ಗ್ರಾಮೀಣ ಭಾರತದಲ್ಲಿ ಕಳವಳಕಾರಿ ಪರಿಸ್ಥಿತಿ: ಕೂಲಿಯಲ್ಲಿ ಭಾರೀ ಕುಸಿತ, ಕೃಷಿಯೇತರ ಉದ್ಯೋಗಗಳಿಗೆ ಹೊಡೆತ

Update: 2019-03-11 06:04 GMT

ಹೊಸದಿಲ್ಲಿ, ಮಾ.11: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಗ್ರಾಮೀಣ ವೇತನ ಶೇ 3.8ರಷ್ಟು ಏರಿಕೆ ಕಂಡಿದ್ದು, ಈ ತಿಂಗಳಿಗೆ ಇದು ಕಳೆದ ಐದು ವರ್ಷಗಳ ಸರಾಸರಿ ಆದಾಯ ಏರಿಕೆ ಪರಿಗಣಿಸಿದಾಗ ಕನಿಷ್ಠ ಏರಿಕೆಯಾಗಿದೆ. ಕೃಷಿ ಉತ್ಪನ್ನಗಳ ಕುಂಠಿತ ಬೆಲೆಗಳ ಜತೆಗೆ- ವಾರ್ಷಿಕ ಸಗಟು ಹಣದುಬ್ಬರ ಡಿಸೆಂಬರ್ ತಿಂಗಳಲ್ಲಿ ‘ಆಹಾರ’ ಕ್ಷೇತ್ರದಲ್ಲಿ ಶೇ -0.07 ಆಗಿದ್ದರೆ ‘‘ಆಹಾರೇತರ’’ ಉತ್ಪನ್ನಗಳ ಹಣದುಬ್ಬರ ಶೇ 4.45 ಆಗಿತ್ತು. ಮುಂದಿನ ಎರಡು ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆಯಲಿದ್ದು, ಈ ನಡುವೆ ಗ್ರಾಮೀಣ ಭಾಗದದಲ್ಲಿ ಸಮಸ್ಯೆಗಳು ಕೃಷಿ ಕ್ಷೇತ್ರವನ್ನೂ ದಾಟಿವೆ ಎಂಬುದನ್ನು ಈ ಮಾಹಿತಿ ಬೊಟ್ಟು ಮಾಡುತ್ತವೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವಿಶೇಷ ವರದಿ ತಿಳಿಸಿದೆ.

ಒಟ್ಟು 25 ಕೃಷಿ ಮತ್ತು ಕೃಷಿಯೇತರ ವೃತ್ತಿಗಳ ಸರಳ ಸರಾಸರಿಯ ಆಧಾರದಲ್ಲಿ ಮೂಡಿ ಬರುವ ರಾಷ್ಟ್ರೀಯ ದೈನಂದಿನ ಗ್ರಾಮೀಣ ವೇತನ ದರ ಡಿಸೆಂಬರ್ 2018ರಲ್ಲಿ ರೂ.322.62 ಆಗಿದ್ದು, ಡಿಸೆಂಬರ್ 2017ರ ಡಿಸೆಂಬರ್ ತಿಂಗಳಲ್ಲಿ ಇದ್ದ ಸರಾಸರಿ ವೇತನ ದರ ರೂ.310.69 ಆಗಿತ್ತು. ಈ ವರ್ಷಕ್ಕೆ ಹೋಲಿಸಿದಾಗ 2018 ಡಿಸೆಂಬರ್ ತಿಂಗಳಲ್ಲಿ ವೇತನ ದರ ಶೇ 3.84 ಹೆಚ್ಚಾಗಿದೆ.

ಆದರೆ ಶೇ 1.5ರಷ್ಟಿದ್ದ ವಾರ್ಷಿಕ ಗ್ರಾಮೀಣ ಗ್ರಾಹಕ ದರ ಸೂಚ್ಯಂಕವನ್ನು (ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್-ಸಿಪಿಐ) ಪರಿಗಣಿಸಿದಾಗ ವೇತನವು ವಾಸ್ತವವಾಗಿ ಕೇವಲ ಶೇ 2.3ಕ್ಕಿಂತ ಸ್ವಲ್ಪ ಹೆಚ್ಚಿಗೆ ಏರಿಕೆಯಾಗಿದೆ.

