ಗರಿಷ್ಠ ಸಿಕ್ಸರ್: ಧೋನಿ ಹಿಂದಿಕ್ಕಿದ ರೋಹಿತ್

Update: 2019-03-10 19:19 GMT

ಮೊಹಾಲಿ, ಮಾ.10: ಭಾರತದ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಸಿಕ್ಸರ್ ಸಿಡಿಸಿದ ಭಾರತದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಮಾಜಿ ನಾಯಕ ಎಂ.ಎಸ್.ಧೋನಿ ದಾಖಲೆಯನ್ನು ಹಿಂದಿಕ್ಕಿದರು. 31ರ ಹರೆಯದ ರೋಹಿತ್ ಆಸೀಸ್ ವಿರುದ್ಧ ನಾಲ್ಕನೇ ಏಕದಿನ ಪಂದ್ಯದ ವೇಳೆ ಆ್ಯಡಮ್ ಝಾಂಪ ಬೌಲಿಂಗ್‌ನಲ್ಲಿ ಸಿಕ್ಸರ್ ಸಿಡಿಸುವುದರೊಂದಿಗೆ ಈ ಮೈಲುಗಲ್ಲು ತಲುಪಿದರು.

ರೋಹಿತ್ ಏಕದಿನ ಕ್ರಿಕೆಟ್‌ನಲ್ಲೀಗ ಒಟ್ಟು 218 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 217 ಸಿಕ್ಸರ್ ಸಿಡಿಸಿರುವ ಧೋನಿ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಹಾಗೂ ಧೋನಿ ಬಳಿಕ ಸಚಿನ್ ತೆಂಡುಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ 195 ಸಿಕ್ಸರ್ ಸಿಡಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಸೌರವ್ ಗಂಗುಲಿ(189) ಹಾಗೂ ಯುವರಾಜ್ ಸಿಂಗ್(153)ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.

ಮುಂಬೈ ದಾಂಡಿಗ ರೋಹಿತ್ ಮೊದಲ ಪಂದ್ಯದಲ್ಲಿ 37 ರನ್ ಗಳಿಸಿದ್ದರೆ, 2ನೇ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಮೂರನೇ ಪಂದ್ಯದಲ್ಲಿ 14 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇಂದು 40ನೇ ಅರ್ಧಶತಕ ದಾಖಲಿಸಿದರು. ತವರು ನೆಲದಲ್ಲಿ 3,000ಕ್ಕೂ ಅಧಿಕ ರನ್ ಗಳಿಸಿದ ರೋಹಿತ್, ಸಚಿನ್ ತೆಂಡುಲ್ಕರ್ ಹಾಗೂ ಧೋನಿ ಅವರನ್ನೊಳಗೊಂಡ ಇಲೈಟ್ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಈ ಮೈಲುಗಲ್ಲು ತಲುಪಿದ ಭಾರತದ 9ನೇ ದಾಂಡಿಗ ರೋಹಿತ್. ಇತರ 8 ಭಾರತೀಯ ಕ್ರಿಕೆಟಿಗರೆಂದರೆ: ತೆಂಡುಲ್ಕರ್, ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ರಾಹುಲ್ ದ್ರಾವಿಡ್, ಸೌರವ್ ಗಂಗುಲಿ, ಮುಹಮ್ಮದ್ ಅಝರುದ್ದೀನ್ ಹಾಗೂ ವೀರೇಂದ್ರ ಸೆಹ್ವಾಗ್.

ರೋಹಿತ್ ತವರು ನೆಲದಲ್ಲಿ ಅತ್ಯಂತ ವೇಗವಾಗಿ 3,000 ರನ್ ತಲುಪಿ ದ.ಆಫ್ರಿಕದ ಹಾಶಿಮ್ ಅಮ್ಲ(57 ಇನಿಂಗ್ಸ್) ಅವರೊಂದಿಗೆ ದಾಖಲೆ ಹಂಚಿಕೊಂಡರು. ವಿರಾಟ್ ಕೊಹ್ಲಿ(63 ಇನಿಂಗ್ಸ್), ಸೌರವ್ ಗಂಗುಲಿ(69)ವೇಗವಾಗಿ 3 ಸಾವಿರ ರನ್ ಗಳಿಸಿದ ಇತರ ಆಟಗಾರರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News