ಸಶಸ್ತ್ರ ಪಡೆಗಳ ಚಿತ್ರಗಳನ್ನು ಚುನಾವಣಾ ಅಭಿಯಾನಗಳಲ್ಲಿ ಬಳಸುವುದನ್ನು ನಿಲ್ಲಿಸಿ: ಚು. ಆಯೋಗ
ಹೊಸದಿಲ್ಲಿ, ಮಾ. 9: ಮುಂದಿನ ಲೋಕಸಭಾ ಚುನಾವಣೆಗೆ ನಡೆಸುವ ಅಭಿಯಾನ ಮತ್ತು ಜಾಹೀರಾತುಗಳಲ್ಲಿ ಯಾವುದೇ ರಕ್ಷಣಾ ಪಡೆಗಳ ಸಿಬ್ಬಂದಿ ಅಥವಾ ರಕ್ಷಣಾ ಪಡೆಯ ಕಾರ್ಯಾಚರಣೆಗಳ ಚಿತ್ರಗಳನ್ನು ರಾಜಕೀಯ ಪಕ್ಷಗಳು ಬಳಸುವಂತಿಲ್ಲ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ.
ಚುನಾವಣಾ ಅಭಿಯಾನದ ಭಾಗವಾಗಿ ಭದ್ರತಾ ಪಡೆಗಳ ಸಿಬ್ಬಂದಿ ಮತ್ತು ಅವುಗಳ ಕಾರ್ಯಾಚರಣೆಯ ಭಾವಚಿತ್ರಗಳನ್ನು ರಾಜಕೀಯ ಪಕ್ಷಗಳು, ನಾಯಕರು ಮತ್ತು ಅಭ್ಯರ್ಥಿಗಳು ಬಳಸುತ್ತಿರುವುದನ್ನು ರಕ್ಷಣಾ ಸಚಿವಾಲಯ ಚುನಾವಣಾ ಆಯೋಗದ ಗಮನಕ್ಕೆ ತಂದಿದೆ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇತ್ತೀಚೆಗೆ ನಡೆದ ರ್ಯಾಲಿಯಲ್ಲಿ ಆಮ್ ಆದ್ಮಿ ಪಕ್ಷ ಭಾರತೀಯ ವಾಯುಪಡೆ ಪೈಲಟ್ ಅಭಿನಂದನ್ ವರ್ದಮಾನ್ ಅವರ ಬಗ್ಗೆ ನೇರವಾಗಿ ಹೇಳಿಕೆ ನೀಡಿತ್ತು.
ದೇಶದ ಗಡಿ, ರಕ್ಷಣೆ ಮತ್ತು ರಾಜಕೀಯ ವ್ಯವಸ್ಥೆಯ ರಕ್ಷಕರು ಎಂದು ಸಶಸ್ತ್ರ ಪಡೆಗಳನ್ನು ವ್ಯಾಖ್ಯಾನಿಸಿರುವ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಈ ಸಂಸ್ಥೆಗಳನ್ನು ಚುನಾವಣೆಯ ವೇಳೆ ದುರುಪಯೋಗಪಡಿಸಿಕೊಳ್ಳುವ ವಿರುದ್ಧ ಎಚ್ಚರಿಕೆ ನೀಡಿದೆ.