ಎನ್‌ಡಿಎ ಸರಕಾರದ ಅವಧಿಯಲ್ಲಿ ಡಿಸೆಂಬರ್ ತಿಂಗಳಲ್ಲಿ 2014-2018ರ ಅವಧಿಯಲ್ಲಿ ವಾರ್ಷಿಕ ಸರಾಸರಿ ವೇತನ ಪ್ರಗತಿ ಪ್ರಮಾಣ ಶೇ.4.7 ಆಗಿದ್ದರೂ ವಾಸ್ತವವಾಗಿ ಶೇ.4.2ರಷ್ಟು ಹಣದುಬ್ಬರವನ್ನು ಪರಿಗಣಿಸಿದಾಗ ಕೇವಲ ಶೇ 0.5ರಷ್ಟು ಏರಿಕೆಯಾಗಿದೆ.

ಯುಪಿಎ ಆಡಳಿತಾವಧಿಯಲ್ಲಿ (2009-2013) ವಾರ್ಷಿಕ ಸರಾಸರಿ ಗ್ರಾಮೀಣ ವೇತನ ಶೇ.17.8ರಷ್ಟು ಏರಿಕೆಯಾಗಿದ್ದು, ಕೃಷಿ ಕಾರ್ಮಿಕರಿಗೆ ಸಂಬಂಧಿಸಿದಂತೆ ಸಿಪಿಐ ಹಣದುಬ್ಬರ ಸರಾಸರಿ ಶೇ.11.1 ಆಗಿದ್ದು ವಾಸ್ತವಿಕ ವೇತನ ಏರಿಕೆ ವಾರ್ಷಿಕ ಶೇ,6.7 ಆಗಿತ್ತು.

ಇತರ ಎಂಟು ಪ್ರಮುಖ ಕೃಷಿ ವೃತ್ತಿಗಳಾದ ಉಳುಮೆ, ಬೀಜ ಬಿತ್ತುವಿಕೆ, ತೋಟಗಾರಿಕೆ, ಪಶು ಸಂಗೋಪನೆ, ನೀರಾವರಿ ಮುಂತಾದ ಕ್ಷೇತ್ರಗಳಲ್ಲೂ ಸರಾಸರಿ ವೇತನ ಏರಿಕೆ ಶೇ.5.14ರಷ್ಟಾಗಿದೆ ಎಂದು ಲೇಬರ್ ಬ್ಯುರೋ ಅಂಕಿಸಂಖ್ಯೆಗಳು ತಿಳಿಸುತ್ತವೆ.

ಅದೇ ಸಮಯ ಕುಶಲ ಕಾರ್ಮಿಕರು- ಮೇಸ್ತ್ರಿಗಳು, ಪ್ಲಂಬರುಗಳು, ಇಲೆಕ್ಟ್ರಿಶಿಯನ್, ಟ್ರ್ಯಾಕ್ಟರ್ ಚಾಲಕರು ಇವರ ವೇತನ ಕಳೆದ ಐದು ವರ್ಷಗಳಲ್ಲಿ ಮೂರು ವರ್ಷಗಳಲ್ಲಿ ಸರಾಸರಿ ಗ್ರಾಮೀಣ ವೇತನ ಏರಿಕೆ ಪ್ರಮಾಣಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ನಿರ್ಮಾಣ ಕ್ಷೇತ್ರದಲ್ಲೂ ಸರಾಸರಿ ವೇತನ ಏರಿಕೆ ಶೇ.4.38 ಆಗಿದ್ದರೆ, ಕೃಷಿಯೇತರ ಕ್ಷೇತ್ರಗಳಲ್ಲಿ ಶೇ.4.32 ಆಗಿದೆ.

ಸರಳವಾಗಿ ಹೇಳುವುದಾದರೆ ಗ್ರಾಮೀಣ ಭಾರತ ಎದುರಿಸುತ್ತಿರುವ ಸಮಸ್ಯೆ ಕೇವಲ ಕೃಷಿ ಕ್ಷೇತ್ರಕ್ಕೆ ಸೀಮಿತವಾಗದೆ ಇತರ ಕ್ಷೇತ್ರಗಳಿಗೂ ವ್ಯಾಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News