂಸ್‌ಪ್ರಿಂಟ್, ಪ್ರಿಂಟಿಂಗ್ ವಸ್ತುಗಳು ಹಾಗೂ ಸಾಗಾಟ ವೆಚ್ಚದಲ್ಲಿ ಭಾರೀ ಹೆಚ್ಚಳವಾಗಿದ್ದರೂ ಸರಕಾರವು 2014ರಿಂದ ಜಾಹೀರಾತು ದರವನ್ನು ಪರಿಷ್ಕರಿಸಿಲ್ಲ ಎಂದು ಸಂಘ ಆರೋಪಿಸಿದೆ. ಕಳೆದ ವರ್ಷ ಸಂಘದೊಂದಿಗೆ ನಡೆಸಿದ್ದ ಸಭೆಯಲ್ಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಪಾವತಿ ಪ್ರಕ್ರಿಯೆಯನ್ನು ಕೇಂದ್ರೀಕೃತಗೊಳಿಸುವ ಹಾಗೂ 60 ದಿನದೊಳಗೆ ಎಲ್ಲಾ ಬಾಕಿ, ಜಾಹೀರಾತು ಹಣ ಪಾವತಿ ಮಾಡುವ ಭರವಸೆ ನೀಡಿದ್ದರು. ಅಲ್ಲದೆ ಜಾಹೀರಾತು ದರವನ್ನು ಪ್ರತೀ ವರ್ಷ ಪರಿಷ್ಕರಿಸುವ ಭರವಸೆ ನೀಡಿದ್ದರು. ಈ ಕುರಿತು ಗುವಾಹಟಿ ಹೈಕೋರ್ಟ್ ಕೂಡಾ ಆದೇಶ ನೀಡಿತ್ತು.

ಆದರೆ ಇದನ್ನು ಇದುವರೆಗೆ ಅನುಷ್ಠಾನಗೊಳಿಸಿಲ್ಲ ಎಂದು ಸಂಘ ತಿಳಿಸಿದೆ. ಆದ್ದರಿಂದ ಬಹಿಷ್ಕಾರಕ್ಕೆ ಕರೆ ನೀಡುವ ಹೊರತು ಬೇರೆ ಆಯ್ಕೆಗಳಿಲ್ಲ. ಇನ್ನೂ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸುದ್ದಿಸಂಸ್ಥೆಗಳು ಇನ್ನಷ್ಟು ಕಠಿಣ ಪ್ರತಿಭಟನೆ ನಡೆಸಲಿವೆ ಎಂದು ಸಂಘ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News